Site icon Ullalavani

ಪುಸ್ತಕ ಕೊಡುವುದಕ್ಕಿಂತ ಓದುವುದು ಮುಖ್ಯ: ಡಾ.ಮುರಲೀ ಮೋಹನ್

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಉಳ್ಳಾಲ: ಇಂದು ಪುಸ್ತಕಗಳನ್ನು ಓದುವವರು ವಿರಳ, ಅಂತಹ ಸಂದರ್ಭ ಶಾಲೆಗಳಿಗೆ ಪುಸ್ತಕ ನೀಡುವುದಕ್ಕಿಂತಲೂ ಓದುವವರೆಷ್ಟಿದ್ದಾರೆ ಎನ್ನುವುದೇ ಮುಖ್ಯ ಎಂದು ಮಂಗಳೂರಿನ ಚೂಂತಾರು ಪ್ರತಿಷ್ಠಾನದ ಅಧ್ಯಕ್ಷ ಡಾ.ಮುರಲೀ ಮೋಹನ್ ಚೂಂತಾರು ಹೇಳಿದರು.
ಚೂಂತಾರು ಪ್ರತಿಷ್ಠಾನದ ವತಿಯಿಂದ ಖರೀದಿಸಲಾದ ಜ್ಞಾನ ವರ್ಧಿತ ಪುಸ್ತಕಗಳನ್ನು ಗುರುವಾರ ಪಾವೂರು ಸರ್ಕಾರಿ ಪ್ರೌಢಶಾಲೆಯ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿ ಮಾತನಾಡಿದರು.

ಪಠ್ಯದ ಜೊತೆ ಇತರ ಪುಸ್ತಕಗಳನ್ನು ಓದುವ ಮೂಲಕ ಸಾಮಾನ್ಯ ಜ್ಞಾನ ವೃದ್ಧಿಸಿಕೊಳ್ಳಬಹುದು, ಆದರೆ ಇಂದು ಪುಸ್ತಕ ಓದುವರರ ಕೊರತೆಯಿದೆ, ಆದರೂ ಪಾವೂರು ಸರ್ಕಾರಿ ಶಾಲೆಯಲ್ಲಿ ಸುಸಜ್ಜಿತ, ಸಮಗ್ರ ಗ್ರಂಥಾಲಯ ನಿರ್ಮಿಸುವ ಮೂಲಕ ಇಲ್ಲಿನ ಶಿಕ್ಷಕ ವೃಂದ ಮೌಲ್ಯಯುತ ಶಿಕ್ಷಣ ನೀಡಲು ಪ್ರಯತ್ನಿಸುತ್ತಿರುವುದು ಶ್ಲಾಘನೀಯ, ಇಂತಹ ಪ್ರಯತ್ನಕ್ಕೆ ಕೈಜೋಡಿಸುವುದೇ ಭಾಗ್ಯ. ಆರೋಗ್ಯ ಸಂಬಂಧಿ ವಿಚಾರದಲ್ಲಿ ಶಾಲೆಗೆ ಅಗತ್ಯವಿರುವ ಸಹಕಾರ, ಸಹಾಯ ನೀಡಲು ಸಿದ್ಧ ಎಂದು ತಿಳಿಸಿದರು.

ಶಾಲೆಯ ಮುಖ್ಯ ಶಿಕ್ಷಕ ಡಾ.ಪ್ರಶಾಂತ್ ಕುಮಾರ್ ಕೆ.ಎಸ್. ಮಾತನಾಡಿ, ಶಾಲೆಯಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ಹೊಂದಿರುವುದರಿಂದ ಸುಸಜ್ಜಿತ ಗ್ರಂಥಾಲಯ ಕನಸಿಗೆ ಸಂಸ್ಥೆಯೊಂದು ಉತ್ತಮ ದೇಣಿಗೆ ನೀಡಿದೆ. ಪ್ರಥಮವಾಗಿ ಚೂಂತಾರು ಪ್ರತಿಷ್ಠಾನದ ಪುಸ್ತಕ ಗ್ರಂಥಾಲಯ ಸೇರುತ್ತಿದೆ. ಮುಂದಿನ ದಿನಗಳಲ್ಲಿ ಶಾಲೆಯಲ್ಲಿ ಪ್ರೌಢಾವಸ್ಥೆಯಲ್ಲಿರುವ ಹೆಣ್ಮಕ್ಕಳಿಗಾಗಿ ವಿಶ್ರಾಂತಿ ಕೋಣೆ ಸ್ಥಾಪಿಸಲು ಯೋಚಿಸಲಾಗಿದೆ. ಶಾಲೆಯಲ್ಲಿ ಪಠ್ಯದ ಜೊತೆ ಮೌಲ್ಯವರ್ಧಿತ ಶಿಕ್ಷಣ ನೀಡಲಾಗುತ್ತಿರುವುದರಿಂದ ಕೆಲವು ಪ್ರಾಥಮಿಕ ಶಾಲೆಯ ಮುಖ್ಯಸ್ಥರು ಸಂಪರ್ಕಿಸಿ ಏಳನೇ ತರಗತಿಯಿಂದ ಉತ್ತೀರ್ಣರಾಗುತ್ತಿರುವ ಎಲ್ಲಾ ವಿದ್ಯಾರ್ಥಿಗಳನ್ನು ಎಂಟನೆ ತರಗತಿಗೆ ಸೇರಿಸಲು ಮುಂದೆ ಬಂದಿರುವುದು ಗಮನಾರ್ಹ ಎಂದರು.

ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು, ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಈ ಸಂದರ್ಭ ಸಮುದಾಯದತ್ತ ಶಾಲೆ ಪ್ರಯುಕ್ತ ಪೋಷಕರ ಸಭೆ ನಡೆಸಲಾಯಿತು.

Exit mobile version