Site icon Ullalavani

ಬಿಜೆಪಿ ವಿರುದ್ಧ ಕಾಂಗ್ರೆಸ್ ನಿಂದ ಜನಜಾಗೃತಿ ಸಭೆ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಉಳ್ಳಾಲ: ಹಿಂದು ಧರ್ಮದ ಮೂಲ ತತ್ವಗಳನ್ನು ಅರಿತು ಸಂಘಪರಿವಾರ ಮತ್ತು ಬಿಜೆಪಿ ರಾಜಕೀಯ ಮಾಡಲಿ. ಇಲ್ಲವಾದಲ್ಲಿ ದೇಶಕ್ಕೆ ಕಂಟಕ ಎದುರಾಗಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಇಬ್ರಾಹಿಂ ಕೋಡಿಜಾಲ್ ಹೇಳಿದ್ದಾರೆ.

ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಕೊಲೆ, ಹಲ್ಲೆ , ಅತ್ಯಾಚಾರ, ದರೋಡೆ ಮೊದಲಾದ ಕ್ರಿಮಿನಲ್ ಪ್ರಕರಣಗಳಿಗೆ ಕೋಮು ಬಣ್ಣ ಹಚ್ಚಿ ಮುಗ್ಧ ಜನರ ಭಾವನೆಗಳನ್ನು ಕೆರಳಿಸಿ ಜಿಲ್ಲೆಯ ಸಾಮರಸ್ಯವನ್ನು ಕದಡಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿರುವ ಬಿಜೆಪಿಯ ಕುಟಿಲ ಮತ್ತು ಅಪಾಯಕಾರಿ ರಾಜಕೀಯ ನೀತಿಯ ವಿರುದ್ಧ ಕಾಂಗ್ರೆಸ್ ಪಕ್ಷದ ಉಳ್ಳಾಲ ಮತ್ತು ಮುಡಿಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ಜನಜಾಗೃತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಜನ ಮತ ನೀಡಿ ಗೆಲ್ಲಿಸಿದ ಜಿಲ್ಲೆಯ ಸಂಸದರೇ ಜಿಲ್ಲೆಗೆ ಬೆಂಕಿ ಹಚ್ಚಲು ಹೊರಟು ರಾಜಕೀಯ ಲಾಭ ಮಾಡಲು ಹೊರಟಿರುವುದು ದುರದೃಷ್ಟ. ಕೊಣಾಜೆ ಕಾರ್ತಿಕ್ ರಾಜ್ ಪ್ರಕರಣ ಸಂಶಯದ ಪ್ರಕರಣವಾಗಿತ್ತು. ಇದನ್ನೇ ಲಾಭವನ್ನಾಗಿ ಬಿಜೆಪಿ ಉಪಯೋಗಿಸಿಕೊಂಡು ಜಾತಿ ಧರ್ಮದ ನಡುವೆ ಬೇಧ ಭಾವವನ್ನು ಹುಟ್ಟುಹಾಕುತ್ತಿದ್ದಾರೆ. ನೈಜ ಹಿಂದುಗಳು ವೇದದ ಪ್ರಕಾರ ಸರ್ವೇ ಜನ ಸುಖಿನೋ ಭವಂತು ‘ ಎಂಬ ಮಾತಿನಂತೆ ಬಾಳಬೇಕಿದೆ. ಆದರೆ ಹಿಂದುಗಳ ಹೆಸರಿನ ಸಂಘಟನೆಗಳು, ಬಿಜೆಪಿ ಪಕ್ಷ ಮೊದಲಿಗೆ ಮೂಲ ಹಿಂದು ತತ್ವಗಳನ್ನು ಅರಿತು ಬಳಿಕ ರಾಜಕೀಯ ಮಾಡಲಿ ಎಂದರು.

ವಿಧಾನಪರಿಷತ್‍ನ ಮುಖ್ಯಸಚೇತಕ ಐವನ್ ಡಿಸೋಜಾ ಮಾತನಾಡಿ ಮುಸ್ಲಿಂ ಸಮಾಜವನ್ನು ಎತ್ತಿಕಟ್ಟುವ ಸಲುವಾಗಿ ಜಿಲ್ಲೆಯ ಪ್ರಕರಣಗಳನ್ನು ರಾಜಕೀಯ ಲಾಭಕ್ಕಾಗಿ ಬಿಜೆಪಿಗರು ಉಪಯೋಗಿಸುತ್ತಿದ್ದಾರೆ. ಸಮಾಜಕ್ಕೆ ಜಾಗೃತಿ ಮೂಡಿಸುವ ಕಾರ್ಯ ಕಾಂಗ್ರೆಸ್ಸಿನಿಂದ ನಡೆಯುತ್ತಿರುವುದು ಉತ್ತಮ ಸಂದೇಶವಾಗಿದೆ. ಪ್ರಕರಣದ ನೈಜ ಆರೋಪಿಗಳನ್ನು ಬೇಧಿಸಿದ ಪೊಲೀಸ್ ಅಧಿಕಾರಿಗೆ ಮುಂದಿನ ದಿನದಲ್ಲಿ ಸನ್ಮಾನ ನಡೆಸುವ ಯೋಜನೆ ಕಾಂಗ್ರೆಸ್ ನಿಂದ ಆಗಲಿದೆ ಎಂದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್.ಗಟ್ಟಿ, ತಾ.ಪಂ ಮಾಜಿ ಸದಸ್ಯ ಮಹಮ್ಮದ್ ಮುಸ್ತಾಫ, ಬಂಟ್ವಾಳ ಹಾಗೂ ಮಂಗಳೂರು ತಾ.ಪಂ ಅಧ್ಯಕ್ಷರುಗಳಾದ ಮಹಮ್ಮದ್ ಮೋನು ಮಲಾರ್, ಚಂದ್ರಹಾಸ್ ಕರ್ಕೇರ, ಉಮ್ಮರ್ ಪಜೀರು, ಸುದರ್ಶನ್ ಶೆಟ್ಟಿ, ಪದ್ಮನಾಭ ನರಿಂಗಾನ, ಸೀತಾರಾಮ ಶೆಟ್ಟಿ, ನಗರಸಭೆ ಅಧ್ಯಕ್ಷ ಹುಸೈನ್ ಕುಂಞಮೋನು, ಮುತ್ತು ಶೆಟ್ಟಿ, ನಝರ್ ಶಾ, ಭರತೇಶ್ ಅಮೀನ್, ಉಸ್ಮಾನ್ ಕಲ್ಲಾಪು, ಬಾಝಿಲ್ ಡಿಸೋಜ, ಫಾರುಕ್ ಉಳ್ಳಾಲ್, ಇಸ್ಮಾಯಿಲ್. ಎ, ಅಮೀರ್ ತುಂಬೆ, ಪಿಯುಸ್ ಮೊಂತೇರೊ, ರಫೀಕ್ ಅಂಬ್ಲಮೊಗರ, ಸಿರಾಜ್ ಕಿನ್ಯಾ, ಪದ್ಮಾವತಿ, ಸಿದ್ದೀಖ್ ತಲಪಾಡಿ, ಎನ್.ಎಸ್.ಕರೀಂ, ದಮಯಂತಿ ಉಪಸ್ಥಿತರಿದ್ದರು.

ರಹಿಮಾನ್ ಕೋಡಿಜಾಲ್ ಸ್ವಾಗತಿಸಿದರು. ಚಂದ್ರಹಾಸ್ ಕರ್ಕೇರ ವಂದಿಸಿದರು.

Exit mobile version