Site icon Ullalavani

ಮುಡಿಪುವಿನಲ್ಲಿ ಧರ್ಮ ಜಾಗೃತಿ ಕಾರ್ಯಕ್ರಮ: ಸರಳ ಸಾಮೂಹಿಕ ವಿವಾಹ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಮುಡಿಪು: ನಮ್ಮ ಭಾರತ ದೇಶದಲ್ಲಿ ಹಿಂದಿನಿಂದಲೂ ವಿವಿಧ ರೀತಿಯ ಸಂಪ್ರದಾಯ, ಪೂಜೆ ವಿಧಿವಿದಾನಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ಇದು ಕೇವಲ ಸಂಪ್ರದಾಯ ಮಾತ್ರವಲ್ಲ ಇಂತಹ ಪೂಜಾ ಆಚರಣೆ, ಆರಾಧನೆಗಳಲ್ಲಿ ವೈಜ್ಞಾನಿಕವಾದ ಅಂಶಗಳು ಕೂಡಾ ಅಡಕವಾಗಿದ್ದು ಯುವಜನಾಂಗ ಇದನ್ನು ಅರ್ಥಮಾಡಿಕೊಂಡು ಮುನ್ನಡೆಯಬೇಕು ಎಂದು ನ್ಯಾಯವಾದಿ ಆಶಾಪ್ರಸಾದ್ ಅವರು ಅಭಿಪ್ರಾಯಪಟ್ಟರು.ಅವರು ಧರ್ಮಜಾಗೃತಿ ವೇದಿಕೆ ಮುಡಿಪು ಇದರ ಆಶ್ರಯದಲ್ಲಿ ಭಾನುವಾರ ಶ್ರೀ ಮುಡಿಪಿನ್ನಾರ್ ಕ್ಷೇತ್ರದ ವಠಾರದಲ್ಲಿ ನಡೆದ ಸತ್ಯನಾರಾಯಣ ಪೂಜೆ, ಶಿವಪೂಜೆ, ಸ್ವಯಂವರ ಪಾರ್ವತಿ ಪೂಜೆ, ಸರಳ ಆದರ್ಶ ವಿವಾಹ ಕಾರ್ಯಕ್ರಮದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ತ್ಯಾಗ ಮತ್ತು ಸೇವೆ ನಮ್ಮ ದೇಶದ ಮಣ್ಣಿನ ಗುಣವಾಗಿದೆ. ಆದ್ದರಿಂದ ದೇಶದ ರಕ್ಷಣೆಗಾಗಿ ಪ್ರತಿಯೊಬ್ಬರು ಯಾವ ರೀತಿಯ ತ್ಯಾಗ ಸೇವೆಗೂ ಸಿದ್ದರಿದ್ದಾರೆ. ನಮ್ಮ  ಸಂಸ್ಕೃತಿಯ ನೆಲದಲ್ಲಿ ಇಂದಿನ ಆಧುನಿಕತೆಯಲ್ಲಿ ಹಲವಾರು ಬದಲಾವಣೆಗಳು ಕಾಣುತ್ತಿದ್ದು ಆದರೆ ಯಾವತ್ತೂ ನಾವು ನಮ್ಮ ಪರಂಪರೆ ಮತ್ತು  ಸಂಸ್ಕೃತಿಯನ್ನು ರಕ್ಷಣೆ ಮಾಡಬೇಕಾದ ಅಗತ್ಯತೆ ಇದೆ. ಅಲ್ಲದೆ ಎಳೆಯ ಮಕ್ಕಳಲ್ಲಿಯೂ ನಾವು ನಮ್ಮ ಸಂಸ್ಕೃತಿ,
ಸಂಪ್ರದಾಯದ ಮಹತ್ವವನ್ನು ತಿಳಿಯ ಪಡಿಸುವ ಕಾರ್ಯ ಅಗತ್ಯವಾಗಿ ಆಗಬೇಕಿದೆ ಎಂದು ಹೇಳಿದರು.

