ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಳ್ಳಾಲ: ದರ್ಗಾ ಸಂದರ್ಶನೆಕ್ಕೆಂದು ಉಳ್ಳಾಲಕ್ಕೆ ಬಂದಿದ್ದ ತುಮಕೂರು ಶಿರಾ ಮೂಲದ ಹತ್ತು ಮಂದಿ ಯುವಕರಲ್ಲಿ ಐದು ಮಂದಿ ಮೊಗವೀರಪಟ್ಣ ಬೀಚ್ ಬಳಿ ಸಮುದ್ರದ ಅಲೆಗಳಿಗೆ ಸಿಲುಕಿದ್ದು, ಇಬ್ಬರು ಸಮುದ್ರ ಪಾಲಾದರೆ, ಮೂವರು ಅಪಾಯದಿಂದ ಪಾರಾಗಿದ್ದಾರೆ.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ರಬ್‍ನಗರ ಮೊಹಲ್ಲಾದ ಮಗೀರ್ ರಸ್ತೆ ನಿವಾಸಿಗಳಾದ ಜಲೀಲ್ ಎಂಬವರ ಪುತ್ರ ಶಾರುಖ್ ಖಾನ್ (19) ಮತ್ತು ಸಿದ್ದೀಖ್ ಎಂಬವರ ಪುತ್ರ ಚೋಟು ಯಾನೆ ಹಯಾಝ್ (20) ಸಮುದ್ರಪಾಲಾದವರು. ಸಾದಿಕ್ ಹಬೀಬ್, ವಸೀಂ ಉಳ್ಳಾಲದ ಸರೋಜ್ ಆಸ್ಪತ್ರೆಯಲ್ಲಿ ಚೇತರಿಸುತ್ತಿದ್ದಾರೆ.
ಸ್ಥಳೀಯರನ್ನು ಕಡೆಗಣಿಸಿದ್ದರು : ಸಮುದ್ರದ ಅಲೆಗಳೊಂದಿಗೆ ಆಟವಾಡುತ್ತಿದ್ದಾಗ ಸ್ಥಳೀಯ ಜೀವರಕ್ಷಕ ಈಜುಗಾರರಾದ ವಾಸುದೇವ ಬಂಗೇರ ಮತ್ತು ಪ್ರಸಾದ್ ಸುವರ್ಣ ಬಂದು ಎಚ್ಚರಿಕೆ ನೀಡಿದ್ದರು ಆದರೆ ಈ ತಂಡ ಅವರ ಎಚ್ಚರಿಕೆಯನ್ನು ಕಡೆಗಣಿಸಿದ್ದು, ಕೆಲ ಸಮಯದಲ್ಲೇ ಬೊಬ್ಬೆ ಕೇಳಿದಾಗ ಈ ಘಟನೆ ಅರಿವಾಗಿದೆ. ಆದರೆ ಆ ಹೊತ್ತಿಗಾಗಲೇ ಇಬ್ಬರು ಸಮುದ್ರ ಪಾಲಾಗಿದ್ದರು. ಸಮುದ್ರಪಾಲಾದವರಲ್ಲಿ ಶಾರುಖ್ ತುಮಕೂರು ಸಮೀಪ ಮಾಂಸದ ಅಂಗಡಿ ಹೊಂದಿದ್ದರೆ, ಹಯಾಝ್ ಗಾರೆ ಕೆಲಸ ಮಾಡುತ್ತಿದ್ದಾರೆ. ಶಾರೂಖ್ ಅವರು ಮೂವರು ಸಹೋದರ, ಓರ್ವ ಸಹೋದರಿಯನ್ನು ಅಗಲಿದ್ದು, ಹಯಾಝ್ ಮೂವರು ಸಹೋದರರು, ಮೂವರು ಸಹೋದರಿಯರನ್ನು ಅಗಲಿದ್ದು ಇಬ್ಬರ ಕುಟುಂಬದ ಸದಸ್ಯರು ತುಮಕೂರಿನಿಂದ ಮಂಗಳೂರಿಗೆ ಆಗಮಿಸುತ್ತಿದ್ದಾರೆ.
