Site icon Ullalavani

ಕುತ್ತಾರು ಶಾಂತಿಭಾಗ್ ವಸತಿಗೃಹದಲ್ಲಿ ನಡೆದ ಚೂರಿ ಇರಿತ ಓರ್ವನ ಸಾವು, ಇನ್ನೊರ್ವ ಗಾಯ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ತೊಕ್ಕೊಟ್ಟು : ಕುತ್ತಾರು ಶಾಂತಿಭಾಗ್ ಸಮೀಪದ ಖಾಸಗಿ ವಸತಿಗೃಹದಲ್ಲಿ ನಡೆದ ಚೂರಿ ಇರಿತದಲ್ಲಿ ಓರ್ವ ಸಾವನ್ನಪ್ಪಿದರೆ ಇನ್ನೊರ್ವ ಗಾಯಗೊಂಡ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.

ಚೂರಿ ಇರಿತದಿಂದ ಮೃತಪಟ್ಟವನು ಬಿಹಾರ ಮೂಲದ ನಿತೇಶ್(20) ಎಂದು ಗುರುತಿಸಲಾಗಿದ್ದು, ನೇಪಾಲ ಮೂಲದ ಪ್ರದೀಪ್(21) ಗಾಯಗೊಂಡಿದ್ದಾರೆ. ಚೂರಿ ಇರಿತ ನಡೆಸಿದ ಆರೋಪಿ ಒಡಿಸ್ಸಾ ಮೂಲದ ಆರಿಫ್ ಖಾನ್ ಅಲಿಯಾಸ್ ಮುನ್ನಾ (18) ತಲೆಮರೆಸಿಕೊಂಡಿದ್ದಾನೆ. ಮೃತ ಯುವಕ ಸೇರಿದಂತೆ ಆರೋಪಿ ಎಲ್ಲರೂ ಒಂದೇ ಹೋಟೆಲ್‍ನಲ್ಲಿ ಕೆಲಸ ಮಾಡುತ್ತಿದ್ದವರಾಗಿದ್ದು, ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಘಟನೆಯ ವಿವರ : ದೇರಳಕಟ್ಟೆಯ ಯೇನೆಪೊಯ ಆಸ್ಪತ್ರೆ ಬಳಿಯ ಖಾಸಗಿ ರೆಸ್ಟಾರೆಂಟೊಂದರಲ್ಲಿ ಕೆಲಸ ಮಾಡುತ್ತಿದ್ದ ನಿತೇಶ್, ಆರಿಫ್ ಖಾನ್ ಸೇರಿದಂತೆ ಆರು ಮಂದಿ ಶಾಂತಿಭಾಗ್ ಸಮೀಪದ ಖಾಸಗಿ ವಸತಿಗೃಹದಲ್ಲಿ ಬಾಡಿಗೆಗೆ ವಾಸವಾಗಿದ್ದರು. ಇವರಲ್ಲಿ ಆರಿಫ್ ಖಾನ್ , ರಾಣಾ, ಮಿಥುನ್ ಬೆಳಗ್ಗೆ 7ರಿಂದ ರಾತ್ರಿ 7ರವರೆಗೆ ಹೋಟೆಲ್‍ನಲ್ಲಿ ಕಾರ್ಯ ನಿರ್ವಹಿಸಿದರೆ, ಮೃತ ನಿತೇಶ್ ಸೇರಿದಂತೆ ಪ್ರದೀಪ್ ಮತ್ತು ದೀಪಕ್ ಬೆಳಗ್ಗೆ 11ರಿಂದ ರಾತ್ರಿ 11ರವರೆಗೆ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಶುಕ್ರವಾರ ಎಂದಿನಂತೆ ಕೆಲಸ ಮುಗಿಸಿ ತಡರಾತ್ರಿಗೆ ನಿತೇಶ್ ಮತ್ತು ಆತನ ಸ್ನೇಹಿತರು ರೂಂಗೆ ಬಂದು ಮಲಗಿದ್ದರು. ಶನಿವಾರ ಬೆಳಗ್ಗೆ ಆರಿಫ್ ಖಾನ್ ಮತ್ತಿಬ್ಬರು ಮೊದಲ ಶಿಪ್ಟ್‍ನಲ್ಲಿ ಹೋಟೆಲ್ ಕಲೆಸಕ್ಕೆ ತೆರಳಿದ್ದು, ರಾತ್ರಿ ತಡವಾಗಿ ಬಂದು ಮಲಗಿದ್ದ ನಿತೇಶ್ ಮತ್ತು ಇನ್ನಿಬ್ಬರು ಬೆಳಗ್ಗೆ ಎದ್ದಿರಲಿಲ್ಲ. ಆದರೆ ಬೆಳಗ್ಗೆ ಕೆಲಸಕ್ಕೆ ತೆರಳಿದ್ದ ಆರಿಫ್ ಖಾನ್ ಒಬ್ಬನೇ ಹೋಟೆಲ್‍ನಿಂದ ರೂಂಗೆ ಬಂದು ಮಲಗಿದ್ದ ನಿತೇಶ್ ಮೇಲೆ ಚೂರಿಯಿಂದ ದಾಳಿ ನಡಸಿದ್ದಾನೆ. ಈ ಸಂದರ್ಭದಲ್ಲ ಆರಿಫ್ ಒಳಗಿದ್ದ ಟಿ.