ಉಳ್ಳಾಲ ನ್ಯೂಸ್ ನೆಟ್ ವಕ್೯
ದೈವರಾಧನೆ ಭೂತರಾಧನೆಯ ಜೀವಳವಾಗಿರುವ ತುಳುನಾಡಿನಲ್ಲಿ ಸಂಪ್ರದಾಯದ ಜೊತೆಗೆ ಕೆಲವೊಂದು ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಕಾಲ ಕಾಲಕ್ಕೆ ತಕ್ಕಂತೆ ಆಚರಣೆಗಳಲ್ಲಿ ವೈವಿಧ್ಯತೆಯ ಜೊತೆಗೆ ಬದಲಾವಣೆಯನ್ನು ಪರಂಪರೆಯಂತೆ ನಡೆಸಲಾಗುತ್ತಿದೆ. ಇನ್ನು ತುಳುನಾಡಿನ ಪತ್ತನಾಜೆಯ ಬಗ್ಗೆ ಹಲವಾರು ನಂಬಿಕೆಗಳಿದ್ದು ಅದರ ಹಿಂದಿರುವ ಉದ್ದೇಶವನ್ನು ತಿಳಿಯೋಣ….
ಸಾಂದಭಿ೯ಕ ಚಿತ್ರ
ಪತ್ತನಾಜೆ ಸಮಯದಲ್ಲಿ ದೈವಗಳಿಗೆ ಪೂಜೆ ನಡೆಸಲಾಗುವುದಿಲ್ಲ, ಯಕ್ಷಗಾನ ಮೇಳಗಳು ತಮ್ಮ ತಿರುಗಾಟವನ್ನು ನಿಲ್ಲಿಸುತ್ತವೆ ಎಂಬುದಷ್ಟೇ ನಮ್ಮ ಈಗಿನ ತಲೆಮಾರಿನ ಜನರಿಗೆ ತಿಳಿದಿದೆ. ಆದರೆ ಅದರ ಹಿಂದಿರುವ ನಿಜವಾದ ಉದ್ದೇಶವೇನು ಎಂಬುದು ಯಾರಿಗೂ ಸರಿಯಾಗಿ ತಿಳಿದಿಲ್ಲ.ಇನ್ನು ಈ ಬಗ್ಗೆ ಉಳ್ಳಾಲ ನ್ಯೂಸ್ ಗೆ ಮಾಹಿತಿ ನೀಡಿ ಮಾತನಾಡಿದ
ಕೊಲ್ಯಗುತ್ತುವಿನ ಮಧ್ಯಸ್ಥರಾದ ಸುದರ್ಶನ್ ಪೂಜಾರಿ ಬೊಲ್ಲೈಯವರು ಹೇಳುವಂತೆ, “ಸಾಮಾನ್ಯವಾಗಿ ತುಳುನಾಡಿನ ಜನರ ನಂಬಿಕೆಯೆಂದರೆ ಪತ್ತನಾಜೆಯ ಸಮಯದಲ್ಲಿ ದೈವಗಳು ತಮ್ಮ ಮೂಲಸ್ಥಾನವಾದ ಘಟ್ಟದತ್ತ ತೆರಳುವುದರಿಂದ ಕರಾವಳಿ ಪ್ರದೇಶದಲ್ಲಿ ಅವುಗಳಿಗೆ ಪೂಜೆಪುರಸ್ಕಾರಗಳನ್ನು ನಿಲ್ಲಿಸಲಾಗುತ್ತದೆ.” ಇದು ಸಾಮಾನ್ಯ ಜನರಲ್ಲಿ ಪತ್ತನಾಜೆಯ ಬಗ್ಗೆಯಿರುವ ಕಲ್ಪನೆಯಾಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಅದೇ ರೀತಿಯಲ್ಲಿ ಜಾನಪದ ಕೂಟದ ಸ್ಥಾಪಕರಾದ ಹರೀಶ್ ಆಳ್ವಾ ತಿಳಿಸುವಂತೆ, “ತುಳುವರು