ಉಳ್ಳಾಲ ನ್ಯೂಸ್ ನೆಟ್‍ವರ್ಕ್
ತೊಕ್ಕೊಟ್ಟು : ಕಲ್ಲಾಪು ಭಾಗದಲ್ಲಿ ಒಂಭತ್ತು ಲಕ್ಷ ಪರೋಪಜೀವಿಗಳನ್ನು ತೆಂಗಿನಮರಗಳಿಗೆ ಬಿಡಲಾಗಿದ್ದರೂ , ಕೀಟಗಳ ಪ್ರಮಾಣ ಅಧಿಕವಾಗಿದ್ದ ಹಿನ್ನೆಲೆಯಲ್ಲಿ ನಿಯಂತ್ರಣಕ್ಕೆ ತರಲು ಅಸಾಧ್ಯವಾಗಿದೆ. ಮಳೆ ಕಡಿಮೆಯಾಗಿ ಬಿಸಿಲಿನ ತಾಪವೂ ಹೆಚ್ಚಾಗಿದ್ದರಿಂದಾಗಿ ಚಿಕ್ಕ ಕೀಟಗಳು ದೊಡ್ಡದಾಗಿ ಬೆಳೆದು ಭಾಗಶ: ತೆಂಗಿನಮರಗಳು ಭಾದೆಗೆ ತುತ್ತಾಗಿದೆ ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಸೀಮಾ ಹೇಳಿದರು.
ಫೆಬ್ರವರಿ ತಿಂಗಳಿನಲ್ಲಿ ಕಾಸರಗೋಡಿನ ಸಿಪಿಸಿಆರ್‍ಐ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಸೇರಿಕೊಂಡು ವಿಜ್ಞಾನಿಗಳ ನೇತೃತ್ವದಲ್ಲಿ ಪ್ರತಿ ಮರಕ್ಕೆ 20 ಪರೋಪಜೀವಿಗಳನ್ನು 15 ದಿನಗಳಲ್ಲಿ ಬಿಡಲಾಗಿತ್ತು. ಬಿಸಿಲಿನ ತಾಪಮಾನದಿಂದಾಗಿ ಅದು ನಿಯಂತ್ರಣಕ್ಕೆ ಬರಲಿಲ್ಲ. ಮರಗಳಲ್ಲಿ ಪೌಷ್ಠಿಕಾಂಶದ ಕೊರತೆಯಿಂದಾಗಿ ಕೀಟ ಬಾಧಿಸಿದೆ. ಚಳಿಗಾಲದಲ್ಲಿ ಕೀಟ ಬಾಧಿಸಿದರೂ ಬೇಸಿಗೆಯಲ್ಲಿ ಒಣಗಿದ ಎಲೆಗಳ ಮೂಲಕ ಅದು ಬೆಳಕಿಗೆ ಬಂದಿತ್ತು. ಕೀಟ ಬಾಧೆ ಕ್ಯಾನ್ಸರ್ ರೋಗವಿದ್ದಂತೆ ಪ್ರಾಥಮಿಕ ಹಂತದಲ್ಲಿರುವಾಗಲೇ ಪರೋಪಜೀವಿಗಳನ್ನು ಬಿಡುತ್ತಿದ್ದಲ್ಲಿ ನಿಯಂತ್ರಣ ಸಾಧ್ಯವಾಗುತಿತ್ತು. ಆದರೆ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆಯಿಂದ ಅಸಾಧ್ಯವಾಗಿತ್ತು. ತೆಂಗಿನ ಗರಿಗಳಲ್ಲಿ ಇರುವಂತಹ ಕ್ಲೋರೊಫಿಲ್ ಕಡಿಮೆಗೊಳಿಸುವ ಕಾರ್ಯ ಕೀಟಗಳು ಮಾಡುವುದರಿಂದ ಮರಗಳು ಸಾಯುವ ಹಂತಕ್ಕೆ ತಲುಪಿವೆ. ಕಲ್ಲಾಪುವಿನಿಂದ ತೊಕ್ಕೊಟ್ಟು ಭಾಗದಲ್ಲಿನ ತೆಂಗಿನಮರಗಳು ಸಾಯಲು ಕೀಟಬಾಧೆಯ ಜತೆಗೆ ಬರ ಕೂಡಾ ಕಾರಣವಾಗಿದೆ. ತೆಂಗಿನ ಮರಗಳಿಗೆ ಪೊಟಾಷ್ ನೀಡಿದಲ್ಲಿ ಪೌಷ್ಠಿಕಾಂಶಯುಕ್ತವಾಗಿರುತ್ತದೆ, ಯೂರಿಯಾದಿಂದ ಮೇಲ್ನೋಟಕ್ಕೆ ಉತ್ತಮವಾಗಿ ತೆಂಗು ಕಂಡುಬಂದರೂ ಪೌಷ್ಠಿಕಾಂಶದ ಕೊರತೆ ಅಧಿಕವಾಗಿರುತ್ತದೆ. ಈ ನಿಟ್ಟಿನಲ್ಲಿ ಮುಂದೆ ರೈತರು ಪೊಟಾಷ್ ಸಿಂಪಡಿಸಿದಲ್ಲಿ ಹುಳಬಾಧೆಯನ್ನು ತಡೆಗಟ್ಟಬಹುದು.
