ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಳ್ಳಾಲ: ಸಯ್ಯದ್ ಮದನಿ ಅರೆಬಿಕ್ ಎಜ್ಯುಕೇಶನ್ ಟ್ರಸ್ಟ್ ಆಶ್ರಯದಲ್ಲಿ ಮದರಸದ ಪಬ್ಲಿಕ್ ಪರೀಕ್ಷೆ ಆರಂಭಗೊಂಡಿದ್ದು, ಪ್ರಥಮ ಬಾರಿಗೆ ಟ್ರಸ್ಟ್ ವಿದ್ಯಾರ್ಥಿಗಳು ನಿಗದಿತ ಕೇಂದ್ರಗಳಲ್ಲಿ ಪರೀಕ್ಷೆ ಬರೆದರು.
5, 7 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಇದೇ ಮೊದಲ ಬಾರಿಗೆ ಉಳ್ಳಾಲ ಹಝ್ರತ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪರೀಕ್ಷಾ ಕೇಂದ್ರಗಳನ್ನು ಆರಂಭಿಸಲಾಗಿದೆ. ಪಬ್ಲಿಕ್ ಪರೀಕ್ಷೆ ಇದಾಗಿರುವುದರಿಂದ ಶಾಲೆಯಲ್ಲಿ ನಡೆಯುವಂತೆ ಪರೀಕ್ಷೆ ಬರೆಯುವ ಮಕ್ಕಳಿಗರ ಗುರುತು ಚೀಟಿ, ಹಾಲ್ ಟಿಕೆಟ್ ವ್ಯವಸ್ಥೆ ಮಾಡಲಾಗಿದ್ದು ಧಾರ್ಮಿಕ ಶಿಕ್ಷಣದಲ್ಲಿ ಹೊಸ ಪರಿಕಲ್ಪನೆಗೆ ನಾಂದಿ ಹಾಡಲಾಗಿದೆ.
ದರ್ಗಾ ಅಧೀನದಲ್ಲಿ ಚಾರಿಟೇಬಲ್ ಹಾಗೂ ಅರೆಬಿಕ್ ಎಜ್ಯುಕೇಶನ್ ಟ್ರಸ್ಟ್ ಎನ್ನುವ ಪ್ರತ್ಯೇಕ ವಿಭಾಗಗಳಿದ್ದು ದರ್ಗಾ ಅಧ್ಯಕ್ಷರು ಮುಖ್ಯಸ್ಥರಾಗಿದ್ದರೆ, ಉಳಿದೆರೆಡು ಟ್ತಸ್ಟ್ಗಳಿಗೆ ಉಪಾಧ್ಯಕ್ಷರ ಸಹಿತ ಪದಾಧಿಕಾರಿಗಳು, ಟ್ರಸ್ಟಿಗಳಿದ್ದಾರೆ. ಇಲ್ಲಿನ ಯೋಜನೆಗನ್ನು ಪದಾಧಿಕಾರಿಗಳು ಚರ್ಚಿಸಿ ಕೈಗೊಳ್ಳುತ್ತಿದ್ದು ದರ್ಗಾ ಸಮಿತಿಯ ಅನುಮತಿ ಬಳಿಕ ಕಾರ್ಯ ರೂಪಕ್ಕೆ ಬರುತ್ತದೆ. ಹಿಂದೆ ಆಯಾ ಮದರಸಗಳಲ್ಲಿ ಪರೀಕ್ಷೆ ಅಧೀನದಲ್ಲಿ ಪರೀಕ್ಷೆ ನಡೆಯುತ್ತಿತ್ತು. ಟ್ರಸ್ಟ್ ಅಧೀನದಲ್ಲಿ 33 ಮದರಸಗಳಿದ್ದು ಒಟ್ಟು 1,200 ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ.
ಶನಿವಾರ ಮೊದಲ ಪರೀಕ್ಷೆ ಆರಂಭಗೊಂಡಿದ್ದು ಕೇಂದ್ರಕ್ಕೆ ಬರುವ ಮುನ್ನ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್, ಅರೆಬಿಕ್ ಎಜ್ಯುಕೇಶನ್ ಟ್ರಸ್ಟ್ ಉಪಾಧ್ಯಕ್ಷ ಮಹಮ್ಮದ್, ಪ್ರಮುಖರಾದ ಅಮೀರ್ ಪಟ್ಣ, ಆಸಿಫ್ ಅಬ್ದುಲ್ಲಾ, ಅಬ್ಬಾಸ್, ಯು.ಟಿ.ಇಲ್ಯಾಸ್, ಯು.ಬಿ.ಯೂಸುಫ್, ಸುಲೈಮಾನ್ ಸಖಾಫಿ, ಟ್ರಸ್ಟಿ ಅಯೂಬ್ ಯು.ಬಿ, ಜಬ್ಬಾರ್ ಮೇಲಂಗಡಿ ಹಮೀದ್ ಕೋಡಿ, ಯು.ಕೆ.ಮಹಮ್ಮದ್ ಮುಸ್ತಫಾ, ಮೊಯಿನಬ್ಬ ಬೊಟ್ಟು, ಮುಸ್ತಫಾ ಇಸ್ಮಾಯಿಲ್ ಮೊದಲಾದವರು ಭೇಟಿ ನೀಡಿ ಪರಿಶೀಲಿಸಿದರು.