Site icon Ullalavani

ಮಾನಸಿಕ ಅಸ್ವಸ್ಥನಿಂದ ಹಾರೆಯ ಹೊಡೆತಕ್ಕೊಳಗಾಗಿ ಸಾವಿಗೀಡಾದ ಮಾನ್ವಿ ಅಂತಿಮಸಂಸ್ಕಾರ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಕೋಟೆಕಾರು: ಪೂರ್ಣ ರಜಾ ಸವಿ ಅನುಭವಿಸಲೆಂದು ಕಾರ್ಕಳ ಬೋಳದ ಅಜ್ಜಿ ಮನೆಯಲ್ಲಿ ಮಾನಸಿಕ ಅಸ್ವಸ್ಥನಿಂದ ಹಾರೆಯ ಹೊಡೆತಕ್ಕೆ ಸಿಲುಕಿ ಜೀವನ್ಮರಣ ಹೋರಾಟದಲ್ಲಿ ಮಣಿಪಾಲ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ದೇರಳಕಟ್ಟೆ ನಡಾರ್ ರಮೇಶ್ ಸಾಮನಿ ಹಾಗೂ ಸಪ್ನಾ ದಂಪತಿ ಪುತ್ರಿ ಮಾನ್ವಿ (8) ಮೃತದೇಹವನ್ನು ಗುರುವಾರ ಸಂಜೆ ಸ್ವಗೃಹ ನಡಾರ್‍ಗೆ ತರಲಾಯಿತು.

ಎಳೆಯ ಕಂದಮ್ಮನನ್ನು ಕಳೆದುಕೊಂಡ ನೋವಿನಲ್ಲಿ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು. ಮನೆಯಲ್ಲಿ ಕುಟುಂಬಸ್ಥರು, ಸಂಬಂಧಿಕರು, ಆತ್ಮೀಯರು ಅಂತಿಮ ದರ್ಶನ ಪಡೆದರು. ಬಳಿಕ ಮಾಡೂರಿನ ಸ್ಮಶಾನದಲ್ಲಿ ಅಂತಿಮಕ್ರಿಯೆ ನಡೆಸಲಾಯಿತು.

ಮಾನ್ವಿ ನಡಾರಿನ ಅಸಿಸಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಎರಡನೇ ತರಗತಿಯಿಂದ ಮೂರನೇ ತರಗತಿಗೆ ತೇರ್ಗಡೆ ಹೊಂದಿದ್ದು ರಜಾ ಸವಿಯಲೆಂದು ಕಾರ್ಕಳ ಬೋಳದ ಅಜ್ಜಿ ಮನೆಗೆ ತೆರಳಿದ್ದಳು. ಭಾನುವಾರ ನಡಾರ್ ಮನೆಗೆ ಕರೆತರಲು ತಾಯಿ ಸಪ್ನಾ ಸಿದ್ಧವಾಗಿದ್ದರೂ ಕುಟುಂಬಸ್ಥರು ಬಂಧು ಬಳಗ ಇದ್ದುದರಿಂದ ಇನ್ನೆರಡು ದಿನ ಇದ್ದು ಹೋಗುವ ಆಸೆ ವ್ಯಕ್ತಪಡಿಸಿದ್ದರಿಂದ ತಾಯಿ ಸಪ್ನಾ ಅವರು ಮಗಳ ಆಶೆಯಂತೆ ನಡೆದುಕೊಂಡಿದ್ದರು. ವಿಧಿಯಾಟ ಯಮನ ರೂಪದಲ್ಲಿ ಬಂದ ಮಾನಸಿಕ ಅಸ್ವಸ್ಥ ಮನೆಯಲ್ಲಿ ಹಾಯಾಗಿ ಮಲಗಿದ್ದ ಮಗುವಿನ ತಲೆಗೆ ಹಾರೆಯಿಂದ ಬಲವಾಗಿ ಹೊಡೆದ ಪರಿಣಾಮ ಮಾನ್ವಿ ಎಲ್ಲರನ್ನು ಬಿಟ್ಟು ಬಾರದ ಲೋಕಕ್ಕೆ ತೆರಳಿದ್ದು ಪೋಷಕರು, ಕುಟುಂಬಸ್ಥರು, ಬಂಧು ಬಳಗ, ವಿದ್ಯಾರ್ಥಿಮಿತ್ರರು, ಶಾಲಾ ಶಿಕ್ಷಕ ವೃಂದವನ್ನು ದುಖದ ಮಡುವಿನಲ್ಲಿ ತೇಲಿಸಿದೆ.

 

Exit mobile version