Site icon Ullalavani

ವಿಜ್ಞಾನ ಕ್ಷೇತ್ರದಲ್ಲಿ ನೂತನ ಆವಿಷ್ಕಾರಗಳೊಂದಿಗೆ ಮುನ್ನಡೆಯಬೇಕು: ಡಾ.ಎ.ಕೆ.ಸಿಂಗ್

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಉಳ್ಳಾಲ: ಇಂದಿನ ಜಾಗತಿಕ ಮಟ್ಟದಲ್ಲಿ ನಾವೂ ಕೂಡಾ ಸದೃಡವಾಗಿ ಬೆಳೆದು ನಿಲ್ಲಬೇಕಾದರೆ ತಂತ್ರಜ್ಞಾನ ಮತ್ತು ವಿಜ್ಞಾನ ಕ್ಷೇತ್ರದ ಸಾಧನೆಗಳೊಂದಿಗೆ ಸಂಶೋಧನೆಗಳು ಹಾಗೂ ನೂತನ ಆವಿಷ್ಕಾರಗಳೊಂದಿಗೆ ಮುನ್ನಡೆಯಬೇಕಾಗಿದೆ ಎಂದು ದೆಹಲಿಯ ಇನ್‍ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಆಂಡ್ ಅಲೈಡ್ ಸೈಯನ್ಸಸ್ ಇದರ ನಿರ್ದೇಶಕ ಡಾ.ಎ.ಕೆ.ಸಿಂಗ್ ಅವರು ಅಭಿಪ್ರಾಯಪಟ್ಟರು.

ಅವರು ನಿಟ್ಟೆ ವಿಶ್ವವಿದ್ಯಾಲಯದ ರೇಡಿಯೇಶನ್ ಆಂಕಾಲಜಿ ವಿಭಾಗ ಮತ್ತು ಸೆಂಟ್ರಲ್ ರಿಸರ್ಚ್ ಲ್ಯಾಬರೋಟರಿ, ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ ಇದರ ಆಶ್ರಯದಲ್ಲಿ ದೆಹಲಿಯ ಇನ್‍ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಆಂಡ್ ಅಲೈಡ್ ಸೈಯನ್ಸಸ್ ಇದರ ಸಹಯೋಗದೊಂದಿಗೆ `ಬೈಯೋಡೋಸಿಮೆಟ್ರಿ’ ಎಂಬ ವಿಷಯದಲ್ಲಿ ನಡೆಯುವ ಮೂರು ದಿನಗಳ ಕಾರ್ಯಾಗಾರವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.

ವಿಕಿರಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಬೈಯೋಡೋಸಿಮೆಟ್ರಿಯ ಪಾತ್ರವು ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ವಿದೇಶಗಳಲ್ಲಿ ಅಂದೆ ಯು.ಎಸ್ ಮುಂತಾದ ರಾಷ್ಟ್ರಗಳಲ್ಲಿ ಬಹಳಷ್ಟು ಸಂಶೋಧನೆ ಕಾರ್ಯಗಳು ನಿರಂತರವಾಗಿ ನಡೆಯುತ್ತಿದೆ. ಭಾರತವು ಇತ್ತೀಚಿಗೆ ಈ ಕ್ಷೇತ್ರದಲ್ಲಿ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಸಾಧನೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ಯುವ ಸಮುದಾಯದಿಂದ ಹೆಚ್ಚೆಚ್ಚು ಸಂಶೋಧನಾ ಕಾರ್ಯಗಳು ನಡೆದು ಹೊಸ ಹೊಸ ಆವಿಷ್ಕಾರಗಳೊಂದಿಗೆ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ವಿಜ್ಞಾನಿ ಡಾ.ಬಿ.ಎಸ್.ರಾವ್ ಅವರನ್ನು ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಅವರು ಬೈಯೋಡೋಸಿಮೆಟ್ರಿ ಎಂಬುದು ಬಹಳ ಅಗತ್ಯವಾದ ಮತ್ತು ವಿಶೇಷವಾದ ಅಧ್ಯಯನ ಕ್ಷೇತ್ರವಾಗಿದ್ದು ಈ ಹಿಂದೆ ಈ ಬಗ್ಗೆ ಅಧ್ಯಯನ ಆಸಕ್ತಿ ತೋರಿಸುವವರು ಕಡಿಮೆಯಿದ್ದರೂ ಇತ್ತೀಚೆಗೆ ಬಹಳಷ್ಟು ಜನರು ಅಧ್ಯಯನದಲ್ಲಿ ತೊಡಗಿಸಿಕೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಇಂತಹ ಕಾರ್ಯಾಗಾರಗಳು ಹಲವಾರು ವಿಷಯಗಳ ಬಗ್ಗೆ ಮಾಹಿತಿ ನೀಡುವುದರೊಂದಿಗೆ ಕೂತೂಹಲಗಳ ನಿವಾರಣೆಗೆ ಅನುಕೂಲವಾಗುತ್ತದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಶಾಂತರಾಮ ಶೆಟ್ಟಿ ಅವರು ವಹಿಸಿ ಮಾತನಾಡಿದರು.ಕಾರ್ಯಾಗಾರದ ಸಂಯೋಜಕರಾದ ಡಾ.ಮಧುಬಾಲ ಅವರು ಕಾರ್ಯಾಗಾರದ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕ್ಷೇಮಾದ ಡೀನ್ ಡಾ.ಬಿ.ಸತೀಶ್ ಭಂಡಾರಿ, ಕಾರ್ಯಕ್ರಮ ಸಂಯೋಜಕ ಡಾ.ಜಯರಾಮ್ ಶೆಟ್ಟಿ, ಸಹ ಸಂಯೋಜಕ ಡಾ.ಸುಚೇತ ಕುಮಾರಿ, ದೆಹಲಿಯ ಇನ್‍ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಮೆಡಿಸಿನ್ ಆಂಡ್ ಅಲೈಡ್ ಸೈಯನ್ಸಸ್‍ನ ಡಾ.ಎನ್.ಕೆ.ಚೌಧರಿ ಮೊದಲಾದವರು ಉಪಸ್ಥಿತರಿದ್ದರು.

ಶಿಲ್ಪಾ ಕಾರ್ಯಕ್ರಮ ನಿರೂಪಿಸಿದರು.

Exit mobile version