ಉಳ್ಳಾಲ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ರಾಜ್ಯಾದ್ಯಂತ ಅಧಿಕಾರಿಗಳ ಮೇಲೆ ಕಾಂಗ್ರೆಸ್ ಸರಕಾರ ದೌರ್ಜನ್ಯ ಎಸಗುತ್ತಲೇ ಬಂದಿದ್ದು, ಇದು ಉಳ್ಳಾಲ ನಗರಸಭೆಯಲ್ಲಿಯೂ ನಡೆದಿರುವುದು ಖಂಡನೀಯ, ಕೂಡಲೇ ಆಪಾದಿತ ನಗರಸಭೆ ಸದಸ್ಯರನ್ನು ವಜಾಗೊಳಿಸಬೇಕು ಎಂದು ಬಿಜೆಪಿಯ ರಾಜ್ಯ ಸಹವಕ್ತಾರೆ ಸುಲೋಚನಾ ಜಿ.ಕೆ.ಭಟ್ ಹೇಳಿದ್ದಾರೆ.
ಮೈಸೂರಿನ ಶಿಖಾ ಪ್ರಕರಣದಲ್ಲಿ ಮುಖ್ಯಮಂತ್ರಿಯ ಆಪ್ತ ಸಚಿವನೇ ತೊಂದರೆ ನೀಡಿರುವ ಜ್ವಲಂತ ಸಾಕ್ಷಿ ಎಲ್ಲರ ಕಣ್ಣೆದುರಿಗೆ ಇದೆ. ಅಧಿಕಾರಿಗಳ ಮಾನಸಿಕ ಸ್ಥೈರ್ಯ ಕುಗ್ಗಿಸುವ ರೀತಿಯಲ್ಲಿ ನಗರಸಭೆಯಿಂದ ರಾಜ್ಯದ ಆಡಳಿತವರೆಗೆ ಆಡಳಿತ ನಡೆಯುತ್ತಿದೆ. ಇದರಿಂದ ಜನಸಾಮಾನ್ಯರು ಯಾವುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಪೌರಾಯುಕ್ತೆ ಮಹಿಳೆ ವಿರುದ್ಧ ಅವಾಚ್ಯಶಬ್ದಗಳಿಂದ ನಿಂದಿಸಿರುವ ನಗರಸಭೆ ಸದಸ್ಯನ ವಿರುದ್ಧ ಕ್ರಮ ಜರಗಿಸಬೇಕಿದೆ ಎಂದರು.
ಮಂಗಳೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಮಾತನಾಡಿ ಅಧಿಕಾರಿಗಳ ಮೇಲೆ ದಬ್ಬಾಳಿಕ ನಡೆಸಿರುವ ಘಟನೆ ಖಂಡನೀಯ. ಅಪಮಾನ, ದೌರ್ಜನ್ಯ ಆಗದ ರೀತಿಯಲ್ಲಿ ವರ್ತಿಸಬೇಕಾದ ಜನಪ್ರತಿನಿಧಿಯೇ ಇಂತಹ ಪ್ರಕರಣ ನಡೆಸಿರುವುದು ಕಳವಳಕಾರಿ, ಮಾದರಿ ನಗರಸಭೆಯಾಗಿ ರೂಪುಗೊಳ್ಳಲು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಆಡಳಿತ ಬರಬೇಕಿದೆ. ಅದಕ್ಕಾಗಿ ಜನ ಬೆಂಬಲಿಸಬೇಕಿದೆ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ ಮಾತನಾಡಿ ಮಹಿಳೆಯರು