ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಬಾಹುಬಾಲಿ 2 ಸಿನಿಮಾ ನೋಡಲು ಹೋಗಬೇಕು ಆದರೆ ಈ ದುಬಾರಿ ಸಿನಿಮಾ ಟಿಕೆಟ್ ದರವನ್ನು ಯಾರಪ್ಪಾ ಕೊಡುವುದು ಎಂದು ತಲೆಕೆಡಿಸಿಕೊಳ್ಳುತ್ತಿರುವ ಸಿನಿಪ್ರಿಯರಿಗೆ ಇಲ್ಲಿದೆ ಶುಭಸುದ್ದಿ.
ಕರ್ನಾಟಕ ಸರಕಾರ ಸಿನಿಮಾ ಟಿಕೆಟ್ ದರವನ್ನು ಗರಿಷ್ಠ ರೂ 200 ಎಂದು ನಿಗದಿಪಡಿಸಿದ್ದು ಈ ಬಗ್ಗೆ ಈಗಾಗಲೇ ಅಧಿಕೃತ ಸೂಚನೆಯನ್ನು ಹೊರಡಿಸಿದೆ. ಈ ಆದೇಶವು ಇಂದಿನಿಂದಲೇ ಜಾರಿಗೆ ಬರಲಿದ್ದು ಬಾಹುಬಲಿ 2 ಸಿನಿಮಾ ಈ ಆದೇಶಕ್ಕೆ ಒಳಪಡುವ ಮೊದಲ ಸಿನಿಮಾವಾಗಲಿದೆ. ಹಾಗಾಗಿ ರಾಜಮೌಳಿಯ ಬೆಳ್ಳಿತೆರೆಯ ಮೇಲಿನ ಕೌತುಕವನ್ನು ಕೇವಲ ರೂ. 200ರಲ್ಲಿ ನೋಡಬಹುದಾಗಿದೆ.
ಇದರೊಂದಿಗೆ ಮಲ್ಟಿಪ್ಲೆಕ್ಸ್‍ಗಳಲ್ಲಿ ಕನ್ನಡ ಸಿನಿಮಾ ಪ್ರದರ್ಶಿಸುವುದನ್ನೂ ಕಡ್ಡಾಯಗೊಳಿಸಲಾಗಿದೆ. ಪ್ರೈಮ್‍ಟೈಮ್‍ಗಳಲ್ಲಿ ಅಂದರೆ ಅಪರಾಹ್ನ 1.30, 4.30 ಮತ್ತು 7.30ರ ಸಮಯಗಳಲ್ಲಿ ಕನ್ನಡ ಸಿನಿಮಾಗಳನ್ನು ಪ್ರದರ್ಶಿಸುವುದು ಕಡ್ಡಾಯಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕನ್ನಡ ಚಲನಚಿತ್ರರಂಗ ಹಲವು ಸಮಯಗಳಿಂದ ಪ್ರಾದೇಶಿಕ ಸಿನಿಮಾ ವೀಕ್ಷಕರ ಒಳಿತನ್ನು ಕಾಪಾಡುವಂತೆ ಹಾಗೂ ಟಿಕೆಟ್ ದರವನ್ನು ನಿಗದಿಪಡಿಸುವಂತೆ ಸರಕಾರವನ್ನು ವಿನಂತಿಸುತ್ತಲೇ ಇತ್ತು. ಅದರ ಪರಿಣಾಮವಾಗಿ ಸರಕಾರ ಈ ಕ್ರಮಕ್ಕೆ ಮುಂದಾಗಿದೆ.
ಪಾಪ್‍ಕಾರ್ನ್ ದರದ ಗತಿಯೇನು?
ಮಲ್ಟಿಪ್ಲೆಕ್ಸ್‍ಗಳಲ್ಲಿ ಮಾರಾಟ ಮಾಡಲಾಗುವ ತಿಂಡಿ ತಿನಿಸುಗಳಿಗೆ ಭೂಮಿಯ ಮೇಲೆಲ್ಲೂ ಇಲ್ಲದ ದರವನ್ನು ನಿಗದಿಪಡಿಸಲಾಗಿರುತ್ತದೆ. ಇಲ್ಲಿ ಮಾರಾಟ ಮಾಡುವ ಪಾಪ್‍ಕಾರ್ನ್ ಹಾಗೂ ಇತರ ತಿನಿಸುಗಳು ಮತ್ತು ಪಾನೀಯಗಳ ಬೆಲೆ ಸಾಮಾನ್ಯ ಬೆಲೆಗಿಂತ ಹಲವು ಪಟ್ಟು ಅಧಿಕವಾಗಿರುತ್ತದೆ. ಇದನ್ನು ಹಗಲುದರೋಡೆ ಎಂದು ಬಣ್ಣಿಸಿರುವ ಸಾ ರಾ ಗೋವಿಂದು ಈ ಬಗ್ಗೆ ಈ ದರಗಳನ್ನು ಮಲ್ಟಿಪ್ಲೆಕ್ಸ್‍ಗಳು ಕಡಿಮೆಗೊಳಿಸಬೇಕು ಇಲ್ಲವಾದಲ್ಲಿ ಈ ಬಗ್ಗೆಯೂ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