ತೆಂಗು ಬೆಳೆಗಾರರಿಗೆ ಪುನಶ್ಚೇತನ ಸ್ಕೀಂ :
ತೆಂಗಿನ ತೋಟಗಳ ಪುನಶ್ಚೇತನ ಹಾಗೂ ಮರುನಾಟಿ ಮತ್ತು ನಿರ್ವಹಣೆಗಾಗಿ ಪ್ರತಿ ಫಲಾನುಭವಿಗೆ 0.4 ಹೆಕ್ಟø ನಿಂದ ಗರಿಷ್ಠ 1 ಹೆಕ್ಟೇರ್ ವರೆಗೆ ರೂ. 44,750 ರೂಗಳನ್ನು ಮೊದಲ ವರ್ಷ ಹಾಗೂ ರೂ. 8,750 ನ್ನು ಎರಡನೇ ವರ್ಷದ ನಿರ್ವಹಣೆಗೆ ಸಹಾಯಧನ ನೀಡಲಾಗುವುದು. ತೆಂಗಿನ ತೋಟಗಳಲ್ಲಿ ಅನುತ್ಪಾದಕ ಹಾಗೂ ರೋಗ ಕೋಟ ಬಾಧೆಗೊಳಗಾದ ಗಿಡಗಳನ್ನು ಬುಡಸಮೇತ ಕತ್ತರಿಸಿ ತೆಗೆಯಲು ಪ್ರತಿ ಗಿಡಕ್ಕೆ ರೂ. 1000 ಗಳಂತೆ ಹೆಕ್ಟೇರಿಗೆ ಗರಿಷ್ಠ 32 ಗಿಡಗಳನ್ನು ತೆಗೆಯಲು ರೂ. 32,000 ಸಹಾಯಧನ ಒದಗಿಸಲಾಗುವುದು. ಅಧಿಕ ಇಳುವರಿ ನೀಡುವ ಹೈಬ್ರೀಡ್ ಗಿಡ್ಡ/ಎತ್ತರದ ತಳಿಗಳನ್ನು ಮರು ನಾಟಿ ಮಾಡಲು ಪ್ರತಿ ಗಿಡಕ್ಕೆ ರೂ. 80 ರಂತೆ ಹೆಕ್ಟೇರಿಗೆ ರೂ.4,000 , ತೆಂಗಿನ ತೋಟಗಳ ಮಣ್ಣು ಮಾದರಿ ಪರೀಕ್ಷೆ ಆಧಾರದ ಮೇರೆಗೆ ಸಮತೋಲನ ಪೋಷಕಾಂಶಗಳನ್ನು ಗಿಡಗಳಿಗೆ ಒದಗಿಸಲು, ನೀರಿನ ನಿರ್ವಹಣೆ ಮತ್ತು ಬಸಿಗಾಲುವೆ ನಿರ್ಮಾಣ, ಹಸಿರೆಲೆ ಗೊಬ್ಬರ/ ಹೊದಿಕೆ ಬೆಳೆ ನಾಟಿ ಮಾಡಲು, ನೀರು ಮತ್ತು ತೇವಾಂಶ ಸಂರಕ್ಷಣೆ ಕೈಗೊಳ್ಳಲು, ಅಗತ್ಯವಿರುವ ಸಸ್ಯ ಸಂರಕ್ಷಣಾ ಕ್ರಮ ಅನುಸರಿಸಲು ರೂ. 17,500 ಎರಡು ವಾರ್ಷಿಕ ಕಂತುಗಳಲ್ಲಿ ಒದಗಿಸುವುದಾಗಿ ಭರವಸೆ ನೀಡಿದರು.