ಮೃತದೇಹಕ್ಕೆ ಹಗ್ಗ ಕಟ್ಟಿದ ಮುಳುಗು ತಜ್ಞರು : ಸಮುದ್ರ ಪಾಲಾಗಿರುವ ಶಾರುಖ್ ಪತ್ತೆ ಕಾರ್ಯ ಮುಂದುವರೆದಿದ್ದು, ಕಲ್ಲಿನೆಡೆಯಲ್ಲಿ ಸಿಲುಕಿರುವ ಹಯಾಝ್ ಮೃತದೇಹ ಮೇಲೆತ್ತಲು ಪ್ರಯತ್ನ ಸಾಗಿದೆ. ಕಲ್ಲಿನೆಡೆಯಲ್ಲಿ ಸಿಲುಕಿಕೊಂಡಿರುವ ಮೃತ ದೇಹ ತೆಗೆಯಲು ಅಗ್ನಿಶಾಮಕ ದಳ, ಹೋಮ್‍ಗಾಡ್ರ್ಸ್‍ನ ಮುಳುಗು ತಜ್ಞರೊಂದಿಗೆ ಶಿವಾಜಿ ಜೀವರಕ್ಷಕ ಈಜುಗಾರರ ಸಂಘದ ಸದಸ್ಯರಾದ ಯೋಗೀಶ್ ಅಮೀನ್ ರಾಜೇಶ್ ಪುತ್ರನ್, ಅಶ್ವಿನ್, ರವಿ, ಲತೀಶ್ , ಯಶ್‍ಪಾಲ್, ವಾಸುದೇವ್ ಹರೀಶ್ ಪ್ರಸಾದ್ ಸುವರ್ಣ, ಮೋಹನ್, ಹೋಮ್ ಗಾರ್ಡ್ಸ್‍ನ ತಣ್ಣೀರು ಬಾವಿ ಜೀವರಕ್ಷಕರಾದ ಮಹಮ್ಮದ್ ವಾಸಿಂ, ಹಸನ್, ಜಾಕೀರ್, ಜಾವೀದ್, ಸಾದಿಕ್, ಇಮ್ರಾನ್ , ವಿಜಿತ್, ಲಿಂಗಪ್ಪ, ಸನತ್ ಶ್ರಮಿಸುತ್ತಿದ್ದಾರೆ. ಈ ತಂಡ ಅಲೆಗಳ ನಡುವೆ ಮೃತದೇಹದ ಬಳಿ ಹಗ್ಗ ಕಟ್ಟಿ ಬಂದಿದ್ದು, ಗುರುವಾರ ಬೆಳಗ್ಗೆ ಸಮುದ್ರದ ಹರಿವು ಕಡಿಮೆಯಾಗುವ ಸಂದರ್ಭದಲ್ಲಿ ಮೇಲೆತ್ತುವ ಸಾಧ್ಯತೆ ಇದೆ.
ಸ್ಥಳದಲ್ಲಿ ಉಳ್ಳಾಲ ಇನ್ಸ್‍ಪೆಕ್ಟರ್ ಗೋಪಿಕೃಷ್ಣ , ಎಸ್‍ಐಗಳಾದ ರಾಜೇಂದ್ರ, ಪ್ರಕಾಶ್, ಹೋಮ್‍ಗಾಡ್ರ್ಸ್ ಜಿಲ್ಲಾ ಕಮಾಂಡೆಂಟ್ ಡಾ| ಮುರಳಿ ಮೋಹನ ಚೂಂತಾರು, ಮೂಲ್ಕಿ ಅಧಿಕಾರಿ ಮನ್ಸೂರು ಸಹಾಯಕ ಕಮಿಷನರ್ ರೇಣುಕಾ ಪ್ರಸಾದ್, ತಹಶೀಲ್ದಾರ್ ಸಿ. ಮಹಾದೇವ, ಕಂದಾಯ ಅಧಿಕಾರಿ ಜೋಸ್ಲಿನ್ ಸ್ಟೀಫನ್, ಪ್ರಮೋದ್ ಕುಮಾರ್, ಉಳ್ಳಾಲ ನಗರಸಭಾ ಅಧ್ಯಕ್ಷ ಹುಸೈನ್ ಕುಂಞಮೋನು, ವಾಣಿ. ಆಳ್ವ ಸ್ಥಳಕ್ಕೆ ಭೇಟಿ ನೀಡಿದ್ದು, ಉಳ್ಳಾಲ ಪೊಲೀಸರು, ಹೋಮ್‍ಗಾಡ್ರ್ಸ್ ಜನರನ್ನು ಸಮುದ್ರದ ಬಳಿ ತಲುಪದಂತೆ ವ್ಯವಸ್ಥೆಯನ್ನು ಮಾಡಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.