Site icon Ullalavani

ಪಿಲಾರು:ಗುಡ್ಡ ಕುಸಿದು ಮನೆಗಳಿಗೆ ಹಾನಿ

ಉಳ್ಳಾಲ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ಭಾನುವಾರ ರಾತ್ರಿ ಸುರಿದ ಮಳೆಗೆ ಪಿಲಾರು ಬಳಿ ಗುಡ್ಡ ಕುಸಿದು ನಿರ್ಮಾಣ ಹಂತದ ಮನೆ ಸೇರಿದಂತೆ ಎರಡು ಮನೆಗೆ ಹಾನಿಯಾಗಿದ್ದು, ಹರೇಕಳ ಮತ್ತು ಕುತ್ತಾರ್‍ನಲ್ಲಿ ಎರಡು ಮನೆಗಳ ಆವರಣ ಗೋಡೆ ಕುಸಿದು ಹಾನಿಯಾಗಿದೆ.

ಪಿಲಾರ್ ಮಸೀದಿ ಬಳಿ ನಿವಾಸಿ ಟಿ. ಇಬ್ರಾಹಿಂ ಅವರ ಮನೆಗೆ ಹಾನಿಯಾಗಿದ್ದು, ಮನೆಯ ಪಕ್ಕದ ನಿರ್ಮಾಣ ಹಂತದ ಮನೆಗೆ ದಾಸ್ತಾನಿರಿಸಿದ್ದ ಕಲ್ಲು ಸೇರಿದಂತೆ ಇತರ ಸಾಮಾಗ್ರಿಗಳು ಮಣ್ಣಿನೊಳಗೆ ಹೂತು ಹೋಗಿದೆ. ಹರೇಕಳದಲ್ಲಿ ಪದ್ಮಾವತಿ ಮತ್ತು ಕುತ್ತಾರ್‍ನಲ್ಲಿ ಕಿಶೋರ್ ಎಂಬವರ ಮನೆಯ ಆವರಣ ಗೋಡೆ ಕುಸಿದು ಮನೆ ಅಪಾಯದಲ್ಲಿದೆ.

ತಪ್ಪಿದ ದುರಂತ : ಪಿಲಾರ್ ತಡರಾತ್ರಿ ಗುಡ್ಡ ಕುಸಿತದಿಂದ ಟಿ. ಇಬ್ರಾಹಿಂ ಅವರ ಮನೆಗೆ ಹಾನಿಯಾಗಿದ್ದು, ಘಟನಾ ಸಂದರ್ಭದಲ್ಲಿ ಮನೆಯಲ್ಲಿ ಅವರ ಪತ್ನಿ   ಮತ್ತು ಪುತ್ರಿ ಮಾತ್ರ ಇದ್ದು, ಯಾವುದೇ ಅಪಾಯಗಳಾಗಿಲ್ಲ. ಗುಡ್ಡ ಕುಸಿತದಿಂದ ಮನೆಯ ಅಡುಗೆಕೋಣೆ, ಬೆಡ್‍ರೂಂಗೆ ಹಾನಿಯಾಗಿದ್ದು ಮನೆ ಬಿರುಕು ಬಿಟ್ಟಿದೆ. ಭಟ್ಕಳ ಮೂಲದ ವ್ಯಕ್ತಿಗೆ ಸೇರಿದ ಈ ಜಾಗದಲ್ಲಿ ಅವೈಜ್ಞಾನಿಕವಾಗಿ ಮಣ್ಣು ಅಗೆದು ಸಾಗಿಸಿರುವುದೇ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಸ್ಥಳಕ್ಕೆ ಸ್ಥಳೀಯ ಕೌನ್ಸಿಲರ್ ಬಾಝಿಲ್ ಡಿ.ಸೋಜಾ ಭೇಟಿ ನೀಡಿದರು. ಘಟನೆಯಿಂದ ಲಕ್ಷಾಂತರ ರೂ ನಷ್ಟವಾಗಿದೆ.

ಬಿರುಸುಗೊಂಡ ಸಮುದ್ರ : ಉಳ್ಳಾಲದಲ್ಲಿ ಸಮುದ್ರ ಬಿರುಸುಗೊಂಡಿದ್ದು, ಉಳ್ಳಾಲದ ಕೈಕೋ, ಕಿಲೇರಿಯನಗರ, ಸೋಮೇಶ್ವರ ಉಚ್ಚಿಲದಲ್ಲಿ ಸಮುದ್ರದ ಅಲೆಗಳು ಮನೆಗಳಿಗಪ್ಪಳಿಸುತ್ತಿದೆ. ಈ ವ್ಯಾಪ್ತಿಯಲ್ಲಿ ಕಲ್ಲು ಹಾಕುವ ಕಾರ್ಯ ಮುಂದುವರೆದಿದೆ.

Exit mobile version