Site icon Ullalavani

`ಅಣ್ಣೆ ಬರ್ಪೆಗೆ’ ಮತ್ತು `ಅಂಚಗೆ-ಇಂಚಗೆ’ ನಾಟಕಗಳಿಗೆ ಮುಹೂರ್ತ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ತಲಪಾಡಿ: ತುಳು ನಾಟಕ ರಂಗದಲ್ಲಿ ಪ್ರಸಿದ್ಧಿಯನ್ನು ಪಡೆದಿರುವ ಮಂಜೇಶ್ವರದ ಶಾರದಾ ಆರ್ಟ್ಸ್ ಕಲಾವಿದೆರ್ ಮತ್ತು ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದೆರ್ ಅವರ ನೂತನ ಕಲಾಕಾಣಿಕೆ `ಅಣ್ಣೆ ಬರ್ಪೆಗೆ’ ಮತ್ತು `ಅಂಚಗೆ-ಇಂಚಗೆ’ ನಾಟಕಗಳ ಮುಹೂರ್ತ ಕಾರ್ಯಕ್ರಮ ಕಡಂಬಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು.

ಗಡಿನಾಡ ಕಲಾನಿಧಿ ಕೃಷ್ಣ ಜಿ. ಮಂಜೇಶ್ವರ ರಚಿಸಿರುವ , ನವೀನ್ ಡಿ. ಪಡೀಲ್ ನಿರ್ದೇಶನದ `ಅಂಚಗೆ-ಇಂಚಗೆ’ ಹಾಗೂ ಸೋಮನಾಥ ಶೆಟ್ಟಿ ಮಂಗಲ್ಪಾಡಿ ರಚಿಸಿರುವ , ಕೃಷ್ಣ ಜಿ. ಮಂಜೇಶ್ವರ ನಿರ್ದೇಶಿಸಿರುವ `ಅಣ್ಣೆ ಬರ್ಪೆಗೆ’ ನಾಟಕಗಳು ತುಳುನಾಡ ಕಲಾಬಿರ್ಸೆ ದೀಪಕ್ ರೈ ಪಾಣಾಜೆ, ಸುಂದರ ರೈ ಮಂದಾರ ಅಭಿನಯದೊಂದಿಗೆ ನಾಟಕ ಮೂಡಿಬರಲಿದೆ.

ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿ ನಾಟಕಕ್ಕೆ ಮುಹೂರ್ತ ನೆರವೇರಿಸಿ ಮಾತನಾಡಿ ಕಲೆಯ ಮೇಲಿನ ಗೌರವ, ಕಲಿಕೆಯ ತುಡಿತ ಮತ್ತು ಶ್ರಮದಾಯಕ ಅಧ್ಯಯನವಿದ್ದರೆ ಶ್ರೇಷ್ಠ ಕಲಾವಿದನಾಗಿ ಹೊರಹೊಮ್ಮುವಲ್ಲಿ ಕಲಾಮಾತೆ ಅನುಗ್ರಹ ಇದ್ದೇ ಇದೆ. ಪೂರ್ಣ ಪ್ರಮಾಣದ ಪ್ರತಿಭೆ ಮತ್ತು ಶುದ್ಧ ಹೃದಯಗಳ ಮನಸ್ಸು ಕಲಾವಿದನನ್ನು ಮಿಂಚುವಂತೆ ಮಾಡುತ್ತದೆ. ತಂಡಗಳೊಳಗಿನ ಕಲಾವಿದರು ದೇಹದ ಎರಡು ಕಣ್ಣುಗಳಿದ್ದಂತೆ. ತಂಡದ ಎಲ್ಲ ಕಲಾವಿದರು ಒಗ್ಗಟ್ಟಿನಿಂದ ಪಾತ್ರ ನಿರ್ವಹಣೆಗೈದಾಗ ಯಶಸ್ವಿಯಾಗಿ ಕಥಾ ನಿರೂಪಣೆ ಪ್ರೇಕ್ಷಕನ ಮನಮುಟ್ಟುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ರ ಪರಸ್ಪರ ಹೊಂದಾಣಿಕೆ ಅಗತ್ಯ ಎಂದು ಹೇಳಿದರು. ಉತ್ತಮ ಸಂದೇಶ ನೀಡುವ ಕಥೆಗಳು ನಾಟಕಗಳ ಮೂಲಕ ಸಾಮಾಜಿಕ ಪರಿವರ್ತನೆಗೆ ಕಾರಣವಾಗುತ್ತದೆ. ಪ್ರೇಕ್ಷಕನಿಗೆ ಆ ಚಿಂತನೆ ನೀಡುವ ಪ್ರಬುದ್ಧತೆ ಕಲಾವಿದನಲ್ಲಿದ್ದರೆ ಯಶಸ್ವಿ ಕಲಾವಿದನಾಗಿ ಗುರುತಿಸಲ್ಪಡಲು ಸಾಧ್ಯ ಎಂದರು.