ಹೊಟ್ಟೆಪಾಡಿಗಾಗಿ ವಿವಿಧ ಸರಕಾರಿ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಮೇಲೆ ಸಮಾಜ ತಿದ್ದಬೇಕಾದ ಜನಪ್ರತಿನಿಧಿಯೇ ಮಾನಸಿಕ ಹಿಂಸೆ ನೀಡುವುದು ಖಂಡನೀಯ. ಇದರಿಂದಾಗಿ ಮಹಿಳಾ ಅಧಿಕಾರಿಗಳು ಇಂತಹ ಕ್ಷೇತ್ರಕ್ಕೆ ದುಡಿಯಲು ಬರಲು ಹಿಂಜರಿಯುತ್ತಾರೆ. ಮಹಿಳೆಗೆ ಅಗೌರವ ತೋರಿಸುವಂತಹ ನಗರಸಭೆಗೆ ಯಾವುದೇ ಸ್ಥಾನಮಾನ ಸಿಗಲು ಸಾಧ್ಯವಿಲ್ಲ ಎಂದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಮುಖಂಡರಾದ ಬಾಬು ಬಂಗೇರ ಉಳ್ಳಾಲ, ಸಂಜೀವ ಶೆಟ್ಟಿ ಅಂಬ್ಲಮೊಗರು, ಮೋಹನದಾಸ ಶೆಟ್ಟಿ ಕಿನ್ಯ, ಡಾ| ಮುನೀರ್ ಬಾವ, ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ಲಲಿತಾ ಸುಂದರ್, ಕ್ಷೇತ್ರ ಮಹಿಳಾ ಮೋರ್ಚಾ ಅಧ್ಯಕ್ಷೆ ರಮಣಿ, ನಗರಸಭೆ ಸದಸ್ಯರಾದ ಸರಿತಾ ಜೀವನ್ ಕುಮಾರ್, ಮಹಾಲಕ್ಷ್ಮಿ, ಸೂರ್ಯಕಲಾ, ಹನೀಫ್ ಕೋಟೆಪುರ, ಶಶಿಕಲಾ, ಮೀನಾಕ್ಷಿ ದಾಮೋದರ್, ಕ್ಷೇತ್ರ ಉಪಾಧ್ಯಕ್ಷರಾದ ಯಶವಂತ ಅಮೀನ್, ಪ್ರಕಾಶ್ ಸಿಂಫೋನಿ, ಕ್ಷೇತ್ರ ಪ್ರಧಾನ ಕಾರ್ಯದರ್ಶಿಗಳಾದ ಮೋಹನ್‍ರಾಜ್ ಕೆ.ಆರ್., ಮನೋಜ್ ಆಚಾರ್ಯ ,ಕೋಶಾಧಿಕಾರಿ ಮಯೂರ್ ಉಳ್ಳಾಲ್, ಕಾರ್ಯದರ್ಶಿ ಹೇಮಂತ ಶೆಟ್ಟಿ ಬೆಳ್ಮ , ಶಕ್ತಿ ಕೇಂದ್ರದ ಅಧ್ಯಕ್ಷ ಸುರೇಂದ್ರ ಶೆಟ್ಟಿ ಮಂಚಿಲ, ಪ್ರ. ಕಾರ್ಯದರ್ಶಿ ಪ್ರಶಾಂತ್ ಕಾಪಿಕಾಡ್, ಗಣೇಶ್ ಕಾಪಿಕಾಡು, ಭಗವಾನ್‍ದಾಸ್, ಹರೀಶ್ ಅಂಬ್ಲಮೊಗರು, ಗೋಪಿನಾಥ್ ಬಗಂಬಿಲ, ಆನಂದ ಶೆಟ್ಟಿ ಭಟ್ನಗರ, ಜೀವನ್ ಕುಮಾರ್ ಕೆರೆಬೈಲ್, ಕ್ಷೇತ್ರ ಕಾರ್ಯದರ್ಶಿ ಅಸ್ಗರ್ ಆಲಿ ಮೊದಲಾದವರು ಉಪಸ್ಥಿತರಿದ್ದರು.
