ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಕೊಣಾಜೆ: ಗಿಡವೊಂದು ಬೆಳೆದಲ್ಲಿ ವಾತಾವರಣದ ಸ್ವಾಸ್ಥ್ಯವನ್ನು ಕಾಪಾಡಲು ಸಾಧ್ಯವಿದ್ದು, ಈ ನಿಟ್ಟಿನಲ್ಲಿ ರೋಟರಿ ಕ್ಲಬ್ ದೇರಳಕಟ್ಟೆ ದಶಮಾನೋತ್ಸವ ಅಂಗವಾಗಿ ಒಂದು ದಿನದಲ್ಲಿ 1,000 ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು 2017-18 ನೇ ಸಾಲಿನ ರೋಟರಿ ಕ್ಲಬ್ ದೇರಳಕಟ್ಟೆಯ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಅಭಿಪ್ರಾಯಪಟ್ಟರು.
ಪರಿಸರ ಸಂರಕ್ಷಣೆ ಎಲ್ಲರ ಆದ್ಯ ಕರ್ತವ್ಯ. ಅದಕ್ಕೆ ಪೂರಕವಾಗಿ ವಿವಿಧ ಪ್ರದೇಶಗಳಲ್ಲಿ ಗಿಡಗಳನ್ನು ನೆಡುವ ಯೋಜನೆ ರೂಪಿಸಲಾಗಿದೆ. ಪರಿಸರ ಪ್ರೇಮಿ ಮತ್ತು ಸದಸ್ಯರ ಪಾಲ್ಗೊಳ್ಳುವಿಕೆಯಿಂದ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಕೆಗಳಲ್ಲೂ ರೋಟರಿ ಕ್ಲಬ್ ಪಾಲ್ಗೊಳ್ಳುವ ಯೋಚನೆ ಮಾಡಲಾಗಿದೆ ಎಂದರು.
ಧಾರ್ಮಿಕ ಮುಖಂಡ ಸುದರ್ಶನ್ ಭಟ್ ಮಾತನಾಡಿ ಸದ್ಯ ನಾಗಬನಗಳು ನಾಗನ ಕಟ್ಟೆಯಾಗಿ ಪರಿವರ್ತನೆಗೊಳ್ಳುತ್ತಿದೆ. ಕಟ್ಟೆಗಳನ್ನು ಕಟ್ಟುವ ಸಂದರ್ಭ ಸುತ್ತಲಿರುವ ಗಿಡಮರಗಳನ್ನು ಕಡಿಯಲಾಗುತ್ತಿದೆ. ಆದರೆ ವಾಸ್ತವವಾಗಿ ನಾಗದೇವರು ಇರುವ ಸಾನಿಧ್ಯ ವನದಂತೆ ಇರಬೇಕಿದ್ದು, ಇದಕ್ಕೆ ಪೂರಕವಾಗಿ ಇಂದು ರೋಟರಿ ಕ್ಲಬ್ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ಈ ಸಂದರ್ಭ ಪರಿಸರ ಪ್ರೇಮಿ ಮಾಧವ ಉಳ್ಳಾಲ್, ಲಯನ್ಸ್ ಕ್ಲಬ್‍ನ ಪ್ರಸಾದ್ ರೈ ಕಲ್ಲಿಮಾರ್, ರೋಟರಿ ಕ್ಲಬ್ ಕಾರ್ಯದರ್ಶಿ ಜೆ.ಪಿ.ರೈ, ರೋಟರಿ ಮಾಜಿ ಗವರ್ನರ್ ವಿಕ್ರಂ ದತ್ತಾ, ಡಾ.ಅನಂತನ್, ದಶಮಾನ ಸಮಿತಿ ಅಧ್ಯಕ್ಷ ಪಿ.ಡಿ.ಶೆಟ್ಟಿ, ರೋಟರಿ ಕ್ಲಬ್ ದೇರಳಕಟ್ಟೆಯ ರಾಮಕೃಷ್ಣ ನಾಯಕ್, ಲತೀಶ್, ಚಂದ್ರಶೇಖರ್, ಶ್ರೀಪ್ರಸಾದ್ ಆಳ್ವ, ಪುರುಷೋತ್ತಮ್ ಅಂಚನ್ , ಡಿ.ಎನ್.ರಾಘವ ಮುಖ್ಯ ಅತಿಗಳಾಗಿದ್ದರು.
ಔಷಧೀಯ ಹಾಗೂ ಹೆಚ್ಚು ಆಮ್ಲಜನಕವನ್ನು ನೀಡುವಂತಹ ಗಿಡಗಳನ್ನು ನಾಗನ ಕಟ್ಟೆಯ ಸುತ್ತಲೂ ನೆಡುವ ಯೋಜನೆ ರೂಪಿಸಲಾಗಿದೆ. ರಕ್ತಚಂದನ, ಸಂಪಿಗೆ, ಅರ್ಜುನ, ಕೆಂಡಸಂಪಿಗೆ, ಹೊಳೆದಾಸವಾಳ, ಸೀತಶೋಕ, ರೆಂಜ, ಸಾಗುವಾಣಿಯ ಒಟ್ಟು 65 ಗಿಡಗಳನ್ನು ಕಟ್ಟೆಯ ಸುತ್ತಲೂ ನೆಟ್ಟು, ಮತ್ತೆ ನಾಗದೇವರ ಸಾನಿಧ್ಯಕ್ಕೆ ವನದ ರೂಪವನ್ನು ಕೊಡುವ ಪ್ರಯತ್ನ ಇದಾಗಿದೆ.
ಮಾಧವ ಉಳ್ಳಾಲ್
ಪರಿಸರ ಪ್ರೇಮಿ