ಜಿಲ್ಲೆಯ ಜನ ಧೈರ್ಯವಂತರು :
ಹೊರಜಿಲ್ಲೆಗಳಲ್ಲಿ ರೋಗಬಾಧಿಸಿದಲ್ಲಿ ಕೃಷಿಕರು ಆತ್ಮಹತ್ಯೆಗೈಯ್ಯುವ ಪ್ರಕರಣಗಳು ಕಣ್ಣೆದುರಿಗಿದೆ. ಆದರೆ ಜಿಲ್ಲೆಯ ಜನ ಧೈರ್ಯವಂತರು. ಧೃತಿಗೆಡದೆ ಮತ್ತೆ ತೆಂಗುಬೆಳೆಯಲು ಆಸಕ್ತರಾಗಿದ್ದಾರೆ. ಇವರಿಗೆ ಕೃಷಿ ಮತ್ತಉ ತೋಟಗಾರಿಕೆ ಇಲಾಖೆಯವರು ಪ್ರೋತ್ಸಾಹಿಸಬೇಕಿದೆ. ಪುನಶ್ಚೇತನ ಸ್ಕೀಂನಡಿ ಕೃಷಿಕರಿಗೆ ಮಾತ್ರವಲ್ಲ ತೆಂಗು ಬೆಳೆಯುವ ಎಲ್ಲರಿಗೂ ಉಚಿತವಾಗಿ ಗಿಡಗಳನ್ನು ನೀಡಬೇಕಿದೆ. ಈ ಬಾರಿ 150 ತೆಂಗಿನಮರಗಳಲ್ಲಿ 10 ಸಿಯಾಳಗಳನ್ನು ಪಡೆದವರಿದ್ದಾರೆ. ಜಿಲ್ಲೆಯಲ್ಲಿ ನಡೆಯುವ ಜನಸಂಪರ್ಕ ಸಭೆ ಗ್ರಾಮಮಟ್ಟಿನಲ್ಲೂ ನಡೆಯಬೇಕಿದೆ ಎಂದು
ಮಾಹಿತಿ ಕಾರ್ಯಗಾರಕ್ಕೆ ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್ ಚಾಲನೆ ನೀಡಿದರು. ಸಿಪಿಸಿಆರ್ ಐ ಕಾಸರಗೋಡಿನ ಅಧಿಕಾರಿ ಪ್ರತಿಭಾ ಹುಳು ಭಾದೆಯ ನಿರ್ವಹಣೆ ಹಾಗೂ ಲಕ್ಷಣಗಳ ಮಾಹಿತಿ ನೀಡಿದರು. ಉಳ್ಳಾಲ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು, ತಾಲೂಕು ಪಂಚಾಯಿತಿ ಸದಸ್ಯೆ ಸುರೇಖಾ ಚಂದ್ರಹಾಸ್ , ನಗರಸಭೆ ಸದಸ್ಯ ಯು.ಇಸ್ಮಾಯಿಲ್ ಮುಖ್ಯ ಅತಿಥಿಗಳಾಗಿದ್ದರು.
12 ವರ್ಷಗಳ ಹಿಂದೆ ನಿಯಂತ್ರಣಕ್ಕೆ ತರಲಾಗಿತ್ತು
ಕಲ್ಲಾಪು ಭಾಗದಲ್ಲಿ ತೆಂಗು ಬೆಳೆಯ ಕಪ್ಪು ತಲೆ ಹುಳು ಭಾದೆ 12 ವರ್ಷಗಳ ಹಿಂದೆಯೂ ಬಾಧಿಸಿತ್ತು. ಈ ವೇಳೆ ತೆಂಗಿನ ಮರಕ್ಕೆ ರಂಧ್ರ ಕೊರೆದು ಮೊನೊಕ್ರೊಟೊಪಸ್ ಅನ್ನುವ ರಾಸಾಯನಿಕವನ್ನು ಸಿಂಪಡಿಸಲಾಗಿತ್ತು. ಇದರಿಂದ ತೆಂಗಿನಮರದಲ್ಲಿ ಇಳುವರಿ ಕಡಿಮೆಯಾದ ಹಿನ್ನೆಲೆಯಲ್ಲಿ ,ಜನರ ಆರೋಗ್ಯಕ್ಕೆ ಪರಿಣಾಮ ಬೀರುವುದರಿಂದ ಮತ್ತೆ ಮರಗಳಿಗೆ ಔಷಧಿ ಸಿಂಪಡಿಸುವ ವಿಧಾನವನ್ನು ಬದಲಿಸಿ, ಇದೇ ಮೊನೊಕ್ರೊಟೋಪಸ್ ರಾಸಾಯನಿಕವನ್ನು ಮರದ ಜೀವಂತ ಬೇರು ತುಂಡರಿಸಿ ಅದಕ್ಕೆ ಕಟ್ಟಿ ಸಿಂಪಡಿಸುವ ವಿಧಾನವನ್ನು ಅನುಸರಿಸಲಾಗಿತ್ತು. ಈ ಮೂಲಕ ಕಪ್ಪು ಹುಳು ತಲೆ ಬಾಧೆ ನಿಯಂತ್ರಣಕ್ಕೆ ಬಂದಿತ್ತು.
ಸುಂದರ್ ಉಳಿಯ
ಉಳ್ಳಾಲ ನಗರಸಭೆ ಸದಸ್ಯರು