ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಳ್ಳಾಲ: ಮಾಡೂರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ಹಾಗೂ ಶಬರಿ ಫ್ರೆಂಡ್ಸ್ ಮಾಡೂರು ಇದರ ಜಂಟಿ ಸಹಯೋಗದೊಂದಿಗೆ ಯೆನೆಪೋಯ ವಿಶ್ವವಿದ್ಯಾನಿಲಯ ಇದರ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ದಿ ಕೇಂದ್ರ ಮತ್ತು ದೇರಳಕಟ್ಟೆ ಯೇನೆಪೋಯ ದಂತ ವೈದ್ಯಕೀಯ ಕಾಲೇಜು ಇದರ ಸಮುದಾಯ ದಂತ ವೈದ್ಯಕೀಯ ವಿಭಾಗದ ವೈದ್ಯರ ತಂಡದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವು ಮಾಡೂರು ಕೊರಗಜ್ಜನ ಕಟ್ಟೆಯ ಬಳಿಯ ಮಾತೃಶ್ರೀ ಕಾಂಪ್ಲೆಕ್ಸ್‍ನಲ್ಲಿ ಭಾನುವಾರದಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಯೆನೆಪೋಯ ಆಸ್ಪತ್ರೆಯ ಹೃದಯ ತಜ್ಞ ಡಾ. ರಾಹುಲ್ ಇತ್ತೀಚಿನ ದಿನಗಳಲ್ಲಿ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಮನುಷ್ಯನನ್ನು ಹೆಚ್ಚಾಗಿ ಬಾಧಿಸುತ್ತಿದ್ದು, ಆರೋಗ್ಯದ ಬಗ್ಗೆ ಎಲ್ಲರೂ ಗಮನಹರಿಸಬೇಕು. ಹೃದಯಕ್ಕೆ ಸಂಬಂಧಿಸಿ ಯಾವುದೇ ಸಣ್ಣ ಕಾಯಿಲೆ ಬಂದರೂ ಅದನ್ನು ನಿರ್ಲಕ್ಷಿಸದೇ ತಕ್ಷಣ ವೈದ್ಯರನ್ನು ಕಾಣಬೇಕು. ಈ ನಿಟ್ಟಿನಲ್ಲಿ ಸ್ಥಳಿಯರಿಗೆ ತಮ್ಮ ಆರೋಗ್ಯದ ಬಗ್ಗೆ ಉಚಿತವಾಗಿ ತಪಾಸಣೆ ನಡೆಸಲು ಇಂತಹ ಶಿಬಿರಗಳು ಉಪಯುಕ್ತವಾಗಿದ್ದು ಇಂತಹ ಕಾರ್ಯಕ್ರಮಗಳನ್ನು ನಡೆಸಿದ ಶಬರಿ ಫ್ರೆಂಡ್ಸ್ ಕಾರ್ಯ ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆತ್ಮಶಕ್ತಿ ವಿವಿದೋದ್ದೇಶ ಸಂಘದ ಅಧ್ಯಕ್ಷರಾದ ಚಿತ್ತರಂಜನ್ ಬೋಳಾರ್ ವಹಿಸಿದ್ದರು.
ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಸೊಳ್ಳೆಂಜಿರ್, ಕೋಟೆಕಾರು ಪಟ್ಟಣ ಪಂಚಾಯಿತಿ ಸದಸ್ಯ ಹಮೀದ್ ಹಸನ್ ಮಾಡೂರು, ಮಾಡೂರು ಶಿರ್ಡಿ ಸಾಯಿ ಮಂದಿರದ ಆಡಳಿತ ಮೊಕ್ತೇಸರ ಸುರೇಶ್ ಕೆ.ಪಿ, ವೈದ್ಯರಾದ ಡಾ.ಪ್ರತಿಮಾ, ಡಾ.ಆಸೀಫ್, ಶಬರಿ ಫ್ರೆಂಡ್ಸ್ ಅಧ್ಯಕ್ಷ ಜಗದೀಶ್ ಪಿ.ಬಿ, ರೋಹಿತ್ ವಿ.ಕುಲಾಲ್, ಆತ್ಮಶಕ್ತಿ ನಿರ್ದೇಶಕರುಗಳಾದ ಆನಂದ ಕೊಂಡಾಣ, ಸೀತಾರಾಮ.ಎನ್, ಚಂದ್ರಹಾಸ್ ಮರೋಳಿ, ರಮಾನಾಥ್ ಸನಿಲ್, ಕುಶಾಲಾಕ್ಷಿ, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶ್ವೇತಾ ಎಮ್ ಉಪಸ್ಥಿತರಿದ್ದರು.
ಸುಜಯ ಹೇಮಚಂದ್ರ ಸ್ವಾಗತಿಸಿದರು, ಶಾಖಾಧಿಕಾರಿ ಪ್ರೀತಿ ಕಾರ್ಯಕ್ರಮ ನಿರೂಪಿಸಿ, ಆತ್ಮಶಕ್ತಿ ಉಪಾಧ್ಯಕ್ಷ ನೇಮಿರಾಜ್ ಪಿ. ವಂದಿಸಿದರು.