ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಮಾಡೂರು : ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮಾಡೂರು ಬಲ್ಯ ಎಂಬಲ್ಲಿ ಖಾಸಗಿ ವ್ಯಕ್ತಿಯೋರ್ವರಿಗೆ ಸಂಬಂಧಿಸಿದ ಭೂಮಿ ಸುಮಾರು 21 ಅಡಿ ಅಳದವರಗೆ ಹಠಾತ್ ಕುಸಿದಿರುವ ಘಟನೆ ಶುಕ್ರವಾರ ನಡೆದಿದೆ.
ಮಾಡೂರಿನ ಬಲ್ಯ ಎಂಬಲ್ಲಿ ವ್ಯಕ್ತಿಯೊಬ್ಬರಿಗೆ ಸೇರಿದ ಖಾಸಗಿ ಜಾಗವಿದ್ದು, ಅದರಲ್ಲಿ ಅಡಿಕೆ ತೋಟ ಕೂಡ ಆವರಿಸಿಕೊಂಡಿದೆ. ಆದರೆ ಎರಡು ದಿನದ ಹಿಂದೆ ಅಡಿಕೆ ತೋಟದಲ್ಲಿ ಭೂಮಿ ಸುಮಾರು 21 ಅಡಿಗಳಷ್ಟು ಆಳಕ್ಕೆ ಏಕಾಏಕಿ ಕುಸಿತ ಕಂಡಿದೆ. ಘಟನೆ ಬಗ್ಗೆ ತಿಳಿದ ಮನೆಯವರು ತಕ್ಷಣ ಸ್ಥಳಕ್ಕೆ ಧಾವಿಸಿ ನೋಡಿದಾಗ ಸುಮಾರು ಅಡಿಗಳಷ್ಟು ಆಳಕ್ಕೆ ಭೂಮಿ ಕುಸಿದಿರುವುದು ಕಂಡು ಬಂದಿದೆ. ಸುರಂಗದ ರೀತಿಯಲ್ಲಿ ಆಳದವರೆಗೆ ವ್ಯಾಪಿಸಿಕೊಂಡಿದ್ದು, ಸ್ಥಳೀಯರಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೇ ಈ ಜಾಗದಲ್ಲಿ ಯಾವುದೇ ನೀರಿನ ಸೆಳೆತ ಕೂಡ ಪತ್ತೆಯಾಗದೇ ಇರುವುದರಿಂದ ಭೂಮಿ ಕುಸಿತಕ್ಕೆ ಕಾರಣ ತಿಳಿದು ಬಂದಿಲ್ಲ. ಸ್ಥಳೀಯರ ಪ್ರಕಾರ ಮೊದಲಿಗೆ ಸಣ್ಣ ಮಟ್ಟದಲ್ಲಿ ಕುಸಿತ ಕಂಡಿದ್ದ ಭೂಮಿ ನಂತರ 21 ಅಡಿ ಅಳದವರೆಗೆ ಕುಸಿದಿದೆ ಎಂದು ತಿಳಿದು ಬಂದಿದೆ.
ಆದರೆ ಘಟನೆ ನಡೆದ ಜಾಗದ ಒಂದಷ್ಟು ದೂರದಲ್ಲಿ ಬಾವಿ ಇರುವ ಕಾರಣದಿಂದ ಸುರಂಗದ ಕಾರಣಕ್ಕೆ ಈ ರೀತಿ ಕುಸಿತ ಕಂಡಿರುವ ಬಗ್ಗೆ ಮನೆಯವರು ಅನುಮಾನ ವ್ಯಕ್ತಪಡಿಸಿದ್ಧಾರೆ. ಸದ್ಯ ಈ ಹೊಂಡವನ್ನು ಮರದ ತುಂಡುಗಳನ್ನಿಟ್ಟು ಮುಚ್ಚಲಾಗಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಲು ಮನೆಯವರು ನಿರಾಕರಿಸಿದ್ದಾರೆ. ಅಲ್ಲದೇ ಖಾಸಗಿ ಜಾಗವಾಗಿರುವ ಕಾರಣದಿಂದ ಮಾಧ್ಯಮಗಳ ಪ್ರವೇಶಕ್ಕೂ ನಿರ್ಬಂಧ ವಿಧಿಸಿದ್ದಾರೆ.
ಜಾಗದಲ್ಲಿ ನಿಧಿ ಶಂಕೆ
ಸ್ಥಳೀಯ ಕೆಲವರು ಹೇಳುವಂತೆ ಈ ಜಾಗದಲ್ಲಿ ನಿಧಿ ಇರುವ ಅನುಮಾನವನ್ನು ಹಲವರು ವ್ಯಕ್ತಪಡಿಸಿದ್ಧಾರೆ. ಹಿಂದಿನ ಕಾಲದಲ್ಲಿ ಈ ಜಾಗದಲ್ಲಿ ರಾಜ ವಂಶಸ್ಥರು ನೆಲೆಸಿದ್ದರು ಎನ್ನಲಾಗಿದೆ. ಹೀಗಾಗಿ ಅವರು ಈ ಭಾಗದಲ್ಲಿ ನಿಧಿಗಳನ್ನು ಹೂತಿಟ್ಟ ಬಗ್ಗೆಯೂ ಅನುಮಾನಗಳಿವೆ. ಅದರಂತೆ ಇದೀಗ ಏಕಾಏಕಿ ಭೂಮಿ ಕುಸಿತವಾಗಿರುವುದು ನಿಧಿಯಿಂದಲೇ ಎಂದು ಹಲವರು ಅಂತೆಕಂತೆಗಳನ್ನು ಹರಿಯವಿಟ್ಟಿದ್ಧಾರೆ. ಸದ್ಯ ಈ ಪ್ರದೇಶ ಸ್ಥಳೀಯವಾಗಿ ಹಲವಾರು ಕುತೂಹಲಕ್ಕೆ ಕಾರಣವಾಗಿದ್ದರೂ ಮನೆಯವರು ಮಾತ್ರ ಅದನ್ನು ಮುಚ್ಚದೇ ಬಿಟ್ಟಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.