ಉಳ್ಳಾಲ ನ್ಯೂಸ್ ನೆಟ್ ವರ್ಕ್
ಉಳ್ಳಾಲ : ಮಕ್ಕಳ ಶೈಕ್ಷಣಿಕ ಮತ್ತು ಆರೋಗ್ಯದ ಕಾಳಜಿ ಹೆತ್ತವರದಾಗಿದ್ದು, ಅವರ ಶಿಕ್ಷಣದ ಸಂದರ್ಭದಲ್ಲಿ ದಿನದ ಕೆಲ ಸಮಯವನ್ನು ಮೀಸಲಿಡುವ ಕಾರ್ಯ ಹೆತ್ತವರದ್ದು. ಮಕ್ಕಳು ಶೈಕ್ಷಣಿಕ ಸಬಲೀಕರಣವಾದರೆ ಮುಂದಿನ ಜೀವನದಲ್ಲಿ ಅವರು ಆರ್ಥಿಕ ಸಬಲತೆಯನ್ನು ಪಡೆಯಲು ಸಾಧ್ಯ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಅವರು ದೇರಳಕಟ್ಟೆಯ ನೇತಾಜಿ ಸುಭಾಶ್ಚಂದ್ರ ಬೋಸ್ ಸರಕಾರಿ ಪ್ರೌಢಶಾಲೆಯಲ್ಲಿ ವಿಶೇಷ ದಾಖಲಾತಿ ಆಂದೋಲನ , ಸಾಮಾನ್ಯ ದಾಖಲಾತಿ ಆಂದೋಲನ, ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಪುಸ್ತಕ ವಿತರಣೆ ಮತ್ತು ಸೈಕಲ್ ವಿತರಿಸಿ ಮಾತನಾಡಿದರು.
ನಮ್ಮ ಮುಂದಿನ ಭವಿಷ್ಯ ಇಂದಿನ ಮಕ್ಕಳಲ್ಲಿದೆ. ಇಂದು ದೊಡ್ಡ ದೊಡ್ಡ ಹುದ್ದೆಯಲ್ಲಿರುವವರು ಹಿಂದೆ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಕಷ್ಟಪಟ್ಟವರೇ. ಬಡವರಾಗಿ ಹುಟ್ಟಬಹುದು ಆದರೆ ಶಿಕ್ಷಣದ ಮೂಲಕ ಶ್ರೀಮಂತರಾಗಬಹುದು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸರಕಾರ ನೀಡುವ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ಉನ್ನತ ಶಿಕ್ಷಣ ಪಡೆದು ಆರ್ಥಿಕವಾಗಿ ಬಲಿಷ್ಠರಾಗುವ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆಯನ್ನು ನೀಡಬೇಕು ಎಂದರು.
ಈ ಸಂದರ್ಭದಲ್ಲಿ 20 ವಿದ್ಯಾರ್ಥಿಗಳಿಗೆ ಉಚಿತ ಸೈಕಲ್, ಸಮವಸ್ತ್ರ, ಪಠ್ಯಪುಸ್ತಕ, ಶೂ. ಸಚಿವ ಖಾದರ್ ವಿತರಿಸಿದರು.
ಸೈಕಲ್ ಚಲಾಯಿಸಿದ ಖಾದರ್ : ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿದ ಬಳಿಕ ವಿದ್ಯಾರ್ಥಿಯೊಬ್ಬನ ಸೈಕಲ್‍ನಲ್ಲಿ ಸವಾರಿ ಮಾಡಿ ವಿದ್ಯಾರ್ಥಿಗಳೊಂದಿಗೆ ಸಂಭ್ರಮಿಸಿದರು. ಹಿಂದೆ ಶಾಲೆ ಪ್ರಾರಂಭಗೊಂಡು ಕೆಲವು ತಿಂಗಳು ಕಳೆದ ಬಳಿಕ ಸೈಕಲ್ ವಿತರಿಸಲಾಗುತ್ತಿತ್ತು ಈ ಬಾರಿ ಶಾಲೆಯ ಪ್ರಾರಂಭದಲ್ಲೇ ಸೈಕಲ್ ವಿತರಿಸಲು ಸರಕಾರ ಕ್ರಮ ಕೈಗೊಂಡಿದೆ ಎಂದರು.
ಕಾರ್ಯಕ್ರಮದಲ್ಲಿ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು, ಬೆಳ್ಮ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಜಯ ಕೃಷ್ಣಪ್ಪ, ಉಪಾಧ್ಯಕ್ಷ ಬಿ.ಎಂ. ಅಬ್ದುಲ್ ಸತ್ತಾರ್, ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯ ಹೈದರ್ ಕೈರಂಗಳ, ಉಳ್ಳಾಲ ನಗರ ಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು, ಮಕ್ಕಳ ಸುರಕ್ಷಾ ಸಮಿತಿ ಅಧ್ಯಕ್ಷ ನಾರಾಯಣ ಶೆಟ್ಟಿ, ಎಸ್ ಡಿ.ಎಂ.ಸಿ ಅಧ್ಯಕ್ಷ ಇಸ್ಮಾಯಿಲ್, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪಿ. ಜ್ಞಾನೇಶ್, ಸಮನ್ವಯ ಅಧಿಕಾರಿ ಗೀತಾ ಶ್ಯಾನ್‍ಭೋಗ್, ಶಿಕ್ಷಣ ಸಂಯೋಜಕಿ ಹಿಲ್ಡಾ ಪಿಂಟೊ, ಡಯಟ್ ಹಿರಿಯ ಉಪನ್ಯಾಸಕಿ ದಯಾವತಿ, ದೈಹಿಕ ಶಿಕ್ಷಣಾಧಿಕಾರಿ ಗುರುನಾಥ ಬಾಗೇವಾಡಿ, ಸಿಆರ್‍ಪಿಗಳಾದ ದಾಕ್ಷಾಯಿನಿ ಮತ್ತು ರಾಜೇಶ್ವರೀ , ಪಂಚಾಯತ್ ಸದಸ್ಯರಾದ ಯೂಸುಫ್ ಬಾವ, ಭವಾನಿ, ರವಿರಾಜ್ ಶೆಟ್ಟಿ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಚಂಚಲಾಕ್ಷಿ ಯು. ಸ್ವಾಗತಿಸಿದರು. ಹಿಂದಿ ಶಿಕ್ಷಕ ವೆಂಕಟೇಶ್ ಕೆ.ಕಾರ್ಯಕ್ರಮ ನಿರ್ವಹಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ವಿಷ್ಣು ನಾರಾಯಣ ಹೆಬ್ಬಾರ್ ವಂದಿಸಿದರು.