ಉಳ್ಳಾಲ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಹಲವಾರು ಜನಪರ, ಯಶಸ್ವಿ ಯೋಜನೆಗಳ ಮೂಲಕ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವು ಮೂರು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಮಾತ್ರವಲ್ಲದೆ ಉತ್ತಮವಾದ ಆಡಳಿತ ಹಾಗೂ ವಿದೇಶ ನೀತಿಗಳ ಮೂಲಕ ಇಡೀ ವಿಶ್ವವೇ ಭಾರದತ್ತ ನೋಡುವಂತಾಗಿದೆ ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಸಂತೋಷ್ ಕುಮಾರ್ ಬೋಳಿಯಾರ್ ಅವರು ಹೇಳಿದರು.
ಅವರು ಶುಕ್ರವಾರ ತೊಕ್ಕೊಟ್ಟಿನ ಬಿಜೆಪಿ ಕಚೇರಿಯಲ್ಲಿ ಕೇಂದ್ರ ಸರಕಾರವು ಮೂರು ವರ್ಷವನ್ನು ಯಶಸ್ವಿಯಾಗಿ ಪೂರೈಸಿದ ಹಿನ್ನೆಲೆಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ನೋಟ್ ಬ್ಯಾನ್‍ನಂತಹ ಮಹೋನ್ನತ ಯೋಜನೆ, ಜನಧನ, ವಿಮಾ ಯೋಜನೆ ಸೇರಿದಂತೆ ದೇಶದ ಜನರಿಗೆ ರೈತರಿಗೆ,ಬಡವರ ಏಳಿಗೆಗಾಗಿ ನೂರಾರು ಯೋಜನೆಗಳು ಇಂದು ಮೋದಿ ಸರಕಾರವನ್ನು ಯಶಸ್ವಿನೆಡೆಗೆ ಕೊಂಡೊಯ್ಯವಂತೆ ಮಾಡಿದೆ. ಭ್ರಷ್ಟಾಚಾರರಹಿತವಾಗಿ ಮೂರು ವರ್ಷ ಪೂರೈಸಿರುವ ಮೋದಿ ನೇತೃತ್ವದ ಸರಕಾರ ಪ್ರಮುಖವಾಗಿ ದೇಶದ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ ಎಂದು ಅವರು ಹೇಳಿದರು.
ಬಿಜೆಪಿ ಮುಖಂಡ ಚಂದ್ರಹಾಸ್ ಉಳ್ಳಾಲ್ ಅವರು ಮಾತನಾಡಿ, ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ದೇಶವು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಕಾಂಗ್ರೆಸ್ ಸರಕಾರವು 60 ವರ್ಷದಲ್ಲಿ ಮಾಡದ ಸಾಧನೆಯಲ್ಲಿ ಮೋದಿ ಸರಕಾರವು ಕೇವಲ ಮೂರು ವರ್ಷದಲ್ಲಿ ಮಾಡಿ ತೋರಿಸಿದೆ. ಮೋದಿಯವರು ದೇಶ ಕಂಡಂತಹ ಒಬ್ಬ ಅಸಾಮಾನ್ಯ ನಾಯಕರಾಗಿದ್ದಾರೆ ಎಂದರು.
ಪಕ್ಷದ ಹಿರಿಯ ಮುಖಂಡರಾದ ಸೀತಾರಾಮ ಬಂಗೇರರವರು ದೀನ್‍ದಯಾಳ್ ಉಪಾಧ್ಯಾಯ, ಶ್ಯಾಂ ಪ್ರಕಾಶ್ ಮುಖರ್ಜಿ, ಭಾರತಮಾತೆಯ ಭಾವಚಿತ್ರಗಳಿಗೆ ಪುಷ್ಪಾರ್ಚನೆಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಿಜೆಪಿ ರಾಜ್ಯಕಾರ್ಯಕಾರಿಣಿ ಸದಸ್ಯ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾ ಪ್ರದಾನ ಕಾರ್ಯದರ್ಶಿ ಹಾಜಿ.ಡಾ.ಕೆ.ಎ ಮುನೀರ್ ಬಾವಾ, ಜಿಲ್ಲಾ ಕಾರ್ಯದರ್ಶಿ ನಮಿತಾ ಶ್ಯಾಂ, ಕ್ಷೇತ್ರ ಉಪಾಧ್ಯಕ್ಷ ಪ್ರಕಾಶ್ ಸಿಂಪೋಣಿ, ಕಾರ್ಯದರ್ಶಿ ಹೇಮಂತ್ ಶೆಟ್ಟಿ, ಕೋಟೆಕಾರು ಶಕ್ತಿ ಕೇಂದ್ರದ ಅಧ್ಯಕ್ಷ ಅಜಂತ್ ಪಿಲಾರು, ಮುಖಂಡರಾದ ಯಶವಂತ್ ಅಮೀನ್, ಸಂಜೀವ ಶೆಟ್ಟಿ ಅಂಬ್ಲಮೊಗರು ಮೊದಲಾದವರು ಉಪಸ್ಥಿತರಿದ್ದರು.