Site icon Ullalavani

ಉಳ್ಳಾಲ: ಎಸ್‍ಡಿಪಿಐ ಬೃಹತ್ ಸಾರ್ವಜನಿಕ ಸಮಾವೇಶ

ಉಳ್ಳಾಲ ನ್ಯೂಸ್ ನೆಟ್ ವರ್ಕ್

ಉಳ್ಳಾಲ; ದೇಶದಲ್ಲಿ ಕರಾಳ ಕಾನೂನು ಮುಸ್ಲಿಮರು, ದಲಿತರು ಹಾಗೂ ಆದಿವಾಸಿಗಳನ್ನು ಭಯಗ್ರಸ್ಥ ವಾತಾವರಣದಲ್ಲಿ ಬದುಕುವಂತೆ ಮಾಡಿದ್ದು ಇದರಿಂದ ಸಮಾಜದಲ್ಲಿ ಭೀತಿ ರಾಜಕೀಯ ತಾಂಡವವಾಡುತ್ತಿದೆ. ಅಂತಹ ವಾತಾವರಣ ಮಟ್ಟಹಾಕಲು ಶಾಂತಿಪ್ರಿಯ ಪ್ರಜೆಗಳು ಒಂದಾಗಬೇಕಿದೆ. ಆ ನಿಟ್ಟಿನಲ್ಲಿ ಎಸ್ಡಿಪಿಐ ನಡೆಸುತ್ತಿರುವ ಭೀತಿ ರಾಜಕೀಯದ ವಿರುದ್ಧ ಐಕ್ಯಗೊಳ್ಳೋಣ ರಾಷ್ಟ್ರವ್ಯಾಪಿ ಅಭಿಯಾನ ಯಶಸ್ವಿಯಾಗಿ ಸಾಗುತ್ತಿದ್ದು ಎ. 29ರಂದು ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಮಾಪನಗೊಳ್ಳಲಿದೆ ಎಂದು ಎಸ್ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎ. ಸಯೀದ್ ಹೇಳಿದರು.

ಎಸ್ಡಿಪಿಐ ವತಿಯಿಂದ ಉಳ್ಳಾಲ ಹಝ್ರತ್ ಶಾಲಾ ಮೈದಾನದ ವೀರರಾಣಿ ಅಬ್ಬಕ್ಕ ವೇದಿಕೆಯಲ್ಲಿ ನಡೆದ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಅವರು ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದೇಶಾದ್ಯಂತ ವಿಶೇಷವಾಗಿ ಅಲ್ಪಸಂಖ್ಯಾತರ, ದಲಿತರ, ಆದಿವಾಸಿಗಳ ಮನದಲ್ಲಿ ಭೀತಿ ಹಾಗೂ ಅಭದ್ರತೆ ಹೆಚ್ಚಿದೆ. ಹತ್ಯೆ, ಪ್ರತೀಕಾರ, ಕೊಲೆ, ಧ್ವಂಸ, ಸಾಮರಸ್ಯ ಕದಡುವಂತಹ ಕಾರ್ಯಗಳು ಕಾನೂನಿನ ಯಾವುದೇ ಭಯವಿಲ್ಲದೆ ಎಗ್ಗಿಲ್ಲದೆ ಸಾಗುತ್ತಿದೆ. ಅಷ್ಟಕ್ಕೂ ದುಷ್ಕರ್ಮಿಗಳ ಅಟ್ಟಹಾಸ ತಾರಕಕ್ಕೆ ಏರಿದ್ದರೂ ಕೇಂದ್ರ ಸರಕಾರ ಮೌನ ವಹಿಸಿರುವುದು ದುಷ್ಕರ್ಮಿಗಳಿಗೆ ಹೆಚ್ಚಿನ ಬಲ ತಂದಿದೆ ಎಂದರು.

