Site icon Ullalavani

ಉಳ್ಳಾಲ: ಇಂದಿನಿಂದ ಗಂಜಿ ಕೇಂದ್ರ ಆರಂಭ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಉಳ್ಳಾಲ : ಉಳ್ಳಾಲದಲ್ಲಿ ಸಮುದ್ರದ ಬಿರುಸು ಮುಂದುವರೆದಿದ್ದು, ಸಮುದ್ರದ ಅಲೆಗಳು ಮನೆಗಳಿಗೆ ಅಪ್ಪಳಿಸುತ್ತಿದ್ದು ಸ್ಥಳೀಯವಾಗಿ ತಾತ್ಕಾಲಿಕ ಕಾಮಗಾರಿ ನಡೆಯುತ್ತಿದ್ದು, ಇಂದಿನಿಂದ ಎರಡು ಗಂಜಿ ಕೇಂದ್ರಗಳು ಕಾರ್ಯ ನಿರ್ವಹಿಸಲಿವೆ.

ಉಳ್ಳಾಲದ ಮೊಗವೀರಪಟ್ಣ, ಕೈಕೋ, ಕಿಲಿರಿಯಾ ನಗರ, ಸುಭಾಷ್‍ನಗರ, ಸೋಮೇಶ್ವರ ಉಚ್ಚಿಲದಲ್ಲಿ ಗುರುವಾರವೂ ಬಿರುಸುಗೊಂಡಿದ್ದು, ಸಮುದ್ರ ತೀರದ ಮನೆಗಳ ಕುಟುಂಬದ ಸದಸ್ಯರು ತಮ್ಮ ಸಂಬಂಧಿಕರ ಮನೆ ಸೇರಿದಂತೆ ನೆರೆಮನೆಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.

ಉಳ್ಳಾಲ ಮೊಗವೀರಪಟ್ಣ ಮತ್ತು ಕೈಕೋ, ಕಿಲಿರಿಯಾನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ ಕಡಲ್ಕೊರೆತ ಪೀಡಿತ ಮನೆಯ ಕುಟುಂಬಕ್ಕೆ ಎರಡು ಗಂಜಿ ಕೇಂದ್ರವನ್ನು ಸ್ಥಾಪಿಸಲಾಗಿದ್ದು ಶುಕ್ರವಾರದಿಂದ ಕಾರ್ಯ ನಿರ್ವಹಿಸಲಿದೆ. ಮೊಗವೀರಪಟ್ಣ ಶಾಲೆಯಲ್ಲಿ ಗಂಜಿ ಕೇಂದ್ರಕ್ಕೆ ಸ್ಥಳ ಗುರುತಿಸಿದ್ದು, ಇನ್ನೊಂದು ಗಂಜಿ ಕೇಂದ್ರ ಒಂಭತ್ತುಕೆರೆ ಸರಕಾರಿ ಶಾಲೆಯಲ್ಲಿ ವ್ಯವಸ್ಥೆ ಮಾಡಲಾಗಿದೆ.

ತಾತ್ಕಾಲಿಕ ತಡೆಗೋಡೆ : ಕಡಲ್ಕೊರೆತ ಪೀಡಿತ ಪ್ರದೇಶಗಳಲ್ಲಿ ತಾತ್ಕಾಲಿಕ ಕ್ರಮವಾಗಿ ತಡೆಗೋಡೆ ಕಾಮಗಾರಿ ನಡೆಯುತ್ತಿದ್ದು, ಕಲ್ಲುಗಳನ್ನು ಹಾಕಲಾಗುತ್ತಿದೆ. ಸೋಮೇಶ್ವರ ಉಚ್ಚಿಲ, ಕೈಕೋ, ಕಿಲಿರಿಯಾನಗರದಲ್ಲಿ ಸಮುದ್ರ ತೀರದಲ್ಲಿ ಕಲ್ಲು ಹಾಕುವ ಕಾರ್ಯ ಭರದಿಂದ ಸಾಗಿದೆ. ಗುರುವಾರವೂ ಸಹಾಯಕ ಕಮಿಷನರ್ ರೇಣುಕಾ ಪ್ರಸಾದ್, ತಹಶೀಲ್ದಾರ್ ಸಿ. ಮಹಾದೇವ, ಉಳ್ಳಾಲ ನಗರಸಭಾ ಪೌರಾಯುಕ್ತೆ ವಾಣಿ.ವಿ. ಆಳ್ವ ಉಳ್ಳಾಲದಲ್ಲಿ ಪ್ರಾರಂಭಗೊಳ್ಳಲಿರುವ ಗಂಜಿ ಕೇಂದ್ರಗಳ ಪರಿಶೀಲನೆ ನಡೆಸಿದರು.

Exit mobile version