Site icon Ullalavani

ತಿಂಗಳಿಗೆ 3,800 ರೂ ಬಾಡಿಗೆಗಿದ್ದ ಅಂಗಡಿ ರೂ. 1,66,500 ಏಲಂ !

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಉಳ್ಳಾಲ: ಬೆಳ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಖ್ಯಪೇಟೆ ದೇರಳಕಟ್ಟೆಯಲ್ಲಿದ್ದಂತಹ ಕೋಳಿ ಮಾರಾಟದ ಅಂಗಡಿಯೊಂದು ಬರೋಬ್ಬರಿ ರೂ. 1,66,500 ನ ಮಾಸಿಕ ಬಾಡಿಗೆಗೆ ಏಲಂ ಮೂಲಕ ಹರಾಜಾಗಿದೆ. ಹಿಂದೆ ಪಂಚಾಯಿತಿಗೆ ಅಂಗಡಿಯಿಂದ 3,500 ರೂ. ಬಾಡಿಗೆ ಮಾತ್ರ ದೊರೆಯುತಿತ್ತು.

ದೇರಳಕಟ್ಟೆ ಜಂಕ್ಷನ್ನಿನಲ್ಲಿ ಇರುವ ಬೆಳ್ಮ ಪಂಚಾಯಿತಿಗೆ ಸೇರಿದ 31 ಅಂಗಡಿಗಳ ಏಲಂ ಪ್ರಕ್ರಿಯೆ ಗುರುವಾರ ರತ್ನ ಸಭಾಂಗಣದಲ್ಲಿ ನಡೆಯಿತು. 31 ಅಂಗಡಿಗಳಲ್ಲಿ 21 ಅಂಗಡಿಗಳು ಏಲಂ ನಲ್ಲಿ ಹರಾಜಾಯಿತು. ಇದರಲ್ಲಿ ಸಾಮಾನ್ಯ ವರ್ಗದವರಿಗೆ 24 ಅಂಗಡಿಗಳು ಹಾಗೂ ಶೇ.25ರ ಮೀಸಲಾತಿಯಂತೆ ಪರಿಶಿಷ್ಟ ಪಂಗಡದವರಿಗೆ 2 ಹಾಗೂ ಪರಿಶಿಷ್ಟ ಜಾತಿಯವರಿಗೆ ಇದ್ದಂತಹ 5 ಅಂಗಡಿಗಳಲ್ಲಿ ಅಭ್ಯರ್ಥಿಗಳಿಲ್ಲದೆ ಒಂದು ಅಂಗಡಿ ಮಾತ್ರ ಹರಾಜಾಗಿದೆ. ಉಳಿದ 4 ಅಂಗಡಿಗಳು ಬಾಕಿ ಉಳಿದಿದ್ದು, ಅವುಗಳ ಮರು ಹರಾಜು ನಡೆಯಬೇಕಿದೆ.

`ದುಬಾರಿ ಬೆಲೆಗೆ ಏಲಂ’ : ಅಂಗಡಿ ಸಂಖ್ಯೆ 10, ದೇರಳಕಟ್ಟೆ ಮಸೀದಿ ಎದುರುಗಡೆಯಿರುವ ಕೋಳಿ ಅಂಗಡಿಯ ಮಾಸಿಕ ಬಾಡಿಗೆ ಸಾವಿರದಿಂದ ಲಕ್ಷಕ್ಕೆ ತಲುಪಿತು. ಕಳೆದ 30 ವರ್ಷಗಳಿಂದ ಆಲ್ವಿನ್ ಡಿಸೋಜಾ ಎಂಬವರು ಶೇ.20-25ರವರೆಗೆ ಏರಿಕೆಯಾದ ರೂ. 3,800 ರೂ ಬಾಡಿಗೆಯಿದ್ದ 100 ಚದರ ಅಡಿಯಲ್ಲಿನ ಕೋಳಿ ಅಂಗಡಿಯನ್ನು, ಅಡ್ಕರೆ ನಿವಾಸಿ ಹೈದರ್ ಎಂಬವರು ರೂ. 1,66,500 ದುಬಾರಿ ಬೆಲೆಯ ಬಾಡಿಗೆಯನ್ನು ಘೋಷಿಸಿ ಏಲಂ ಮೂಲಕ ಪಡೆದುಕೊಂಡರು. ಇದರ ಜತೆಗೆ ಅಲ್ಲೇ ಸಮೀಪ ರೂ. 2,160 ಬಾಡಿಗೆಗೆ ಇದ್ದಂತಹ ಮೀನು ಮಾರುಕಟ್ಟೆ, ಮಂಜನಾಡಿ ನಿವಾಸಿ ಇಬ್ರಾಹಿಂ ಎಂಬವರಿಗೆ ರೂ. 1,12,200 ಮಾಸಿಕ ಬಾಡಿಗೆಗೆ ಹರಾಜಾಯಿತು.