`ಒಗ್ಗಟ್ಟಾಗಿ ಹೊಡೆಯಬೇಕಿತ್ತು’
ಮಹಿಳೆಯನ್ನು ಸಾರ್ವಜನಿಕವಾಗಿ ನಿಂದಿಸುವ ಜನಪ್ರತಿನಿಧಿಗೆ ಉಳಿದ ನಗರಸಭೆಯ ಮಹಿಳಾ ಉದ್ಯೋಗಿಗಳು ಒಗ್ಗಟ್ಟಾಗಿ ಹೊಡೆಯಬೇಕಿತ್ತು. ಎಲ್ಲರೂ ಮೂಖವಾಗಿಬಿಟ್ಟರೆ, ಮುಂದೆ ಸಹೋದ್ಯೋಗಿಗಳಿಗೂ ಇಂತಹದ್ದೇ ಸ್ಥಿತಿ ಎದುರಾಗಬಹುದು. ನೀಚವಾಗಿ ಬೈಯ್ಯುವ ಇಂತಹ ಜನಪ್ರತಿನಿಧಿಯನ್ನು ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಘೋಷಿಸುವ ಸಚಿವರ ಮನಸ್ಥಿತಿ ಹೇಗಿರಬೇಕು ಎಂದು ಪ್ರಶ್ನಿಸಿದ ಅವರು ನಗರಸಭೆಯಲ್ಲಿ ಅನುದಾನ ವಿತರಣೆಯಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ವಿರೋಧ ಪಕ್ಷದ ನಾಯಕಿ ಮಹಾಲಕ್ಷ್ಮಿ ಆರೋಪಿಸಿದರು.
ವಗಾವಣೆ ಬೆದರಿಕೆಯೊಡ್ಡಿ ದರು
ಘಟನೆ ಕುರಿತು ಸಚಿವರಲ್ಲಿ ದೂರು ನೀಡಲಯ ಮಂಗಳೂರಿನ ಸಕ್ರ್ಯೂಟ್ ಹೌಸ್ ಗೆ ಬಂದಿದ್ದ ಪೌರಾಯುಕ್ತೆಯನ್ನೇ ವಗಾವಣೆ ಗೊಳಿಸುವ ಬೆದರಿಕೆಯೊಡ್ಡಿ ಸಚಿವರೇ ಸುಮ್ಮನಾಗಿಸಿದ್ದಾರೆ. ಪಕ್ಷದೊಳಗಿನ ಅನಾಚಾರವನ್ನು ಮನಗಂಡು ಖುದ್ದು ಸಚಿವರ ಸಹೋದರನೇ ಬಿಜೆಪಿಗೆ ಬರಲು ಮುಂದಾಗಿದ್ದಾರೆ. ಅದಕ್ಕಾಗಿ ಬಿಜೆಪಿಯ ರಾಜ್ಯಾಧ್ಯಕ್ಷ, ಜಿಲ್ಲಾಧ್ಯಕ್ಷರ ಜತೆಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ. ಪಾರ್ಟಿ ಫಂಡಿನ ನೆಪದಲ್ಲಿ ಹಣವನ್ನು ಸುಲಿಗೆ ಮಾಡುತ್ತಿರುವ ಸ್ಥಾಯಿ ಸಮಿತಿ ಅಧ್ಯಕ್ಷ ಇದೀಗ ಅಧಿಕಾರಿ ವಿರುದ್ಧವೇ ಅಶ್ಲೀಲವಾಗಿ ನಿಂದಿಸಿ ತನ್ನ ವ್ಯವಹಾರಕ್ಕೆ ಅಡ್ಡಿಯಾಗದಂತೆ ಗೂಂಡಾ ಪ್ರವೃತ್ತಿಯನ್ನು ನಡೆಸಿದ್ದಾರೆ. ಪೌರಾಯುಕ್ತೆ ಹೇಡಿಯಾಗದೆ ಅನುಪಮಾ ಶೆಣೈ, ಕಿರಣ್ ಬೇಡಿಯಂತೆ ದಿಟ್ಟತನ ಪ್ರದರ್ಶಿಸಿ ಸ್ಥಾಯಿ ಸಮಿತಿ ಅಧ್ಯಕ್ಷನ ವಿರುದ್ಧ ಹೋರಾಡಬೇಕಿದೆ ಎಂದು ಬಿಜೆಪಿ ಅಲ್ಪಸಂಖ್ಯಾತ ಮುಖಂಡ ಅಝ್ಗರ್ ಆರೋಪಿಸಿದರು.