Site icon Ullalavani

ದೇರಳಕಟ್ಟೆ ನಿಟ್ಟೆ ವಿವಿಯಲ್ಲಿ ದಾದಿಯರ ದಿನಾಚರಣೆ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಉಳ್ಳಾಲ: ವೈದ್ಯಕೀಯ ಕ್ಷೇತ್ರದಲ್ಲಿ ದಾದಿಯರ ಪಾತ್ರ ಮಹತ್ವದ್ದಾಗಿದ್ದು, ಚಿಕಿತ್ಸೆಯ ಪ್ರತೀ ಹಂತದಲ್ಲೂ ದಾದಿಯರ ಸೇವೆ ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ದಾದಿಯರು ಆಸ್ಪತ್ರೆಗೆ ಹೃದಯವಿದ್ದಂತೆ ಎಂದು ಕ್ಷೇಮಾ ಕುಲಸಚಿವ ಡಾ| ಜಯಪ್ರಕಾಶ್ ಶೆಟ್ಟಿ ಅಭಿಪ್ರಾಯಪಟ್ಟರು.

ನಿಟ್ಟೆ ವಿಶ್ವವಿದ್ಯಾಲಯದ ಪಾನೀರ್‍ನಲ್ಲಿರುವ ನಿಟ್ಟೆ ಉಷಾ ಇನ್ಸ್‍ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್ ವತಿಯಿಂದ ನರ್ಸಿಂಗ್ ಕ್ಷೇತ್ರದ ಸಂಸ್ಥಾಪಕರಾದ ಫ್ಲೋರೆನ್ಸ್ ನೈಟಿಂಗೇಲ್ ಅವರ ಜನ್ಮ ದಿನಾಚರಣೆ ಅಂಗವಾಗಿ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಗ್ಲಾಸ್ ಹೌಸ್‍ನಲ್ಲಿ ಶುಕ್ರವಾರ ಅಂತರಾಷ್ಟ್ರೀಯ ದಾದಿಯರ ದಿನ ಕಾರ್ಯಕ್ರಮ ಉದ್ಘಾಟಿಸಿ ಉತ್ತಮ ಸೇವೆಗೈದ ದಾದಿಯರಿಗೆ ಸನ್ಮಾನ ನೆರವೇರಿಸಿ ಮಾತನಾಡಿದರು.

ಆಸ್ಪತ್ರೆಯಲ್ಲಿ ದಾಖಲಾಗುವ ರೋಗಿಗಳ ಜೊತೆ ನೇರ ಸಂಪರ್ಕ ಇಟ್ಟುಕೊಂಡು ಮಾನವೀಯ ಸೇವೆಯ ಮುಖಾಂತರ ಗುಣಮುಖವನ್ನಾಗಿಸುವಲ್ಲಿ ದಾದಿಯರು ಪ್ರಮುಖ ಪಾತ್ರ ವಹಿಸುತ್ತಾರೆ. ವೈದ್ಯೋ ನಾರಾಯಣ ಹರಿ ಎನ್ನುವ ಮಾತಿನಲ್ಲಿ ದಾದಿಯರಿಗೆ ಪ್ರಮುಖ ಸ್ಥಾನ ಸಲ್ಲುತ್ತದೆ ಎಂದು ಹೇಳಿದರು.

ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯಕೀಯ ಅದೀಕ್ಷಕ ಡಾ| ಮೇಜರ್ ಶಿವಕುಮಾರ್ ಹಿರೇಮಠ್ ಮಾತನಾಡಿ ವೈದ್ಯಕೀಯ ಕ್ಷೇತ್ರದ ಪ್ರಮುಖ ಅಂಗವಾಗಿರುವ ದಾದಿಯರು, ಆಸ್ಪತ್ರೆಗೆ ಬರುವ ರೋಗಿಗಳ ಆರೈಕೆ ಮತ್ತು ಅವರಲ್ಲಿ ತೋರಿವ ಮಾನವೀಯತೆ, ಕಾಳಜಿಯಿಂದ ಆಸ್ಪತ್ರೆಗೂ ಹೆಸರು ಬರಲು ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಈ ವರ್ಷದಿಂದ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ `ನರ್ಸ್ ಎಕ್ಸಲೆನ್ಸ್ ಅವಾರ್ಡ್’ ನೀಡುವ ಮೂಲಕ ಅವರನ್ನು ಗುರುತಿಸುವ ಕಾರ್ಯ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿಯೂ ದಾದಿಯರ ಸೇವೆಯನ್ನು ಗೌರವಿಸುವ ಕಾರ್ಯ ನಡೆಸಲಿದೆ ಎಂದರು.

ಕಾರ್ಯಕ್ರಮದಲ್ಲಿ ಉತ್ತಮ ಸೇವೆಗಾಗಿ ದಾದಿಯರಾದ ಲಲಿತಾ, ಜಯಂತಿ, ಜಾನಕಿ, ಜೆಸಿಂತಾ ಹಾಗೂ ಮೆರಿ ಕೆ.ಎ ಅವರಿಗೆ `ನರ್ಸ್ ಎಕ್ಸಲೆನ್ಸ್ ಅವಾರ್ಡ್’ ನೀಡಿ ಗೌರವಿಸಲಾಯಿತು.

ಕ್ಷೇಮಾ ವೈಸ್‍ಡೀನ್ ಡಾ| ಪಿ.ಎಸ್.ಪ್ರಕಾಶ್, ಸಹಾಯಕ ವೈದ್ಯಕೀಯ ಅದೀಕ್ಷಕ ಡಾ| ಮುರಳೀಧರ ಪೈ, ನರ್ಸಿಂಗ್   ಅದೀಕ್ಷಕಿ ಶರ್ಲಿ ಲೂಕಾಸ್ ಹಾಗೂ ಕ್ಲೀನಿಕಲ್ ಕೋರ್ಡಿನೇಟರ್ ಡಾ| ಜೆಸಿಂತಾ ವೇಗಸ್ ಉಪಸ್ಥಿತರಿದ್ದರು.

ನಿಟ್ಟೆ ನರ್ಸಿಂಗ್ ಕಾಲೇಜಿನ ಉಪನ್ಯಾಸಕಿ ಪವಿತ್ರಾ ಸ್ವಾಗತಿಸಿದರು. ಸ್ವಾತಿ ಭಂಡಾರಿ ಕಾರ್ಯಕ್ರಮ ನಿರ್ವಹಿಸಿದರು.

Exit mobile version