ಉಳ್ಳಾಲ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ವಿದೇಶಿ ಉಡುಗರೆ ನೀಡುವುದಾಗಿ ಮಹಿಳೆಯೊಬ್ಬರನ್ನು ನಂಬಿಸಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊರರಾಜ್ಯದ ಇಬ್ಬರು ಆರೋಪಿಗಳನ್ನು ಐಟಿ ಕಾಯ್ದೆಯಡಿ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮಿಜೋರಂ ಮೂಲದ, ನವದೆಹಲಿ ಬುದೆಲಾ ವಿಕಾಸಪುರಿಯ ಲಾಲ್ ತಾನ್ ಮಾವಿಯಾ (34), ಮಣಿಪುರ ಚುರಚಾಂದ್ ಪುರದ ಕೂಫ್ ಬೊಯಿ ಯಾನೆ ಲಿಯಾನ್ ಕೂಪ್ (32) ಎಂದು ಹೆಸರಿಸಲಾಗಿದೆ.
ಬಂಧಿತ ಆರೋಪಿಗಳು ಉಳ್ಳಾಲ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ನಿವಾಸಿ ವಾೈಲೆಟ್ ಎಂಬವರಿಗೆ ನಕಲಿ ಈ-ಮೇಲ್ ಕಳುಹಿಸಿ, ಮೊಬೈಲ್ ಮೂಲಕ ಸಂಪರ್ಕಿಸಿ ವಿದೇಶಿ ಉಡುಗರೆ ನೀಡುವುದಾಗಿ ನಂಬಿಸಿ ಅವರಿಂದ 21,58,200 ರೂ. ಪಡೆದು ವಂಚಿಸಿದ್ದರು. ಈ ಬಗ್ಗೆ ವಾೈಲೆಟ್ ಉಳ್ಳಾಲ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿದ ಪೊಲೀಸರು ಆರಫಿಗಳ ಬಂಧನಕ್ಕಾಗಿ ಬಲೆ ಬೀಸಿದ್ದರು.
ಇದೀಗ ಖಚಿತ ಮಾಹಿತಿ ಮೇರೆಗೆ ಪೊಲೀಸರ ಅತಿಥಿಯಾಗಿರುವ ಆರೋಪಿಗಳು ದೆಹಲಿಯ ರಾಯಲ್ ಬ್ಯಾಂಕ್ ಆಫ್ ಸ್ಕಾಟ್‍ಲ್ಯಾಂಡ್ ಹೆಸರಿನಲ್ಲಿ ನಕಲಿ ಮೈಲ್ ಅನ್ನು ವಾೈಲೆಟ್ ಅವರಿಗೆ ಕಳುಹಿಸಿದ್ದರು. ಸ್ನೇಹಿತರ ಹೆಸರಿನಲ್ಲಿ ಮಹಿಳೆಯನ್ನು ಸಂಪರ್ಕಿಸಿ ಪಾರ್ಸೆಲನ್ನು ಮತ್ತು ಗಿಫ್ಟ್ ಪಡೆದುಕೊಳ್ಳಲು ತಮ್ಮ ಖಾತೆಗೆ ರೂ.21,58,200 ಕಳುಹಿಸಿ ಕೊಡುವಂತೆ ನಂಬಿಸಿ, ಪಡೆದುಕೊಂಡಿದ್ದರು ಎಂದು ತಿಳಿದು ಬಂದಿದೆ. ಈ ಕುರಿತು ಉಳ್ಳಾಲ ಪೋಲೀಸ್ ಠಾಣೆಯಲ್ಲಿ ಮಹಿಳೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ ಪೊಲೀಸರು ನವದೆಹಲಿ ತೆರಳಿ ಯಶಸ್ವಿ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.