ಕೃಷಿಕರು. ಕೃಷಿಯನ್ನೇ ಜೀವನೋಪಾಯವಾಗಿ ನಂಬಿರುವವರು. ಬೇಸಿಗೆಯ ಸಮಯದಲ್ಲಿ ಬೇಸಾಯಕ್ಕೆ ರಜೆ. ಆ ಸಮಯದಲ್ಲಿ ದೈವದೇವರಿಗೆ ಪೂಜೆಪುರಸ್ಕಾರಗಳು, ಜಾತ್ರೆಗಳು ಮತ್ತು ಯಕ್ಷಗಾನ ಮುಂತಾದ ಮನರಂಜನೆಗಳಲ್ಲಿ ತುಳುವರು ಕಾಲ ಕಳೆಯುತ್ತಾರೆ. ಆದರೆ ಬೇಸ ಕಳೆದು ಪತ್ತನಾಜೆ ಬಂತೆಂದರೆ ಕೃಷಿ ಕಾರ್ಯಕ್ಕೆ ಸಿದ್ಧವಾಗುವ ಕಾಲ. ಮತ್ತೆ ಮನರಂಜನೆಗೆ, ದೈವಗಳ ಪೂಜೆಗಳಿಗೆ ಸಮಯವಿಲ್ಲ. ಹಾಗಾಗಿ ಅವುಗಳಿಗೆಲ್ಲ ಸ್ವಲ್ಪ ಸಮಯಕ್ಕೆ ವಿರಾಮ ನೀಡುತ್ತಾರೆ.”
“ಪತ್ತನಾಜೆಯ ಸಮಯದಲ್ಲಿ ಕೃಷಿ ಕಾಯಕಕ್ಕೆ ತೆರಳುವ ಮುನ್ನ ನಂಬಿದ ದೈವಗಳಿಗೆ ತೃಪ್ತಿಯಾಗುವ ಹಾಗೆ ಭೋಜನ ಬಡಿಸಲಾಗುತ್ತದೆ. ಈ ಬಾರಿ ಕೃಷಿಯಲ್ಲಿ ಉತ್ತಮ ಬೆಳೆಬಂದರೆ ಮುಂದೆ ಅಗೆಲು ಸೇವೆ ನೀಡುತ್ತೇವೆ ಎಂದು ತುಳುವರು ನಂಬಿದ ದೈವದ ಮುಂದೆ ನಿಂತು ಹರಕೆ ಹೊರುತ್ತಾರೆ. ಅಂದು ದೈವಕ್ಕೆ ಕೋಳಿ ಬಲಿ ನೀಡಲಾಗುತ್ತದೆ. ಅದೇ ಕೊನೆಯ ಆಚರಣೆ. ಮುಂದೇನಿದ್ದರೂ ಮಳೆಗಾಲ ಕಳೆದ ನಂತರವೇ ಎಲ್ಲವೂ” ಎನ್ನುತ್ತಾರೆ ಹರೀಶ್ ಆಳ್ವಾ.
ಕೊಂಡಾಣದ ಪಿಲಿಚಾಮುಂಡಿ ದೈವಕ್ಕೆ ನಡೆಯುವ ಜಾತ್ರೆಯೇ ತುಳುನಾಡಿನಲ್ಲಿ ನಡೆಯುವ ಕೊನೆಯ ಜಾತ್ರೆ, ನಂತರ ಜಾತ್ರೆ ನಡೆಯದು. ಯಕ್ಷಗಾನ ಮೇಳಗಳು ತಿರುಗಾಟವನ್ನು ನಿಲ್ಲಿಸುತ್ತವೆ. ಮುಂದೇನಿದ್ದರೂ ನವಂಬರ್ ನಂತರವೇ ಮತ್ತೆ ಬಣ್ಣಹಚ್ಚುವರು.
ತುಳುವರು ಪ್ರಕೃತಿ ಪ್ರಿಯರು ಅವರ ಆಚಾರಣೆ ಮತ್ತು ನಂಬಿಕೆಗಳೂ ಪ್ರಕೃತಿಯೊಂದಿಗೆ ಬೆಸೆದುಕೊಂಡಿದೆ, ತುಳುವರು ಪ್ರಕೃತಿಯಲ್ಲಿ ದೇವರನ್ನು ಕಂಡವರು ಅದಕ್ಕೊಂದು ಉತ್ತಮ ಉದಾಹರಣೆ ಪತ್ತನಾಜೆ.