ಚಲನಚಿತ್ರ ನಟ ಮತ್ತು ತುಳು ರಂಗಭೂಮಿ ನಟ ಕುಸಲ್ದರಸೆ ನವೀನ್ ಡಿ’ಪಡೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿ ಕಲಾವಿದರ ವೈಯಕ್ತಿಕ ಮನೋಕ್ಲೇಶಗಳು ರಂಗದಲ್ಲಿ ಪಾತ್ರಗಳನ್ನು ನಿರ್ವಹಿಸುವಾಗ ಬಿಂಬಿತವಾಗದಂತೆ ಗಮನ ವಹಿಸುವಾಗ ಬಿಂಬಿತವಾಗದಂತೆ ಗಮನ ವಹಿಸುವ ಅಗತ್ಯ ಇದೆ. ತಂಡದೊಳಗೆ ಪರಸ್ಪರ ಪ್ರೀತಿ, ವಿಶ್ವಾಸ, ಗೌರವಗಳೊಂದಿಗೆ ನಡೆದುಕೊಂಡಾಗ  ಗೆಲುವು ಪಡೆಯಬಹುದು ಎಂದ ಅವರು ಪ್ರತಿಯೊಬ್ಬ ಕಲಾವಿದನ ಪಾತ್ರಗಳೂ ತಮ್ಮ ಪಾತ್ರದಷ್ಟೇ ಅಮೂಲ್ಯವೆಂಬ ಅರಿವು ತಂಡದ ಯಶಸ್ವಿಗೆ ನೆರವಾಗುತ್ತದೆ ಎಂದು ತಿಳಿಸಿದರು.

ಮೀಯಪದವು ವಿದ್ಯಾವರ್ಧಕ ಶಾಲೆಯ ನಿವೃತ್ತ ಶಿಕ್ಷಕ ಎಸ್.ಜಿ. ಕಣಿಯೂರು, ಮೀಯಪದವು ಶ್ರೀ ವಿದ್ಯಾವರ್ಧಕ ಶಾಲಾ ಪ್ರಬಂಧಕ ಡಾ| ಜಯ ಪ್ರಕಾಶ್ ನಾರಾಯಾಣ ತೊಟ್ಟೆತ್ತೋಡಿ, ಉದ್ಯಮಿ ಹಾಗೂ ಕಲಾಪೋಷಕ ನವೀನ್ ಅಮೀನ್ ಕಟಪಾಡಿ, ಶಂಕರಪುರ, ಬಿರ್ ವೆರ್ ಕುಡ್ಲದ ಸಂಸ್ಥಾಪಕ ಉದಯ ಪೂಜಾರಿ, ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದ ಗುರುಸ್ವಾಮಿ ಬಿ.ಎಂ. ಉಮೇಶ್, ಕಲಾಪೋಷಕ ಸತೀಶ್ ತಂಜರೆ, ಕಡಂಬಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರ ಎಸ್.ಎನ್. ಕಡಂಬಾರ್, ಹಿರಿಯ ರಂಗ ಕಲಾವಿದ ಕೋಳಾರು ಸತೀಶ್ಚಂದ್ರ ಭಂಡಾರಿ, ಉದ್ಯಾವರ ಮಾಡ ಅರಸು ಮಂಜಿಷ್ಣಾರ್ ದೈವಗಳ ಕ್ಷೇತ್ರದ ಅರ್ಚಕ ತಿಮ್ಮಪ್ಪ ಕಾಂಜರು, ಹಿರಿಯ ಕಲಾವಿದ ಸುಂದರ ರೈ ಮಂದಾರ ಮತ್ತಿತರರು ಉಪಸ್ಥಿತರಿದ್ದರು.

ತಂಡದ ಕಲಾವಿದರಾದ ಪ್ರಕಾಶ್ ಕೆ.ತೂಮಿನಾಡು ಸ್ವಾಗತಿಸಿ ,ವಂದಿಸಿದರು. ಸೋಮನಾಥ ಶೆಟ್ಟಿ ಮಂಗಲ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.

ಹಿರಿಯ ರಂಗಭೂಮಿ ಚಲನಚಿತ್ರ ಕಲಾವಿದ ನವೀನ್ ಡಿ.ಪಡೀಲ್ ಅವರು ಎಂಟು ವರ್ಷದ ಬಳಿಕ ಮೊದಲ ಬಾರಿಗೆ ಅಂಚಗೆ ಇಂಚಗೆ ನಾಟಕ ನಿರ್ದೇಶನ ಮಾಡುತ್ತಿದ್ದು,ಇನ್ನೊರ್ವ ರಂಗಭೂಮಿ ಕಲಾವಿದ ಹಾಗೂ ಪನೋಡಾ ಬೊಡ್ಚ ಖ್ಯಾತಿಯ ಚಲನಚಿತ್ರ ನಟ ಸುಂದರ ರೈ ಮಂದಾರ ಈ ಬಾರಿ ಶಾರಾದ ಆರ್ಟ್ಸ್ ಕಲಾವಿದೆರ್ ತಂಡದಲ್ಲಿ ಅಭಿನಯಿಸಲಿದ್ದಾರೆ.

ಗಡಿನಾಡ ಕಲಾನಿಧಿ ಕೃಷ್ಣ ಜಿ. ಮಂಜೇಶ್ವರ
ಮುಖ್ಯಸ್ಥರು, ಶಾರದಾ ಆರ್ಟ್ಸ್ ಕಲಾವಿದೆರ್ ಮಂಜೇಶ್ವರ

 

Exit mobile version