Site icon Ullalavani

ಸಂಭ್ರಮದ ಜೊತೆ ದ್ಯಾನಸ್ಥರಾಗುವ ಮನಸ್ಸು ನಮ್ಮದಾಗಬೇಕು: ಪ್ರೊ.ಕೆ.ಚಿನ್ನಪ್ಪ ಗೌಡ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಮುಡಿಪು: ವಿದ್ಯಾರ್ಥಿಗಳಲ್ಲಿ ಸಂಭ್ರಮ ಪಡುವ ಮನಸ್ಸಿನ ಜೊತೆಗೆ ಧ್ಯಾನಸ್ಥರಾಗುವ ಮನಸ್ಸು ಅಗತ್ಯವಾಗಿರಬೇಕು. ಇತ್ತೀಚೆಗೆ ಎಳೆಯ ಪೀಳಿಗೆಯಲ್ಲಿ ಈ ಎರಡು ಬಗೆಯ ಮನಸ್ಸುಗಳು ಕಡಿಮೆಯಾಗುತ್ತಿರುವಂತೆಯೇ ನಮ್ಮ ಹಿಂದಿನ ಕಾಲದಿಂದ ಆಚರಣೆಯಲ್ಲಿದ್ದಂತಹ ಸಂಪ್ರದಾಯದ ಆಚರಣೆಗಳನ್ನು ನೆನಪಿಸುವ ಇಂತಹ ಕಾರ್ಯಕ್ರಮಗಳು ನಡೆಯುತ್ತಿರುವುದು ಬಹಳ ಮಹತ್ವಪೂರ್ಣವಾದವು ಎಂದು ಮಂಗಳೂರು ವಿಶ್ವವಿದ್ಯಾಲಯದ ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕರಾದ ಪ್ರೊ.ಕೆ.ಚಿನ್ನಪ್ಪ ಗೌಡ ಅವರು ಅಭಿಪ್ರಾಯಪಟ್ಟರು.
ಅವರು ಮಂಗಳೂರು ವಿಶ್ವವಿದ್ಯಾಲಯದ ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿಗಳು ಶುಕ್ರವಾರ ವಿಭಾಗದಲ್ಲಿ ಏರ್ಪಡಿಸಿದ್ದ ಸಾಂಪ್ರದಾಯಿಕ ದಿನಾಚರಣೆ `ದೇಸಿ ಹಬ್ಬ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬೇರೆ ಬೇರೆ ಕಾಲಘಟ್ಟದ ಸಾಂಸ್ಕøತಿಕ ಸಂಗತಿಗಳು, ಆಚರಣೆಗಳು, ಸಂಪ್ರದಾಯಗಳನ್ನು ಒಂದೆಡೆ ಕಟ್ಟಿ ಯುವ ಜನಾಂಗಕ್ಕೆ ಇದರ ಮಹತ್ವವನ್ನು ವಿಸ್ತರಿಸುವ ಕೆಲಸ ಬಹಳ ಕಠಿಣ. ಇಂದು ಕನ್ನಡ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿಗಳು ಸಾಂಪ್ರದಾಯಿಕ ಆಚರಣೆಯ ಸಂದರ್ಭದಲ್ಲಿ ಗ್ರಾಮೀಣ ಬದುಕಿನ ಚಿತ್ರಣವನ್ನು ಬಹಳ ಸುಂದರವಾಗಿ ಕಟ್ಟಿಕೊಡುವ ಮೂಲಕ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿಸಿದ್ದಾರೆ ಎಂದರು.

ಪ್ರಾಧ್ಯಾಪಕರಾದ ಪ್ರೊ.ಶಿವರಾಮ ಶೆಟ್ಟಿ ಮಾತನಾಡಿ, ಸಮುದಾಯಗಳು ಇಂದು ವಿಘಟನೆಯಾಗುತ್ತಿರುವ ಇಂತಹ ಸಂಪ್ರದಾಯಗಳನ್ನು ಎಲ್ಲರ ಒಳಗೊಳ್ಳುವಿಕೆಯ ಮೂಲಕ ನೆನಪಿಸುವಂತಹ ಕೆಲಸಗಳು ನಡೆಯುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಪ್ರೊ.ಅಭಯ ಕುಮಾರ್, ಡಾ.ನಾಗಪ್ಪ ಗೌಡ, ಡಾ.ಧನಂಜಯ ಕುಂಬ್ಳೆ, ಡಾ.ರಾಜಶ್ರೀ ಮೊದಲಾದವರು ಉಪಸ್ಥಿತರಿದ್ದರು.ವಿದ್ಯಾರ್ಥಿಗಳಾದ ಸಾಯಿಸುಮ ಸ್ವಾಗತಿಸಿ, ಜನಾರ್ದನ ವಂದಿಸಿದರು. ಶ್ಯಾಮ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

Exit mobile version