ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಳ್ಳಾಲ: ಉಳ್ಳಾಲದಲ್ಲಿ ರಂಝಾನ್ ಆಚರಣೆಯ ದಿನದ ವಿವಾದಕ್ಕೆ ಸಂಬಂಧಿಸಿ ಸೋಮವಾರ ಸೈಯ್ಯಿದ್ ಮದನಿ ದರ್ಗಾ ದಲ್ಲಿ ಮತ್ತೆ ಈದ್ ನಮಾಜಿಗೆ ಆಡಳಿತ ಮಂಡಳಿ ಅವಕಾಶ ಮಾಡಿಕೊಡದ ಹಿನ್ನೆಲೆಯಲ್ಲಿ ತಂಡವೊಂದು ಆಡಳಿತ ಸಮಿತಿ ಸದಸ್ಯ ಸೇರಿದಂತೆ ದರ್ಶನಕ್ಕೆ ಬಂದಿದ್ದ ಯುವಕನ ಮೇಲೆ ಹಲ್ಲೆಗೈದಿರುವ ಘಟನೆ ನಡೆದಿದ್ದು, ಗಲಾಟೆಯನ್ನು ಚದುರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿದ್ದಾರೆ. ಘಟನೆ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎರಡು ಕೊಲೆಯತ್ನ ಹಾಗೂ ಒಂದು ಅಕ್ರಮ ಪ್ರವೇಶ ಸೊತ್ತುಗಳಿಗೆ ಹಾನಿ ಕುರಿತು ಪ್ರಕರಣ ದಾಖಲಾಗಿದೆ.
ಉಳ್ಳಾಲ ಖಾಝಿಯವರ ನಿರ್ಣಯವನ್ನೇ ಪಾಲಿಸಬೇಕಿತ್ತು. ಏಕಾಏಕಿ ಸರ್ವರು ಸಂದರ್ಶನಕ್ಕೆ ಬರುವ ದರ್ಗಾ ಪ್ರಾರ್ಥನಾಲಯಕ್ಕೆ ಬೀಗ ಹಾಕಿ ದಬ್ಬಾಳಿಕೆ ನಡೆಸಿರುವುದು ಸಮಂಜಸವಲ್ಲ ಎಂದು ಆರೋಪಿಸಿದ ತಂಡ ದರ್ಗಾ ಹೊರಗಡೆಯೇ ನಿಂತು ಪ್ರತಿಭಟನಾ ಘೋಷಣೆಗಳನ್ನು ಕೂಗಿದರು. ಅದೇ ಸಂದರ್ಭ ದರ್ಗಾ ಆವರಣದಲ್ಲಿದ್ದ ಆಡಳಿತ ಸಮಿತಿ ಸದಸ್ಯ ಮಹಮ್ಮದ್ ಅಳೇಕಲ (40) ಎಂಬವರನ್ನು ಸುಮಾರು 30 ಜನರ ಗುಂಪು ಯದ್ವಾತದ್ವ ಥಳಿಸಿದ್ದು, ಇದನ್ನು ತಡೆಯಲು ಬಂದ ಮಾಸ್ತಿಕಟ್ಟೆ ನಿವಾಸಿ ಮಹಮ್ಮದ್ ರಿಲ್ವಾನ್ (28) ಎಂಬವರ ಮೇಲೂ ತಂಡ ಮುಗಿಬಿದ್ದು ಗಂಭೀರವಾಗಿ ಹಲ್ಲೆ ನಡೆಸಿದೆ. ಸ್ಥಳಕ್ಕಾಗಮಿಸಿದ ಉಳ್ಳಾಲ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದರು. ಗುಂಪನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದರು. ಬಳಿಕ ಆಡಳಿತ ಸಮಿತಿಯ ಜತೆಗೆ ಮಾತುಕತೆ ನಡೆಸಿ ಬೀಗ ತೆಗೆದು ನಮಾಜಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದರಿಂದಾಗಿ ಕೇಂದ್ರ ಜುಮಾ ಮಸೀದಿಯಲ್ಲಿ ಎರಡನೇ ಬಾರಿ ಈದ್ ನಮಾಝ್ ನಡೆಸಿದ
ಪ್ರಸಂಗ ಜರಗಿತು.
ಸ್ಥಳಕ್ಕೆ ಡಿಸಿಪಿ ಹನುಮಂತರಾಯ, ಎಸಿಪಿ ಶೃತಿ ಎನ್.ಆರ್, ಠಾಣಾಧಿಕಾರಿ ಗೋಪಿಕೃಷ್ಣ ಮತ್ತು ಪೊಲೀಸರ ತಂಡ ಬಂದೋಬಸ್ತಿನಲ್ಲಿ ಪಾಲ್ಗೊಂಡರು.