ವಿ.ಸೇರಿದಂತೆ ವಸ್ತುಗಳನ್ನು ಹೊರಗಡೆ ಬಿಸಾಡಿದ್ದು, ತಡೆಯಲು ಬಂದಿದ್ದ ಪ್ರದೀಪ್‍ನ ಮುಖಕ್ಕೆ ಚೂರಿಯಿಂದ ಇರಿದು ಗಾಯಗೊಳಿಸಿದ್ದಾನೆ. ನಿತೇಶ್‍ನ ಮೇಲೆ ಯದ್ವಾತದ್ವಾ ದಾಳಿ ನಡೆಸಿದ ಆರಿಫ್ ಖಾನ್ ಕುತಿಗೆಯನ್ನು ಎರಡು ಕಡೆಯಿಂದ ಚೂರಿಯಿಂದ ಸೀಳಿ ಅಲ್ಲಿಂದ ಪರಾರಿಯಾಗಿದ್ದಾನೆ. ಘಟನೆಯ ಮಾಹಿತಿ ದೊರಕುತ್ತಿದ್ದಂತೆ ಹೋಟೆಲ್ ಮಾಲಕ ಸ್ಥಳಕ್ಕೆ ಆಗಮಿಸಿದ್ದು, ವಸತಿಗೃಹದವರು ಸೇರಿದಂತೆ ಆತನ ಇಬ್ಬರು ಸ್ನೇಹಿತರು ರಕ್ತದ ಮಡುವಿನಲ್ಲಿ ಬಿದಿದ್ದ ನಿತೇಶ್‍ನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.ಘಟನಾ ಸ್ಥಳದಲ್ಲಿ ಕೆಲಹೊತ್ತು ನಿತೇಶ್ ಬಿದ್ದಿದ್ದರಿಂದ ರಕ್ತಸ್ರಾವ ಹೆಚ್ಚಾಗಿ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ತಿಂಗಳ ಹಿಂದೆ ಹೊಟೆಲ್‍ಗೆ ಸೇರಿದ್ದ : ಆರಿಫ್ ಖಾನ್ ಹೋಟೆಲ್‍ಗೆ ಕೆಲಸಕ್ಕೆ ಸೇರಿ ತಿಂಗಳು ಆಗಿಲ್ಲ. ನಿತೇಶ್ ಮೂರು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದರು. ಘಟನೆಗೆ ಯಾವುದೇ ಕಾರಣ ಇರಲಿಲ್ಲ ಎನ್ನಲಾಗಿದೆ. ಹೋಟೆಲ್ ಮತ್ತು ವಸತಿಗೃಹದಲ್ಲೂ ಆರಿಫ್ ಖಾನ್ ಯಾರೊಂದಿಗೆ ಬೆರೆಯುತ್ತಿರಲಿಲ್ಲ ಎನ್ನಲಾಗಿದೆ. ಯಾವುದೇ ಕಾರಣವಿಲ್ಲದೆ ಹತ್ಯೆ ಮಾಡಿರುವುದು ನಿತೇಶ್‍ನ ಸ್ನೇಹಿತರಿಗೂ ಆಶ್ಚರ್ಯವಾಗಿದೆ. ನಿತೇಶ್ 6 ತಿಂಗಳ ಹಿಂದೆ ಮಂಗಳೂರಿಗೆ ಕೆಲಸಕ್ಕೆಂದು ಬಂದಿದ್ದು, ಮೂರು ತಿಂಗಳ ಹಿಂದೆ ಕುತ್ತಾರ್‍ನ ಹೋಟೆಲ್‍ನಲ್ಲಿ ಕೆಲಸಕ್ಕೆ ಸೇರಿದ್ದ ಎನ್ನಲಾಗಿದೆ. ನಿತೇಶ್ ತಂದೆ ತಾಯಿ ಸಹೋದರ, ಸಹೋದರಿಯನ್ನು ಅಗಲಿದ್ದಾರೆ.

ಘಟನಾ ಸ್ಥಳಕ್ಕೆ ಎಸಿಪಿ ಶ್ರುತಿ ರಾವ್, ಇನ್ಸ್‍ಪೆಕ್ಟರ್ ಕೆ.ಆರ್. ಗೋಪಿಕೃಷ್ಣ, ಅಪರಾಧ ವಿಭಾಗದ ಎಸ್‍ಐ ಪ್ರಕಾಶ್ ಅಸೈಗೋಳಿ, ಕಾನೂ ಸುವ್ಯವಸ್ಥೆ ವಿಭಾಗದ ಎಸ್‍ಐ ರಾಜೇಂದ್ರ, ಎ.ಎಸ್‍ಐ ಶಾಂತಪ್ಪ ಸೇರಿದಂತೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

Exit mobile version