Site icon Ullalavani

ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ;ಸಚಿವ ಖಾದರ್

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ತೊಕ್ಕೊಟ್ಟು:ಶಿಕ್ಷಣದ ಜತೆಗೆ ಸಾಮಾಜಿಕ ಸಹಕಾರ, ಮಾನವೀಯತೆಯ ಮನೋಭಾವವನ್ನು ಮಕ್ಕಳಲ್ಲಿ ಮೂಡಿಸುವ ಕಾರ್ಯ ಆಗಬೇಕಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದರು.

ಅವರು ಕುತ್ತಾರಪದವಿನ ಮುನ್ನೂರು ಯುವಕ ಮಂಡಲ ಇದರ 48 ನೇ ವಾರ್ಷಿಕೋತ್ಸವ ಸಮಾರಂಭ ಹಾಗೂ ಅರ್ಹ ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಕ್ಕಳಲ್ಲಿ ಸಾಮಾಜಿಕ ಮೌಲ್ಯಗಳು ಬೆಳೆದಾಗ, ಸಮಾಜಕ್ಕೆ ಪೂರಕವಾಗಿ ಬೆಳೆಯಲು ಸಾಧ್ಯ. ಇದರಿಂದ ಹೆತ್ತವರ ಆಸ್ತಿ ಸಂಪತ್ತಾಗುತ್ತಾರೆ. ಆರ್ಥಿಕವಾಗಿ ಹಿಂದುಳಿದವರ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವ ಕಾರ್ಯ ಮಹತ್ತರವಾದದ್ದು, ಈ ನಿಟ್ಟಿನಲ್ಲಿ ಸೇವೆ ಕಾರ್ಯಗಳನ್ನು ನಡೆಸುತ್ತಿರುವ ಯುವಕ ಮಂಡಲದ ಕಾರ್ಯ ಶ್ಲಾಘನೀಯ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ಗಣಪತಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಹಾಗೂ ಸಾಹಿತಿ ಚಂದ್ರಕಲಾ ನಂದಾವರ ಮಾತನಾಡಿ ಯುವಕರಿಗೆ ಸಂವಿಧಾನದ ಸಾಮಾನ್ಯ ವಿಚಾರದ ಅರಿವಿಲ್ಲ, ಅದಕ್ಕಾಗಿ ಕಾನೂನನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಸ್ಕಾಲರ್ ಶಿಪ್ ಗಾಗಿ ಶಾಲೆಗೆ ಓಡಿ ಬರುವ ಹೆತ್ತವರು, ಮಕ್ಕಳ ಕುರಿತು ಕರೆಯುವ ಸಭೆಗಳಿಗೆ ಹಾಜರಾಗದೇ ಇರುವುದು ದುರದೃಷ್ಟಕರ. ಎಲ್ಲವನ್ನು ತೆಗೆದುಕೊಳ್ಳಲು ಮಾತ್ರ ಇರುವಂತಹ ಮನಸ್ಥಿತಿ ಬಹುತೇಕರಲ್ಲಿ ಬೆಳೆದುನಿಂತಿದೆ. ತಮ್ಮ ಮಕ್ಕಳು ಸಮಾಜಕ್ಕೆ ಕೊಡುವವರಾಗಬೇಕು ಅನ್ನುವ ರೀತಿಯಲ್ಲಿ ಬೆಳೆಸುವ ದೃಷ್ಟಿಯಿಂದ ಹೆತ್ತವರ ಆಲೋಚನೆಗಳು ಬದಲಾಗಬೇಕಿದೆ. ಸದ್ಯ ಜಾಗೃತಿ, ವಿವೇಕ, ಔಚಿತ್ಯಕ್ಕೆ ಬೇಕಾದ ಆಲೋಚನೆಗಳು ಮಕ್ಕಳಿಗೆ ಸಿಗುತ್ತಿಲ್ಲ.

ಮಾನವೀಯತೆಯ ತಿಳುವಳಿಕೆಯನ್ನು ಕೊಡದೇ ಇರುವುದು ಧರ್ಮವಲ್ಲ , ಜಾತಿ, ದರ್ಮ ಬದಿಗಿಟ್ಟು ಮಾನವೀಯ ಧರ್ಮದ ಚಿಂತನೆಗಳನ್ನು ಬೆಳೆಸಿ, ಸಮಗ್ರತೆ, ಸೌಹಾರ್ದತೆ ನೆಲೆಯಲ್ಲಿ ಸಮಾಜದ ಎಲ್ಲಾ ತಿಳುವಳಿಕೆಯನ್ನು ಮಕ್ಕಳಿಗೆ ಕೊಡುವ ಕಾರ್ಯ ಸಂಘಟನೆಗಳಿಂದ ಆಗಬೇಕಿದೆ ಎಂದರು.

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಸ್.ಪಿ ಚಂಗಪ್ಪ, ರಂಗಕರ್ಮಿ ಚಲನಚಿತ್ರ ನಿರ್ಮಾಪಕ ವಿಜಯ ಕುಮಾರ್ ಕೊಡಿಯಾಲ್ ಬೈಲ್, ಮುನ್ನೂರು ಗ್ರಾ.ಪಂ ಸದಸ್ಯೆ ಚಂದ್ರಾವತಿ, ಉದ್ಯಮಿಗಳಾದ ಜಗದೀಶ್, ಮೊಯ್ಯುದ್ದೀನ್, ಗೌರವಾಧ್ಯಕ್ಷರಾದ ಹರೀಶ್ ಮುಂಡೋಳಿ, ಕಾರ್ಯದರ್ಶಿ ಚಂದ್ರಹಾಸ್ ಉಪಸ್ಥಿತರಿದ್ದರು

ಸಲಹೆಗಾರ ಕೃಷ್ಣಪ್ಪ ಸಾಲ್ಯಾನ್ ಪ್ರಾಸ್ತಾವಿಕ ಮಾತನಾಡಿದರು. ಯುವಕ ಮಂಡಲದ ಅಧ್ಯಕ್ಷ ಶಶೀಂದ್ರ ಕುಕ್ಯಾನ್ ಸ್ವಾಗತಿಸಿದರು. ಮನೋಹರ್ ಮತ್ತು ಜಯ ದೇಸೋಡಿ ಕಾರ್ಯಕ್ರಮ ನಿರ್ವಹಿಸಿದರು. ರೋಹಿದಾಸ್ ವಂದಿಸಿದರು.
ಈ ಸಂದರ್ಭ 400 ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತು.

Exit mobile version