ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಚ್ಚಿಲ:ಅಪಘಾತದ ಲಾಭ ಪಡೆದುಕೊಂಡ ಐದು ಜನ ಕಿರಾತಕರ ತಂಡವೊಂದು ವಿದೇಶದಿಂದ ಮನೆಗೆ ವಾಪಸ್ಸಾಗುತ್ತಿದ್ದವನ ಸೇರಿ ಆತನನ್ನು ಮನೆಗೆ ಕರೆದುಕೊಂಡು ಹೋಗಲು ಬಂದವನನ್ನು ಅಪಹರಿಸಿ ಐದು ಲಕ್ಷ ರೂ. ಬೇಡಿಕೆಯಿಟ್ಟ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಉಚ್ಚಿಲದಲ್ಲಿ ನಡೆದಿದ್ದು, ನಿರಂತರ 3 ಗಂಟೆಗಳ ಕಾರ್ಯಾಚರಣೆ ಬಳಿಕ ಮಂಜೇಶ್ವರ ಹಾಗೂ ಉಳ್ಳಾಲ ಪೊಲೀಸರು ಜಂಟಿಯಾಗಿ ಅಪಹೃತನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆ ವಿವರ: ನಿನ್ನೆ ಮಧ್ಯಾಹ್ನ ಬಜಪೆ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದ ಅಶ್ರಫ್ ಅವರನ್ನು ಸಂಬಂಧಿ ತಾಹೀಝ್ ಹೋಂಡ ಸಿಟಿ ಕಾರಿನಲ್ಲಿ ಕೇರಳದ ಮನೆಗೆ ಕರೆದೊಯ್ಯುತ್ತಿದ್ದರು. ಈ ಸಂದರ್ಭ ಉಚ್ಚಿಲ ರಾ.ಹೆ.66ರಲ್ಲಿ ಕಾರು ಬೈಕಿಗೆ ಢಿಕ್ಕಿ ಹೊಡೆದಿತ್ತು. ಈ ವೇಳೆ ಬೈಕಿನಲ್ಲಿದ್ದವರು ಗಲಾಟೆಗೆ ಇಳಿದಿದ್ದು, ಬೈಕ್ ದುರಸ್ತಿಯ ಸಂಪೂರ್ಣ ವೆಚ್ಚಕ್ಕೆ ಒತ್ತಾಯಿಸಿದ್ದರು. ಇದಕ್ಕೆ ಅಶ್ರಫ್ ಒಪ್ಪಿಗೆ ಸೂಚಿಸುತ್ತಿದ್ದಂತೆ ಸ್ವಲ್ಪ ದೂರ ಬರುವಂತೆ ತಿಳಿಸಿದ್ದ ಬೈಕ್ ಸವಾರರು ಇತರೆ ಮೂವರ ಜತೆಗೆ ಸೇರಿಕೊಂಡು ತಾಹಿಝ್ ಮತ್ತು ಅಶ್ರಫ್ ಇಬ್ಬರನ್ನು ಗಟ್ಟಿಯಾಗಿ ಹಿಡಿದು ಅವರಿದ್ದ ಕಾರಿನೊಳಗೆ ಕೂಡಿಹಾಕಿ, ಓರ್ವ ಕಾರು ಚಲಾಯಿಸಲು ಮುಂದಾಗಿದ್ದ. ಈ ಸಂದರ್ಭ ಅವರಿಂದ ತಾಹಿಝ್ ತಪ್ಪಿಸಿ ಓಡಲು ಯತ್ನಿಸುತ್ತಿದ್ದಂತೆ ಆತನನ್ನು ಆರೋಪಿಗಳಿಬ್ಬರು