ಬಿಜೆಪಿ ಸರಕಾರದ ಭ್ರಷ್ಟ ಹಾಗೂ ತಾರತಮ್ಯ ನೀತಿ ಮತ್ತು ಆಡಳಿತದ ಬಗ್ಗೆ ಪ್ರಶ್ನಿಸಿದರೆ ರಾಷ್ಟ ್ರನಿಂದನೆ ಕೇಸು ದಾಖಲಿಸಿ ಜೈಲಿಗೆ ಅಟ್ಟುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಹಕ್ಕುಗಳಿಗೆ ಹೋರಾಟ ಮಾಡುವವರನ್ನು ದೇಶದ್ರೋಹಿಗಳು ಹಾಗೂ ದೇಶ ವಿರೋಧಿಗಳು ಎಂದು ಬಿಂಬಿಸಿ ಸಮಾಜದಿಂದ ದೂರವಿಡುವ ಕೆಲಸ ಮಾಡುತ್ತಿದೆ. ಮೋದಿ ಸಂಘ ಪ್ರಾಯೋಜಿತ ಮಾಧ್ಯಮ ಗುಂಪುಗಳು ಕೆಲವರಿಗೆ ಕಲ್ಪಿತ ಸುದ್ದಿಗಳಿಗೆ ಹೆಚ್ಚಿನ ರಂಜನೆ ಕೊಡುತ್ತಿದ್ದು ಜನರ ದಿಕ್ಕು ತಪ್ಪಿಸುತ್ತಿದೆ ಎಂದ ಅವರು ಕೋಮುವಾದಿ ಪಡೆ ಪ್ರಗತಿಪರ ಚಿಂತಕರನ್ನು ಮಾನವ ಹಕ್ಕು ಹೋರಾಟಗಾರರನ್ನು ಬಿಡದೆ ಹಿಂಸಿಸುತ್ತಿದೆ. ಪ್ರಗತಿಪರ ಚಿಂತಕರಾದ ಗೋವಿಂದ ಪನ್ಸಾರೆ, ದಾಮೋದರ ಧಾಬೋಲ್ಕರ್, ಎಂ.ಎಂ. ಕಲ್ಬುರ್ಗಿ ಅವರನ್ನು ಕ್ರೂರವಾಗಿ ಯವ್ಯವಸ್ಥಿತ ರೀತಿಯಲ್ಲಿ ಕೊಲೆ ಮಾಡಲಾಗಿದೆ. ಪೋಲಿಸ್ ದೌರ್ಜನ್ಯ ವ್ಯಾಪಕವಾಗಿ ನಡೆಯುತ್ತಿದೆ. ದೇಶವನ್ನೇ ಅಭದ್ರತೆಗೆ ತಂದಿತ್ತಿರುವ ಅದೆಷ್ಟೋ ಪ್ರಕರಣಗಳು ಇದ್ದರೂ ಸಮಸ್ಯೆಗಳ ಬಗ್ಗೆ ಹೋರಾಟ ಮಾಡಬೇಕಿದ್ದ ಜಾತ್ಯತೀತ ಪಕ್ಷಗಳು ಮೌನವಹಿಸಿದ್ದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಎಂದು ನುಡಿದರು.

ಆಹಾರ ಸಾಮಗ್ರಿಗಳ ಬೆಲೆ ಗಗನಕ್ಕೇರಿದ್ದು ಬಹುರಾಷ್ಟ್ರೀಯ ಸಂಸ್ಥೆಗಳನ್ನು ಘೋಷಿಸಲಾಗುತ್ತಿದ್ದು ರೈತರನ್ನು ಕಡೆಗಣಿಸಲಾಗುತ್ತಿದೆ. ರೈತರು ಸಾಲ ಮನ್ನಾ ಮಾಡಲು ಅದೆಷ್ಟೋ ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದರೂ ಸರಕಾರ ನಿರ್ಲಕ್ಷ್ಯ ವಹಿಸಿದೆ. ಬೆಳೆ ತೀರಿಸಲಾಗದೆ ಸಾಲ ತೀರಿಸಲಾಗದೆ ರೈತರು ಆತ್ಮಹತ್ಯೆಗೈಯುತ್ತಾ ಕುಟುಂಬವನ್ನು ಬೀದಿಗೆ ಬೀಳುತ್ತಿದೆ. ಹಾಗಿದ್ದರೂ ಬಡವರ ಬಗ್ಗೆ ಎಳ್ಲಷ್ಟೂ ಕಾಳಜಿ ಇಲ್ಲದಿರುವ ಸರಕಾರ ಬಹುರಾಷ್ಟ್ರೀಯ ಸಂಸ್ಥೆಗಳ ಸಾಲ ಮನ್ನಾ ಮಾಡಲು ಉತ್ಸುಕವಾಗಿದೆ ಎಂದು ಆರೋಪಿಸಿದರು.

ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮೊಹಮ್ಮದ್, ರಾಜ್ಯ ಕಾರ್ಯದರ್ಶಿ ಇಲ್ಯಾಸ್ ಪರಂಗಿಪೇಟೆ, ಅಲ್ಪೋನ್ಸ್ ಫ್ರಾಂಕೋ, ಅಕ್ರಮ ಹಸನ್ ಮಾತನಾಡಿದರು.

ಎಸ್ಡಿಪಿಐ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯ ಕೂಸಪ್ಪ, ಮಜೀದ್ ಖಾನ್, ಸಿದ್ದಿಕ್ ಪುತ್ತೂರು, ಅಬ್ಬಾಸ್ ಕಿನ್ಯ, ನಾಸಿರ್ ಸಜಿಪ, ಅಯಾಝ್ ಕೃಷ್ಣಾಪುರ, ಇಕ್ಬಾಲ್ ಐ.ಎಂ.ಆರ್, ಹಾರಿಸ್ ಮಲಾರ್, ನವಾಝ್ ಉಳ್ಳಾಲ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಅತ್ತಾವುಲ್ಲಾ ಜೋಕಟ್ಟೆ ಸ್ವಾಗತಿಸಿದರು. ಅಶ್ರಪ್ ಮಂಚಿ ವಂದಿಸಿದರು. ಇಕ್ಬಾಲ್ ಬೆಳ್ಳಾರೆ ಹಾಗೂ ಝಾಹಿದ್ ಮಲಾರ್ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮಕ್ಕೆ ಮುನ್ನ ತೊಕ್ಕೊಟ್ಟಿನಿಂದ ಉಳ್ಳಾಲ ಪೇಟೆಯ ತನಕ ಕಾಲ್ನಡಿಗೆ ಭವ್ಯ ಮೆರವಣಿಗೆ ಜಾಥಾ ನಡೆಯಿತು.






 

Exit mobile version