Site icon Ullalavani

ಮಂಗಳೂರು ವಿವಿ ಯಕ್ಷಗಾನ ಅಧ್ಯಯನ ಕೇಂದ್ರದ `ಯಕ್ಷಮಂಗಳ ಪ್ರಶಸ್ತಿ’

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ 2016ನೇ ಸಾಲಿನ ‘ಯಕ್ಷಮಂಗಳ ಪ್ರಶಸ್ತಿ’ಗೆ ತೆಂಕುತಿಟ್ಟಿನ ಪ್ರಸಿದ್ದ ಭಾಗವತರಾದ ಬಲಿಪ ನಾರಾಯಣ ಭಾಗವತ, ತಾಳಮದ್ದಳೆ ಅರ್ಥದಾರಿ, ಸಂಶೋಧಕ ಡಾ.ಪ್ರಭಾಕರ ಜೋಶಿ, ಬಡಗುತಿಟ್ಟಿನ ಹಿರಿಯ ಕಲಾವಿದ ಐರೋಡಿ ಗೋವಿಂದಪ್ಪ ಮತ್ತು ಹಿಮ್ಮೇಳ ತಜ್ಞ ಗೋಪಾಲಕೃಷ್ಣ ಕುರುಪ್ ಆಯ್ಕೆಯಾಗಿದ್ದಾರೆ. ‘ಯಕ್ಷಮಂಗಳ ಕೃತಿ ಪ್ರಶಸ್ತಿ’ಗೆ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ ಅವರ `ಯಕ್ಷಗಾನ ಕವಿ ಕಾವ್ಯ ವಿಹಾರ’ ಕೃತಿಯು ಆಯ್ಕೆಯಾಗಿದೆ.

ಯಕ್ಷಮಂಗಳ ಪ್ರಶಸ್ತಿಯು ತಲಾ 25,000 ರೂ. ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಮತ್ತು ಸನ್ಮಾನಗಳನ್ನು ಒಳಗೊಂಡಿದೆ. ಕೃತಿ ಪ್ರಶಸ್ತಿಯು 10,000 ರೂ ನಗದು, ಪ್ರಶಸ್ತಿ ಪತ್ರವನ್ನು ಸನ್ಮಾನವನ್ನು ಒಳಗೊಂಡಿದೆ.
ಪ್ರೊ.ಎಂ.ಎಲ್.ಸಾಮಗ, ಪ್ರೊ.ಪಾದೇಕಲ್ಲು ವಿಷ್ಣು ಭಟ್, ಪ್ರೊ.ಕೆ.ಚಿನ್ನಪ್ಪ ಗೌಡ, ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕ ಡಾ.ಧನಂಜಯ ಕುಂಬ್ಳೆ ಅವರನ್ನೊಳಗೊಂಡ ಆಯ್ಕೆ ಸಮಿತಿಯು ಸರ್ವಾನುಮತದಿಂದ ಈ ಹೆಸರುಗಳನ್ನು ಆಯ್ಕೆ ಮಾಡಿದೆ.