ಉಳಿದಂತೆ ಅಬ್ದುಲ್ ಡಿ ಎಂಬವರಿಗೆ 33,600 ರೂ., ಮಹಮ್ಮದ್ ಆಸಿಫ್ 26,000 ರೂ., ನಝರ್ ಷಾ ಪಟ್ಟೋರಿ 30,000 ರೂ. , ಮಹಮ್ಮದ್ ಅಶ್ರಫ್ 25,000 ರೂ. , ನಝರ್ ಷಾ 26,200, ಪರಿಶಿಷ್ಟ ಪಂಗಡದ ನಂದಿನಿ 10,200 ರೂ. , ಅಬ್ದುಲ್ ಸತ್ತಾರ್ 41,100 ರೂ., ಮಹಮ್ಮದ್ ರಫೀಕ್ 27,500 ರೂ. , ಇಬ್ರಾಹಿಂ 1,12,000 ರೂ., ಹೈದರ್ 1,60,000 ರೂ., ರಾಮಕೃಷ್ಣ 5,100 ರೂ. , ಇಬ್ರಾಹಿಂ 17,500 ರೂ. , ಮೊಯ್ದೀನ್ ಕುಂಞ 11,200 ರೂ., ವಿಜೇತ ಸನತ್ 17,100 ರೂ. , ಶೇಖಬ್ಬ 10,500 ರೂ., ಉಸ್ಮಾನ್ 15,000 ರೂ., ಹಮೀದ್ 16,000 ರೂ., ನಝೀರ್ ಹುಸೈನ್ 38,100 ರೂ., ಉಲೈಮಾನ್ 18,100 ರೂ, ಇಬ್ರಾಹಿಂ 21,500 ರೂ. , ಪಿ.ಮಹಮ್ಮದ್ 30,000 ರೂ., ಅಬ್ದುಲ್ ಅಝೀಝ್ 6,600 ರೂ., ಇಬ್ರಾಹಿಂ 12,500 ರೂ., ಯಹ್ಯಾ 75,200 ರೂ, ಪರಿಶಿಷ್ಟ ಜಾತಿಯ ಕೆ.ಎನ್ ಚಂದ್ರಹಾಸ್ 5,100 ರೂ., , ಅಬೂಬಕರ್ 15,300 ರೂ., ಇರ್ಷಾದ್ 38,300 ರೂ. ಎಂಬವರಿಗೆ ಮಾಸಿಕ ವೇತನದಂತೆ ಅಂಗಡಿಗಳು ಹರಾಜಾಯಿತು.

ದೇರಳಕಟ್ಟೆ ಜಂಕ್ಷನ್ ಬಹಳಷ್ಟು ಅಭಿವೃದ್ಧಿ ಹೊಂದಿದ ಪ್ರದೇಶವಾಗಿದೆ. ಖಾಸಗಿ ಆಸ್ಪತ್ರೆಗಳ ಸ್ಥಾಪನೆ ಬಳಿಕ ವಸತಿ, ವಾಣಿಜ್ಯ ಸಂಕೀರ್ಣಗಳು ತಲೆ ಎತ್ತಿನಿಂತ ಘಳಿಗೆಯಿಂದ ವ್ಯಾಪಾರ ವಹಿವಾಟು ಉತ್ತಮವಾಗಿ ನಡೆಯುತ್ತಲೇ ಬಂದಿದೆ. ಬೆಳ್ಮ ಪಂಚಾಯಿತಿಗೆ ಸೇರಿದ 31 ಅಂಗಡಿಗಳು ಪ್ರಮುಖ ಸ್ಥಳಗಳಲ್ಲಿ ಕಾರ್ಯಚಾರಿಸುತ್ತಿದ್ದರೂ ಹಿಂದಿನಿಂದ ಮೊದಲು ಬಾಡಿಗೆಗೆ ಪಡೆದುಕೊಂಡವರಿಗೆ ಪ್ರತಿವರ್ಷವೂ ಶೇ.20-25ರವರೆಗೆ ಬಾಡಿಗೆ ಏರಿಸುತ್ತಲೇ ಪಂಚಾಯಿತಿ ಬಂದಿತ್ತು. ಆದರೆ ಪ್ರಥಮ ಬಾರಿಗೆ ಕರ್ನಾಟಕ ಪಂಚಾಯತ್‍ರಾಜ್ ಅಧಿನಿಯಮ ಪ್ರಕಾರ ಪಂಚಾಯಿತಿ ಇಲ್ಲಿನ ಅಭಿವೃದ್ಧಿ ಅಧಿಕಾರಿಗಳು , ಜಿಲ್ಲಾ ಪಂಚಾಯಿತಿ ಆದೇಶದನ್ವಯ ಎಂಟು ತಿಂಗಳುಗಳ ಹಿಂದೆಯೇ ಏಲಂ ಪ್ರಕ್ರಿಯೆ ಕೈಗೊಂಡಿದ್ದರು. ಆದರೆ ಅಂಗಡಿ ಮಾಲೀಕರು ಜಿಲ್ಲಾ ಪಂಚಾಯಿತಿಗೆ ಮತ್ತು ಪಂಚಾಯಿತಿಗೆ ಶೀಘ್ರವೇ ಏಲಂ ನಡೆಸದಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಮೂರು ಬಾರಿ ಕೈಗೊಳ್ಳಲಾಗಿದ್ದ ಏಲಂ ಪ್ರಕ್ರಿಯೆ ರದ್ದುಗೊಂಡಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತಿನ ಜತೆಗೆ ಗುರುವಾರ ಏಲಂ ಪ್ರಕ್ರಿಯೆ ನಡೆಯಿತು.

