Site icon Ullalavani

ಉಳ್ಳಾಲ ಸಮುದ್ರ ತೀರದಲ್ಲಿ ಬಾರ್ಜ್ ಮುಳುಗುವ ಭೀತಿ

ಉಳ್ಳಾಲ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ಕರಾವಳಿ ಸಂರಕ್ಷಣಾ ಘಟಕಕ್ಕೆ ಸೇರಿದ ಶಾಶ್ವತ ಕಡಲ್ಕೊರೆತ ಕಾಮಗಾರಿ ನಿರತ ಬಾರ್ಜ್ ಉಳ್ಳಾಲ ಸಮುದ್ರ ತೀರದಿಂದ 300 ಮೀ ದೂರದಲ್ಲಿ ಕಲ್ಲುಗಳಿಗೆ ಢಿಕ್ಕಿ ಹೊಡೆದು ಮುಳುಗುವ ಭೀತಿಯನ್ನು ಎದುರಿಸುತ್ತಿದ್ದು, 33 ಮಂದಿ ಕಾರ್ಮಿಕರು ಅಪಾಯದಂಚಿನಲ್ಲಿ ಸಿಲುಕಿದ್ದು ಬೃಹತ್ ಗಾತ್ರದ ಅಲೆಗಳಿಂದಾಗಿ ರಕ್ಷಣಾ ಕಾರ್ಯಾಚರಣೆಗೂ ಶನಿವಾರ ತಡರಾತ್ರಿವರೆಗೂ ಅಡ್ಡಿಯಾಗಿದೆ.

ಕಳೆದ 2 ವರ್ಷಗಳಿಂದ ಉಳ್ಳಾಲದ ಮೊಗವೀರಪಟ್ನ, ಕೋಟೆಪುರ , ಕೋಡಿ ಭಾಗದ ಸಮುದ್ರ ತೀರದಲ್ಲಿ ಶಾಶ್ವತ ತಡೆಗೋಡೆ ಕಾಮಗಾರಿ ನಡೆಯುತ್ತಿದೆ. ಸಮುದ್ರ ತೀರದಲ್ಲಿ ರೀಫ್ಸ್ ಅಳವಡಿಸುವ ಕಾಮಗಾರಿಯಲ್ಲಿ ನಿರತವಾಗಿದ್ದ ಬಾರ್ಜ್ ( ಕಾಮಗಾರಿ ನಿರತ ಹಡಗು) ಗುರುವಾರದಂದು ಒಂದು ಹಂತದ ಕಾಮಗಾರಿಯನ್ನು ಮುಗಿಸಿತ್ತು. ಆದರೆ ಶನಿವಾರ ಮಧ್ಯಾಹ್ನ 1.30 ಸುಮಾರಿಗೆ ರೀಫ್ಸ್ ಮೇಲೆ ಹಾಕಲಾದ ಕಲ್ಲುಗಳಿಗೆ ಡಿಕ್ಕಿ ಹೊಡೆದ ಹಡಗು ಅಪಾಯದಂಚಿನಲ್ಲಿ ಸಿಲುಕಿ, ಅಲೆಗಳ ಮಧ್ಯೆ ಸಿಲುಕಿದೆ. ಇದರಿಂದಾಗಿ ಹಡಗು ಒಳಗಡೆ ಕಾಮಗಾರಿ ನಿರತ ಸ್ಥಳೀಯ ಪಾಂಡೇಶ್ವರ ನಿವಾಸಿ ಶೋಭಿತ್ ಎಂಬ ಯುವಕ ಸೇರಿದಂತೆ ಹೊರರಾಜ್ಯಗಳ ಕಾರ್ಮಿಕರು ಅಪಾಯದಂಚಿಗೆ ಸಿಲುಕಿದ್ದಾರೆ. ಮಧ್ಯಾಹ್ನವೇ ಕರಾವಳಿ ರಕ್ಷಣಾ ಪಡೆಗೆ ಸ್ಥಳೀಯರು ಮಾಹಿತಿ ನೀಡಿದ್ದರೂ, ಸಂಜೆ 5 ಗಂಟೆಯ ವೇಳೆಗೆ ಸ್ಥಳಕ್ಕೆ ರಕ್ಷಣಾ ಹಡಗು ಬಂದರೂ, ಅಲೆಗಳ ಅಬ್ಬರಕ್ಕೆ ರಕ್ಷಣಾ ಕಾರ್ಯಾಚರಣೆಗೂ ಅಡ್ಡಿಯಾಗಿದೆ.

