ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಮುನ್ನೂರು: ಕಳೆದ ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮುನ್ನೂರು ಗ್ರಾಮ ಪಂಚಾಯತ್‍ನ ಘನ ತ್ಯಾಜ್ಯ ಘಟಕದ ತ್ಯಾಜ್ಯ ವಿಲೇವಾರಿಗೆ ಬುಧವಾರ ಚಾಲನೆ ದೊರಕಿದ್ದು, ಪಂಚಾಯತ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಘನತ್ಯಾಜ್ಯ ಸಂಗ್ರಹ ವಾಹನಕ್ಕೆ ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮಿ ಗಟ್ಟಿ ಮತ್ತು ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ರೂಪಾ ಆರ್. ಶೆಟ್ಟಿ ಚಾಲನೆ ನೀಡಿ ಮಾತನಾಡಿದರು.
ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ ಮುನ್ನೂರು ಗ್ರಾಮ ಪಂಚಾಯತ್ ತ್ಯಾಜ್ಯ ವಿಲೇವಾರಿಗೆ ಸರಕಾರ ನೀಡಿದ ವ್ಯವಸ್ಥೆಯನ್ನು ಸದುಪಯೋಗಪಡಿಸಿರುವುದು ಶ್ಲಾಘನೀಯ ಈ ಕಾರ್ಯ ಮುಂದಿನ ದಿನಗಳಲ್ಲಿ ಯಶಸ್ವಿಯಾಗಿ ಮುನ್ನಡೆಯಾಬೇಕಾದರೆ ಎಲ್ಲರ ಸಹಕಾರ ಅಗತ್ಯವಿದ್ದು, ತ್ಯಾಜ್ಯ ವಿಲೇವಾರಿ ಮೂಲಕ ಮುನ್ನೂರು ಗ್ರಾಮ ಪಂಚಾಯತ್ ಇತರ ಗ್ರಾಮ ಪಂಚಾಯತ್‍ಗಳಿಗೆ ಮಾದರಿಯಾಗಲಿ ಎಂದರು.
ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ರೂಪ ಆರ್. ಶೆಟ್ಟಿ, ಉಪಾಧ್ಯಕ್ಷ ಹರೀಶ್ ಭಂಡಾರಬೈಲು, ತಾ. ಪಂ. ಸದಸ್ಯೆ ಆಲ್‍ಫ್ರೆಡ್ ವಿಲ್ಮಾ ಡಿ.ಸೋಜ, ತಾ. ಪಂ. ಕಾರ್ಯನಿರ್ವಹಣಾಧಿಕಾರಿ ಸದಾನಂದ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಬ್ದುಲ್ ರಹಿಮಾನ್, ಮಾಜಿ ಉಪಾಧ್ಯಕ್ಷೆ ಐರಿನ್, ಉಪ ಕಾರ್ಯದರ್ಶಿ ಎನ್. ಆರ್. ಉಮೇಶ್, ಜನಶಿಕ್ಷಣ ಟ್ರಸ್ಟ್‍ನ ಶೀನ ಶೆಟ್ಟಿ, ಕೃಷ್ಣ ಮೂಲ್ಯ, ಅಭಿವೃದ್ಧಿ ಅಧಿಕಾರಿ ಸುಧೀರ್, ಪಂಚಾಯತ್ ರಾಜ್ ಸಹಾಯಕ ಅಭಿಯಂತರ ರಾಧಾಕೃಷ್ಣ, ಪಂಚಾಯತ್ ಸದಸ್ಯರಾದ ಭಾಸ್ಕರ್ ಕುತ್ತಾರ್, ವಿಲ್ಪೆಡ್ ಡಿ.ಸೋಜ, ಹಸನಬ್ಬ, ಕಿರಣ್ ಶೆಟ್ಟಿ, ವನಿತಾ ಯು. ಶೆಟ್ಟಿ, ಶಶಿಕಲಾ, ಚಂದ್ರಾವತಿ, ಲೀಲಾವತಿ, ಹಸೈನಾರ್, ನವೀನ್ ಡಿ’ಸೋಜ ಉಪಸ್ಥಿತರಿದ್ದರು.
ಮುನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿಗೆ ಎರಡು ವಾಹನಗಳಿದ್ದು, ಪಂಚಾಯತ್ ವ್ಯಾಪ್ತಿಯ ಕುತ್ತಾರ್ ಜಂಕ್ಷನ್ ಮತ್ತು ಮುಖ್ಯ ರಸ್ತೆಯಲ್ಲಿ ದೈನಂದಿನ ತ್ಯಾಜ್ಯ ವಿಲೇವಾರಿ ನಡೆಯಲಿದ್ದು, ಮನೆಗಳಿಗೆ ಮತ್ತು ಫ್ಲ್ಯಾಟ್‍ಗಳಿಗೆ ಎರಡು ದಿನಕ್ಕೊಮ್ಮೆ ತ್ಯಾಜ್ಯ ವಿಲೇವಾರಿ ವಾಹನ ಸಂಚರಿಸಲಿದೆ. ತ್ಯಾಜ್ಯ ವಿಲೇವಾರಿಗೆ ಒಂದು ಮನೆಗೆ 30 ರೂ. ಫ್ಲ್ಯಾಟ್‍ಗೆ 50 ರೂ. ಅಂಗಡಿಗಳಿಗೆ 100 ರೂ., ಹೋಟೆಲ್ -500, ಬಾರ್ ಎಂಡ್ ರೆಸ್ಟಾರೆಂಟ್ ಒಂದು ಸಾವಿರ ರೂ. ಶುಲ್ಕ ನಿಗದಿ ಪಡಿಸಿದ್ದು, ತ್ಯಾಜ್ಯ ವಿಲೇವಾರಿ ಸುಗಮವಾಗಿ ನಡೆಯಲು ವಾರ್ಡ್‍ನಲ್ಲಿ ನಿಗಾ ಸಮಿತಿ ರಚಿಸಿದ್ದು, ಶುಲ್ಕ ಸೇರಿದಂತೆ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ನಿಗಾ ವಹಿಸಲಿದೆ ಎಂದು ಪಂಚಾಯತ್ ಪ್ರಕಟನೆ ತಿಳಿಸಿದೆ.