ಹಿಂಬಾಲಿಸಿದಾಗ, ಇತ್ತ ಅಶ್ರಫ್ ಕೂಡಾ ತಪ್ಪಿಸಿಕೊಂಡಿದ್ದಾರೆ. ಆದರೆ ತಾಹಿಝ್ ರಕ್ಷಣೆಗೆಂದು ಅಜ್ಜಿನಡ್ಕ ಮಸೀದಿ ಒಳಗಡೆಯೂ ಓಡಿ ಬೊಬ್ಬಿಟ್ಟಿದ್ದಾರೆ. ಆದರೆ ಯಾರೂ ರಕ್ಷಣೆಗೆ ಮುಂದಾಗದೇ ಇದ್ದು, ತಾಹಿಝ್ ನನ್ನೇ ಕಾರಿನಲ್ಲಿ ಕುಳ್ಳಿರಿಸಿ ಅಪಹರಣ ನಡೆಸಿದ್ದಾರೆ. ತಪ್ಪಿಸಿಕೊಂಡ ಅಶ್ರಫ್ ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ವಿವರ ಪಡೆದುಕೊಂಡು ಕಾರಿನಲ್ಲಿದ್ದ ಜಿಪಿಎಸ್‍ನ ಮೂಲಕ ಅವರಿರುವ ಸ್ಥಳದ ಗುರುತು ಪತ್ತೆಹಚ್ಚಿದ್ದರು,. ಈ ನಡುವೆ ಅಪಹರಣಕಾರರು ಅಶ್ರಫ್ ಎ ಕರೆ ಮಾಡಿ ರೂ. 5 ಲಕ್ಷ ನೀಡುವಂತೆ ತಿಳಿಸಿ, ಆ ಬಳಿಕವೇ ತಾಹಿಝ್ ನನ್ನು ಬಿಡುಗಡೆಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದ್ದರು. ಅದಕ್ಕೆ ಪೊಲೀಸರ ಸಮ್ಮುಖದಲ್ಲಿ ಒಪ್ಪಿಕೊಂಡ ಅಶ್ರಫ್ ನನ್ನು ಹಣದ ಜತೆಗೆ ಕಡಂಬಾರು ಮಸೀದಿ ಬಳಿ ಬರಲು ತಿಳಿಸಿದ್ದರು. ಆದರೆ ಅಲ್ಲಿಗೆ ಪೊಲೀಸರು ಜತೆಗೆ ತೆರಳಿದಾಗ ಆರೋಪಿಗಳು ಅಲ್ಲಿಗೆ ಬಂದಿರಲಿಲ್ಲ. ಮತ್ತೆ ಬೇರಡೆ ಸ್ಥಳ ಹೇಳುವುದಾಗಿ ತಿಳಿಸಿದ್ದರು. ಅಷ್ಟರಲ್ಲಿ ಉಳ್ಳಾಲ ಪೊಲೀಸರು ಮಂಜೇಶ್ವರ ಪೊಲೀಸರ ಸಹಕಾರದೊಂದಿಗೆ ಕಾರನ್ನು ಕುಂಜತ್ತೂರು ಬಳಿ ಸಿನಿಮೀಯ ಶೈಲಿಯಲ್ಲಿ ಅಟ್ಟಾಡಿಸಿ ಎದುರುಬದುರಾಗಿ ತಡೆದು ಹಿಡಿಯುವಲ್ಲಿ ಸಫಲರಾದರು. ಆದರೆ ಅಷ್ಟರಲ್ಲಿ ಆರೋಪಿಗಳು ಪರಾರಿಯಾಗಿದ್ದರು. ಅಪಹೃತ ತಾಹಿಜ್ ನನ್ನು ಸುರಕ್ಷಿತವಾಗಿ ಉಳ್ಳಾಲ ಠಾಣೆಗೆ ಕರೆತರಲಾಗಿದೆ. ಆರೋಪಿಗಳೆಲ್ಲರೂ ಅಜ್ಜಿನಡ್ಕ ಮೂಲದವರೆಂದು ಪೊಲೀಸರು ಪತ್ತೆಹಚ್ಚಿ, ಅವರಿಗಾಗಿ ಬಲೆಬೀಸಿದ್ದಾರೆ.