Site icon Ullalavani

ಮಂಗಳೂರು ವಿವಿ ಕುಲಪತಿ ಪ್ರೊ.ಕೆ.ಭೈರಪ್ಪ ಅವರಿಗೆ ಸನ್ಮಾನ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಕೊಣಾಜೆ: 2016-17ನೇ ಸಾಲಿನ ಸಿ.ವಿ.ರಾಮನ್ ಜನ್ಮ ಶತಮಾನೋತ್ಸವ ಪ್ರಶಸ್ತಿ ಪುರಸ್ಕತರಾದಂತಹ ಮಂಗಳೂರು ವಿವಿ ಕುಲಪತಿ ಪ್ರೊ.ಕೆ.ಭೈರಪ್ಪ ಅವರಿಗೆ ಮಂಗಳೂರು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳ ಸಂಘದ ವತಿಯಿಂದ ಸನ್ಮಾನ ಕಾರ್ಯಕ್ರಮವು ಶುಕ್ರವಾರ ಮಂಗಳೂರು ವಿವಿಯ ಹಳೆಸೆನೆಟ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಪ್ರೊ.ಶಾಂತರಾಮ್ ಶೆಟ್ಟಿ ಅವರು, ವಿಜ್ಞಾನ ಕ್ಷೇತ್ರದ ಸಂಶೋಧನೆಯಲ್ಲಿ ಬಹಳ ಆಳವಾಗಿ ತೊಡಗಿಸಿಕೊಂಡು ಅಪಾರ ಸಾಧನೆ ಮಾಡುತ್ತಿರುವ ಪ್ರೊ.ಕೆ.ಭೈರಪ್ಪ ಅವರಿಗೆ ಅರ್ಹವಾಗಿಯೇ ಸಿ.ವಿ.ರಾಮನ್ ಜನ್ಮಶತಮಾನೋತ್ಸವ ಪ್ರಶಸ್ತಿಯು ಲಭಿಸಿದ್ದು ಇದು ಮಂಗಳೂರು ವಿವಿಗೂ ದೊರೆತ ಗೌರವಾಗಿದೆ ಎಂದರು.
ವಿಶ್ವವಿದ್ಯಾಲಯದ ಕುಲಪತಿಯಾಗಿ, ಉತ್ತಮ ಸಂಶೋಧಕರಾಗಿ, ಉತ್ತಮ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಪ್ರೊ.ಕೆ.ಭೈರಪ್ಪ ಅವರು ವಿಶ್ವವಿದ್ಯಾಲಯದಲ್ಲಿ ಸಂಶೋಧನೆಗೆ ಒತ್ತು ನೀಡಿ ಪ್ರೋತ್ಸಾಹಿಸುತ್ತಿದ್ದಾರೆ. ಸಂಶೋಧನಾ ವಿದ್ಯಾರ್ಥಿಗಳಿಗೆ ಅವರು ಮಾದರಿಯಾಗಿದ್ದಾರೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮಂಗಳೂರು ವಿವಿ ಕುಲಪತಿ ಪ್ರೊ.ಕೆ.ಭೈರಪ್ಪ ಅವರು ಮಾತನಾಡಿ, ಸಮಾಜಸೇವೆಯೊಂದಿಗೆ ಜ್ಞಾನವನ್ನು ವಿಸ್ತರಿಸಿಕೊಂಡು ಬದ್ದತೆಯಲ್ಲಿ ಕೆಲಸ ಮಾಡಿದರೆ ಗೌರವ ತನ್ನಿಂದ ತಾನೇ ಬರುತ್ತದೆ. ಸಿ.ವಿ.ರಾಮನ್ ಪ್ರಶಸ್ತಿಯು ನನಗೆ ಲಭಿಸಿದ್ದು ನನ್ನ ಜವಬ್ಧಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ಕುಲಸಚಿವ ಪ್ರೊ.ಕೆ.ಎಂ.ಲೋಕೇಶ್, ಮಂಗಳೂರು ವಿವಿ ಸಂಶೋಧನಾ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಗದೀಶ್, ಕಾರ್ಯದರ್ಶಿ ಲವಿನಾ ಉಪಸ್ಥಿತರಿದ್ದರು. ಸಂಶೋಧನಾ ವಿದ್ಯಾರ್ಥಿನಿ ಅರುಣಿಮ ಕಾರ್ಯಕ್ರಮ ನಿರೂಪಿಸಿದರು.

 

 

Exit mobile version