ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಕೊಣಾಜೆ: ಕೊಣಾಜೆ ಪಜೀರು ನಿವಾಸಿ ಉಮೇಶ್ ಗಾಣಿಗ ಎಂಬವರ ಪುತ್ರ ಕಾರ್ತಿಕ್ ರಾಜ್ (27) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಿಸಿಐಬಿ ಪೊಲೀಸರಿಂದ ಮೂವರು ಆರೋಪಿಗಳ ಬಂಧಿಸಿರುವುದಾಗಿ ತಿಳಿದುಬಂದಿದೆ.
ಕಾರ್ತಿಕ್ ಸಂಬಂಧಿ ಯುವತಿಯೇ ಆಕೆಯ ಪ್ರಿಯಕರ ಹಾಗೂ ಆತನ ಸಹೋದರನ ಜತೆಗೆ ಸೇರಿಕೊಂಡು ಹತ್ಯೆ ನಡೆಸಿರುವುದಾಗಿ ತಿಳಿದುಬಂದಿದೆ. ಅದರಂತೆ ಮೂವರನ್ನು ಡಿಸಿಐಬಿ ಪೊಲೀಸರು ಶುಕ್ರವಾರ ಬೆಳಿಗ್ಗೆ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇಂದು ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸೇರಿದಂತೆ, ಬಿಜೆಪಿಯ ಮುಖಂಡರು ಕಾರ್ತಿಕ್ ರಾಜ್ ಹತ್ಯೆ ಬಳಿಕ ಮನೆಗೆ ಭೇಟಿ ನೀಡಿದ್ದರು. ಅಲ್ಲದೆ ಆರೋಪಿಗಳ ಬಂಧನವಾಗದ ಹಿನ್ನೆಲೆಯಲ್ಲಿ ಬಿಜೆಪಿ ಸೇರಿದಂತೆ ಹಿಂದು ಹಿತ ರಕ್ಷಣಾ ವೇದಿಕೆ ವತಿಯಿಂದ ಎರಡು ಬಾರಿ ಕೊಣಾಜೆ ಪೊಲೀಸ್ ಠಾಣೆ ಎದುರುಗಡೆ ಪ್ರತಿಭಟನೆಯೂ ನಡೆದಿತ್ತು.
ಅ.23 , 2016 ರಂದು ಪಜೀರು ಮನೆಯಿಂದ ದೇರಳಕಟ್ಟೆಯ ಜಿಮ್ ಗೆಂದು ಅಸೈಗೋಳಿವರೆಗೆ ಜಾಗಿಂಗ್ ನಡೆಸುತ್ತಿದ್ದ ಸಂದರ್ಭ ನಸುಕಿನ 5 ಗಂಟೆ ವೇಳೆಗೆ ಅಪರಿಚಿತ ದುಷ್ಕರ್ಮಿಗಳು ತಲೆಗೆ ಸುತ್ತಿಗೆಯಿಂದ ಬಡಿದು ಹತ್ಯೆಗೆ ಯತ್ನಿಸಿದ್ದರು. ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದ ಕಾರ್ತಿಕ್ ನನ್ನು ದಿನಪತ್ರಿಕೆ ವಿತರಿಸುವ ಕಾರಿನ ಚಾಲಕರೋರ್ವರು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಒಂದು ದಿನದ ಕಾಲ ಚಿಂತಾಜನಕ ಸ್ಥಿತಿಯಲ್ಲಿದ್ದ ಕಾರ್ತಿಕ್ ಅ.24 ರಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿ ಆರೋಪಿಗಳ ಪತ್ತೆ 7 ತಿಂಗಳು ಕಳೆದರೂ ಸಾಧ್ಯವಾಗಿರಲಿಲ್ಲ. ಸಂಬಂಧಿ ಯುವತಿ ಪ್ರಿಯಕರ ಹಾಗೂ ಆತನ ಸಹೋದರನಿಗೆ ರೂ. 5 ಲಕ್ಷ ಸುಪಾರಿ ನೀಡಿ ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ. ಈ ಹಣವನ್ನು ಆರೋಪಿ ಉಪಯೋಗಿಸಿಕೊಂಡು ಸುಸಜ್ಜಿತ ಮನೆಯನ್ನು ನಿರ್ಮಿಸಿದ್ದು, ಮೇ.1 ರಂದು ಗೃಹಪ್ರವೇಶ ನಡೆಯುವುದರಲ್ಲಿತ್ತು.