ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಳ್ಳಾಲ: ಇಂದು ಶಿಕ್ಷಣವಿದ್ದರೆ ಮಾತ್ರ ನಾವು ಸಮಾಜದಲ್ಲಿ ಉತ್ತಮ ಜೀವನವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಇಂದು ವಿದ್ಯಾಭ್ಯಾಸದ ಮಹತ್ವವನ್ನು ಎಲ್ಲರೂ ಅರಿತುಕೊಂಡು ಮುನ್ನಡೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಈ ನಿಟ್ಟಿನಲ್ಲಿ ಬಬ್ಬುಕಟ್ಟೆಯ ಖೈರಿಯಾ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಬಡ ಹೆಣ್ಣುಮಕ್ಕಳ ವಿದ್ಯಾರ್ಥಿನಿನಿಲಯ(ಖೈರಿಯಾ ಶೆಲ್ಟರ್ಸ್) ದೀನ್ ವಿದ್ಯಾಭ್ಯಾಸದ ಜೊತೆಗೆ ಲೌಕಿಕ ಶಿಕ್ಷಣವನ್ನೂ ನೀಡುವ ಮೂಲಕ ಬಡ ಹೆಣ್ಣುಮಕ್ಕಳಿಗೆ ಆಸರೆಯಾಗಿ ನಿಂತು ಉತ್ತಮ ಭವಿಷ್ಯವನ್ನು ಕಟ್ಟಿಕೊಡುತ್ತಿದೆ ಎಂದು ಯೆನೆಪೋಯ ವಿಶ್ವವಿದ್ಯಾಲಯದ ಕುಲಪತಿ ವೈ.ಅಬ್ದುಲ್ಲಾ ಕುಂಞ ಅವರು ಅಭಿಪ್ರಾಯಪಟ್ಟರು.
ಅವರು ತೊಕ್ಕೊಟ್ಟು ಸಮೀಪದ ಬಬ್ಬುಕಟ್ಟೆಯ ಖೈರಿಯಾ ಟ್ರಸ್ಟ್ ವತಿಯಿಂದ ನಡೆಯುತ್ತಿರುವ `ಖೈರಿಯಾ ಶೆಲ್ಟರ್ಸ್’ ಬಡ ಹೆಣ್ಣುಮಕ್ಕಳ ವಿದ್ಯಾರ್ಥಿನಿಲಯದ 8ನೇ ವಾರ್ಷಿಕೋತ್ಸವ ಮತ್ತು ನೂತನವಾಗಿ ನಿರ್ಮಾಣವಾದ ಎರಡನೇ ಮಹಡಿ ಕಟ್ಟಡದದ ಉದ್ಘಾಟನೆಯನ್ನು ಭಾನುವಾರ ನೆರವೇರಿಸಿ ಮಾತನಾಡಿದರು.
ಒಂದು ಯತಿಂಖಾನವನ್ನು ನಡೆಸುವುದು ಅದು ಸುಲಭವಾದ ಕೆಲಸವಲ್ಲ. ಎಸ್.ಎಂ.ರಶೀದ್ ಹಾಜಿ ಅವರು ಖೈರಿಯಾ ಟ್ರಸ್ಟ್ ಮೂಲಕ ಇಲ್ಲಿಯ ಮಕ್ಕಳಿಗೆ ಬಹಳಷ್ಟು ಅನುಕೂಲಕರ ವಾತಾವರಣದೊಂದಿಗೆ ಮುನ್ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.
ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷ ಜನಾಬ್ ಅಬ್ದುಲ್ ರಶೀದ್ ಅವರು ಮಾತನಾಡಿ, ನಮ್ಮ ನಮ್ಮ ವ್ಯಾಪ್ತಿಯಲ್ಲಿ ಬಡವರನ್ನು ಗುರುತಿಸಿ ಸಹಾಯವನ್ನು ಮಾಡುತ್ತಾ ಬಂದರೆ ಸಮಾಜದಲ್ಲಿ ಯಾರೂ ಕೂಡಾ ಹಸಿವಿನಿಂದ ಬಳಲುತ್ತಿರಲು ಖಂಡಿತಾ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸಿರಿವಂತರು ಸಮಾಜದ ಬಡವರ್ಗದ ಬಗ್ಗೆ ಮುತುವರ್ಜಿ ವಹಿಸಿ ಸಹಾಯವನ್ನು ಮಾಡುತ್ತಾ ಬಂದರೆ ಬಡತನ ನಿರ್ಮೂಲನೆ ಸಾಧ್ಯ. ಖೈರಿಯಾ ಶೆಲ್ಟರ್ ವಿದ್ಯಾರ್ಥಿನಿಯರ ಸಂರಕ್ಷಣೆಗೆ ಜೊತೆಗೆ ಉತ್ತಮ ವಿದ್ಯಾಭ್ಯಾಸದ ಜವಬ್ಧಾರಿಯನ್ನು ವಹಿಸಿಕೊಂಡು ಬಹಳ ಯಶಸ್ವಿಯಾಗಿ ಮುನ್ನಡೆಯುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಟ್ರಸ್ಟ್‍ನ ಅಧ್ಯಕ್ಷ ಹಾಜಿ ಎಸ್.ಎಂ.ರಶೀದ್ ಅವರು, ಟ್ರಸ್ಟ್‍ನ ಎಲ್ಲ ಸದಸ್ಯರು ಹಾಗೂ ದಾನಿಗಳ ಸಹಕಾರದಿಂದ ಖೈರಿಯಾ ಶೆಲ್ಟರ್ಸ್ ಮೂಲಭೂತ ಸೌಲಭ್ಯಗಳೊಂದಿಗೆ ಮುನ್ನಡೆಯಲು ಸಹಕಾರಿಯಾಗಿದೆ. ಅಲ್ಲದೆ ಇಲ್ಲಿಯ ವಿದ್ಯಾರ್ಥಿನಿಯರು ಕೂಡಾ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಮಾಡಿ ಸಂಸ್ಥೆಗೂ ಕೀರ್ತಿ ತಂದಿದ್ದಾರೆ. ಇಲ್ಲಿಯವರೆಗೆ ಇಲ್ಲಿ ಸುಮಾರು 70 ವಿದ್ಯಾರ್ಥಿನಿಯರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ನೂತನ ಮಹಡಿ ಆಗಿದ್ದರಿಂದ ಇನ್ನು ಮುಂದೆ 100 ಬಡ ವಿದ್ಯಾರ್ಥಿನಿಯರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಯರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಆಹಾರ ಸಚಿವ ಯು.ಟಿ.ಖಾದರ್, ಹಿರಾ ಮಹಿಳಾ ಕಾಲೇಜಿನ ಅಧ್ಯಕ್ಷ ಎ.ಎಚ್.ಮಹಮ್ಮೂದ್, ಟ್ರಸ್ಟಿ ಬಿ.ಅಬ್ದುಲ್ಲಾ ಕುಂಞ, ಎಚ್.ಎಚ್.ಗ್ರೂಪ್ ನ ಕುಂಞ,ಅಹ್ಮದ್, ಟ್ರಸ್ಟಿಗಳಾದ ಡಾ.ಪಿ.ಎಸ್.ಅಮೀರ್ ಆಲಿ, ಅಬೂಬಕ್ಕರ್ ಸಿದ್ದೀಕ್, ಬಿ.ಎಸ್.ಮಹಮ್ಮದ್ ಬಶೀರ್, ಮನ್ಸೂರು ಅಹ್ಮದ್, ಮಹಮ್ಮದ್ ಅಶ್ರಫ್, ಎಂ.ಮಜೀದ್, ಹಾರಿಸ್ ಮಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಬಲ್ಕೀಸ್ ಸ್ವಾಗತಿಸಿ, ಶಮೀಮ ವಂದಿಸಿದರು. ಹನ್ನತ್ ಅವರು ಕಾರ್ಯಕ್ರಮ ನಿರೂಪಿಸಿದರು.