ಎರಡು ಬಾರಿ ಸುಡುಮದ್ದು ಸಿಡಿಸಿ ಸೂಚನೆ : ಸಂಜೆ 6,30 ರ ಸುಮಾರಿಗೆ ಅರ್ಧ ಗಂಟೆಗಳ ಕಾಲಾವಧಿಯಲ್ಲಿ ಅಪಾಯದಲ್ಲಿ ಸಿಲುಕಿದ್ದ ಕಾರ್ಮಿಕರು ಸುಡುಮದ್ದು ಸಿಡಿಸಿ ರಕ್ಷಣೆಗೆ ಸೂಚಿಸಿದ್ದಾರೆ. ಈ ವೇಳೆ ಕರಾವಳಿ ರಕ್ಷಣಾ ಪಡೆಯ ಹಡಗು ಘಟನಾ ಸ್ಥಳದಿಂದ ದೂರದಲ್ಲಿ ಕಂಡುಬಂದರೂ ಅಲೆಗಳಿಂದಾಗಿ ಅಪಾಯದಂಚಿನಲ್ಲಿದ್ದ ಹಡಗಿನ ಸಮೀಪ ಬರಲು ಅಸಾಧ್ಯವಾಯಿತು.

ಮಧ್ಯಾಹ್ನದಿಂದ ಮಗ ಶೋಭಿತ್ ದೂರವಾಣಿ ಮೂಲಕ ಸಂಪರ್ಕದಲ್ಲಿದ್ದ . ಸಂಜೆ 4 ರ ವೇಳೆಗೆ ಮೊಬೈಲ್ ಆಫ್ ಆಗಿದೆ, ಈಜಿ ದಡ ಸೇರಬಹುದು, ಆದರೆ ಸಹುದ್ಯೋಗಿಗಳಲ್ಲಿ ಹಲವರಿಗೆ ಈಜು ಬರುವುದಿಲ್ಲ. ಅದಕ್ಕಾಗಿ ಜತೆಯಾಗಿದ್ದೇವೆ. ಎಲ್ಲರೂ ಲೈಫ್ ಗಾಡ್ ್ ಧರಿಸಿದ್ದೇವೆ ‘ ಎಂದು ಶೋಭಿತ್ ತಂದೆ ಪಾಂಡೇಶ್ವರ ನಿವಾಸಿ  ಉಳ್ಳಾಲ ನ್ಯೂಸ್ ಗೆ ತಿಳಿಸಿದ್ದಾರೆ.
ಸ್ಥಳದಲ್ಲಿ ಅಧಿಕಾರಿಗಳ ದೌಡು : ಸ್ಥಳದಲ್ಲಿ ಡಿಸಿಪಿಗಳಾದ ಸಂಜೀವ ಪಾಟಿಲ್, ಎಸಿಪಿ ಶೃತಿ, ಠಾಣಾಧಿಕಾರಿ ಗೋಪಿಕೃಷ್ಣ, ಅಗ್ನಿಶಾಮಕ ದಳ, ಆಂಬ್ಯುಲೆನ್ಸ್, ಕಂದಾಯ ಇಲಾಖೆ ಮೊಕ್ಕಾಂ ಹೂಡಿದ್ದು, ಮೊಗವೀರಪಟ್ನ ಸಮುದ್ರ ತೀರದಲ್ಲಿ ಸಾವಿರಕ್ಕೂ ಅಧಿಕ ಕುತುಹೂಲಿಗರು ಜಮಾಯಿಸಿದ್ದಾರೆ.

Exit mobile version