ಪಂಚಾಯಿತಿ ಅಂಗಡಿಗಳ ಸ್ಥಾಪಿಸುವ ಮುನ್ನ ಇದ್ದಂತಹ ಗೂಡಂಗಡಿಯವರಿಗೆ ಅಂಗಡಿ ಕೊಡುವುದಾಗಿ ತಿಳಿಸಿದ್ದ ಆಗಿನ ಆಡಳಿತ ಅದನ್ನು ನೀಡದೆ ವಂಚಿಸಿದ್ದಾರೆ. ಏಲಂ ನಡೆಸುವ ಮೂಲಕವೂ ಮೂಲ ಅಂಗಡಿಯಿದ್ದವರಿಗೆ ತೊಂದರೆಯಾಗಲಿದೆ . ಏಕಾಏಕಿ ನಡೆಸುವ ಏಲಂನಿಂದಾಗಿ ಸ್ಥಳದಲ್ಲಿ ಸೌಹಾರ್ದತೆಗೂ ಧಕ್ಕೆಯುಂಟಾಗಲಿದೆ. ಅದಕ್ಕಾಗಿ ಏಲಂ ನಡೆಸಬಾರದು ಅನ್ನುವ ಆರೋಪವೂ ಕೇಳಿಬಂತು. ಆದರೂ ಆಡಳಿತ ಸಮಿತಿ ಏಲಂ ಪ್ರಕ್ರಿಯೆಯನ್ನು ಆರಂಭಿಸಿತು.

ಏಲಂ ಸಭೆಯ ಅಧ್ಯಕ್ಷತೆಯನ್ನು ಬೆಳ್ಮ ಗ್ರಾ.ಪಂ ಅಧ್ಯಕ್ಷೆ  ವಿಜಯ ಕೃಷ್ಣಪ್ಪ ವಹಿಸಿದ್ದರು. ಉಪಾಧ್ಯಕ್ಷ ಅಬ್ದುಲ್ ಸತ್ತಾರ್, ಅಭಿವೃದ್ಧಿ ಅಧಿಕಾರಿ ನವೀನ್ ಹೆಗ್ಡೆ ಉಪಸ್ಥಿತರಿದ್ದರು.

20 ದಿನಗಳ ಹಿಂದೆಯೇ ಏಲಂ ಪ್ರಕಟಣೆಯನ್ನು ಪತ್ರಿಕೆ, ಬ್ಯಾನರ್, ಪಂಚಾಯಿತಿ ನೋಟೀಸು ಬೋರ್ಡಿನಲ್ಲಿ ಪ್ರಕಟಿಸಲಾಗಿತ್ತು. ಅರ್ಜಿ ಸಲ್ಲಿಸಿದವರಿಗೆ ಏಲಂನಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಮೂರು ಬಾರಿ ಏಲಂ ಪ್ರಕ್ರಿಯೆ ರದ್ದುಗೊಂಡಿದ್ದ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತನ್ನು ಪಡೆಯಲಾಗಿದೆ. ನ್ಯಾಯಯುತವಾಗಿ ಏಲಂ ಪ್ರಕ್ರಿಯೆ ನಡೆದಿದೆ. ಎರಡು ದಿನದೊಳಗೆ ಠೇವಣಿ ಪಾವತಿಸಿ ಮೂರು ತಿಂಗಳುಗಳ ಕಾಲ ಬಾಡಿಗೆಗೆ ಅವಕಾಶ ನೀಡಲಾಗುವುದು. ಅಷ್ಟರಲ್ಲಿ ಪಾವತಿಸದೇ ಇದ್ದಲ್ಲಿ ಪಂಚಾಯಿತಿ ವತಿಯಿಂದ ಶಿಸ್ತು ಕ್ರಮಕೈಗೊಳ್ಳಲಾಗುವುದು.
ನವೀನ್ ಹೆಗ್ಡೆ
ಅಭಿವೃದ್ಧಿ ಅಧಿಕಾರಿ
ಬೆಳ್ಮ ಪಂಚಾಯತ್

Exit mobile version