ಧರ್ಮ ಜಾಗೃತಿ ವೇದಿಕೆಯ ವತಿಯಿಂದ ಧಾರ್ಮಿಕ ಕಾರ್ಯಕ್ರಮದೊಂದಿಗೆ ಸರಳ ವಿವಾಹದಂತಹ ಸಮಾಜ ಮುಖಿ ಕಾರ್ಯಕ್ರಮಗಳು ನಡೆಯುತ್ತಿರುವುದು ಮಾದರಿಯಾಗಿದೆ ಎಂದರು. ಕನ್ಯಾನ ಬಾಳೆಕೋಡಿ ಶ್ರೀ ಕಾಶಿ ಕಾಳಬೈರವೇಶ್ವರ ಕ್ಷೇತ್ರದ ಶ್ರೀ ಶಶಿಕಾಂತ ಮಣಿ ಸ್ವಾಮೀಜಿ ಅವರು ಆಶೀರ್ವಚನ ನೀಡುತ್ತಾ ಮಾತನಾಡಿ, ಧಾರ್ಮಿಕತೆಯ ಕಾರ್ಯಕ್ರಮದೊಂದಿಗೆ ಸಂಘಟನಾತ್ಮಕ ಜೀವನವೂ ನಡೆಯಬೇಕು. ಕಳೆದ ಮೂರು ವರ್ಷದಿಂದ ಧರ್ಮಜಾಗೃತಿ ವೇದಿಕೆಯು ಸಮಾಜಮುಖಿ ಕಾರ್ಯಕ್ರಮದೊಂದಿಗೆ ಮುನ್ನಡೆಯುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಧರ್ಮಜಾಗೃತಿ ವೇದಿಕೆಯ ಮಾರ್ಗದರ್ಶಕ ಸಂಂತೋಷ್ ಕುಮಾರ್ ರೈ ಬೋಳಿಯಾರ್, ಶ್ರೀ ಕಣಂತೂರು ತೋಡಕುಕ್ಕಿನಾರ್ ಕ್ಷೇತ್ರದ ಆಡಳಿತ ಮೊಕ್ತೇಸರ ತಿಮ್ಮಪ್ಪ ಕೊಂಡೆ ಯಾನೆ ಮಂಜುಭಂಡಾರಿ, ಕುಂಟಾಲಗಿರಿ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ಸಂಚಾಲಕ ತ್ಯಾಂಪಣ್ಣ ರೈ, ಧರ್ಮಜಾಗೃತಿ ವೇದಿಕೆಯ ಅಧ್ಯಕ್ಷ ನವೀನ್ ಪಾದಲ್ಪಾಡಿ, ಕುರ್ನಾಡು ಪಂಚಾಯಿತಿ ಅಧ್ಯಕ್ಷೆ ಶೈಲಜಾ ಮಿತ್ತಕೋಡಿ ಮೊದಲಾದವರು ಉಪಸ್ಥಿತರಿದ್ದರು.

ಧರ್ಮಜಾಗೃತಿ ವೇದಿಕೆಯ ಗೌರವ ಸಲಹೆಗಾರ ಟಿ.ಜಿ.ರಾಜಾರಾಮ ಭಟ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ದರ್ಮಜಾಗೃತಿ ವೇದಿಕೆಯ ಅಧ್ಯಕ್ಷ ನವೀನ್ ಪಾದಲ್ಪಾಡಿ ವಂದಿಸಿದರು.
ಚಂದ್ರ ಬಾಳೆಪುಣಿ ಹಾಗೂ ದಿವ್ಯರಾಜ್ ಮುದುಂಗಾರುಕಟ್ಟೆ ಅವರು ಕಾರ್ಯಕ್ರಮ ನಿರೂಪಿಸಿದರು.

ಸರಳ ಸಾಮೂಹಿಕ ವಿವಾಹ:
ಮುಡಿಪುವಿನಲ್ಲಿ ಭಾನುವಾರ ನಡೆದ ಧರ್ಮ ಜಾಗೃತಿ ಕಾರ್ಯಕ್ರಮದಲ್ಲಿ ಸರಳ ವಿವಾಹ ಕಾರ್ಯಕ್ರಮವು ವೇದಿಕೆಯಲ್ಲಿ ನಡೆಯಿತು. ಸೋಮಶೇಖರ್-ಚಂದ್ರಾವತಿ ಹಾಗೂ ಶಿವಕುಮಾರ್-ಪುಷ್ಪಲತಾ ಜೋಡಿಯು ಈ ಸಂದರ್ಭದಲ್ಲಿ ಹಸೆಮಣೆಯೇರಿದರು. ಸಂತೋಷ್ ಕುಮಾರ್ ಬೋಳಿಯಾರ್ ಅವರು ಸಾಂಪ್ರದಾಯಿಕ ಕ್ರಮದಂತೆ ಮದುಮಗಳನ್ನು ಗಂಡನ ಮನೆಗೆ ಕಳುಹಿಸುವ ಕ್ರಮವನ್ನು ಅಚ್ಚಕಟ್ಟಾಗಿ ನೆರವೇರಿಸಿದರು.

Exit mobile version