ಬಲಿಪ ನಾರಾಯಣ ಭಾಗವತ:
ತೆಂಕುತಿಟ್ಟು ಯಕ್ಷಗಾನದ ಅಗ್ರಮಾನ್ಯ ಭಾಗವತರಾದ ಬಲಿಪ ನಾರಾಯಣ ಭಾಗವತರು ಕಳೆದ ಆರು ದಶಕಗಳಿಂದ ಯಕ್ಷಗಾನವನ್ನೇ ಬದುಕಾಗಿಸಿದ ಕಲಾವಿದರು. ಯಕ್ಷಗಾನದ ಹಿನ್ನೆಲೆಯಿರುವ ಮನೆತನದಿಂದ ಬಂದ ಇವರು ಬಾಲ್ಯದಿಂದಲೇ ಅಜ್ಜ ಬಲಿಪ ನಾರಾಯಣ ಭಾಗವತರು ಮತ್ತು ತಂದೆ ಬಲಿಪ ಮಾಧವ ಭಟ್ಟರಿಂದ ಯಕ್ಷಗಾನದ ಭಾಗವತಿಕೆಯನ್ನು ಅಭ್ಯಾಸ ಮಾಡಿ ಮುಂದೆ ಮೇಳದ ಮುಖ್ಯ ಭಾಗವತರಾಗಿ ಸುಮಾರು ಐವತ್ತು ವರ್ಷಗಳ ತಿರುಗಾಟವನ್ನು ಮಾಡಿದ್ದಾರೆ. ಕೂಡ್ಲು ಮೇಳ, ಕುಂಡಾವು ಮೇಳ, ಮೂಲ್ಕಿ ಮೇಳ, ರೆಂಜಾಳ ಮೇಳಗಳಲ್ಲಿ ಕೆಲ ವರ್ಷಗಳ ಕಾಲ ತಿರುಗಾಟ ನಡೆಸಿದ ಇವರು ಪ್ರಸಿದ್ಧ ಕಟೀಲು ಮೇಳದಲ್ಲಿ 33 ವರ್ಷಗಳ ಕಾಲ ಭಾಗವತರಾಗಿ ಮೆರೆದಿದ್ದಾರೆ. ರಕ್ತರಾತ್ರಿ, ಶಿವಪ್ರಭಾ ಪರಿಣಯ, ಕಾಳಿಂದಿ ವಿವಾಹ, ಮತ್ಸ್ಯಾವತಾರ – ಕೇತಕಿ ಶಾಪ, ನವಗ್ರಹ ಮಹಾತ್ಮೆ ಮೊದಲಾದ ಮೂವತ್ತಕ್ಕೂ ಅಧಿಕ ಯಕ್ಷಗಾನ ಪ್ರಸಂಗಗಳನ್ನು ಇವರು ರಚಿಸಿದ್ದಾರೆ. ನೂರಕ್ಕೂ ಹೆಚ್ಚು ಯಕ್ಷಗಾನದ ವೀಡಿಯೋ ಮತ್ತು ಆಡಿಯೋ ಕ್ಯಾಸೆಟ್‍ಗಳಲ್ಲಿ ಭಾಗವತರಾಗಿ ಹಾಡಿದ್ದಾರೆ.

ಡಾ.ಎಂ.ಪ್ರಭಾಕರ ಜೋಶಿ:
ಯಕ್ಷಗಾನ ತಾಳಮದ್ದಳೆಯ ಪ್ರಸಿದ್ಧ ಅರ್ಥದಾರಿ, ಸಂಶೋಧಕ, ವಿಮರ್ಶಕ, ವಾಗ್ಮಿ ಡಾ. ಎಂ ಪ್ರಭಾಕರ ಜೋಶಿಯವರು ಕಾರ್ಕಳ ತಾಲೂಕಿನ ಮಾಳದವರು. ಎಂ ಕಾಂ ಪದವೀಧರರರು. ‘ಕೃಷ್ಣ ಸಂಧಾನ ಪ್ರಸಂಗ ಮತ್ತು ಪ್ರಯೋಗ’ ಎಂಬ ಸಂಶೋಧನೆಗೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಜಾಗರ, ಕೇದಗೆ, ಮಾರುಮಾಲೆ, ಪ್ರಸ್ತುತ, ಯಕ್ಷಗಾನ ಪದಕೋಶ, ವಾಗರ್ಥ, ಯಕ್ಷಗಾನ ಸ್ಥಿತಿಗತಿ, ಭಾರತೀಯ ತತ್ವಶಾಸ್ತ್ರ ಪರಿಚಯ(ಎಂ. ಎಂ ಹೆಡೆಯವರೊಂದಿಗೆ) ಮೊದಲಾದ ಕೃತಿಗಳನ್ನು, ಅರ್ಥಗಾರಿಕೆ : ಸ್ವರೂಪ ಸಮೀಕ್ಷೆ, ಯಕ್ಷಗಾನ ಚಿಂತನ, ಕುಕ್ಕಿಲ ಸಂಪುಟ ಎಂಬ ಮಹತ್ವದ ಸಂಪಾದನಾ ಕೃತಿಗಳನ್ನು ಪ್ರಕಟಿಸಿದ್ದಾರೆ. ಯಕ್ಷಗಾನ ಮಕರಂದ, ಯಕ್ಷ ಕರ್ದಮ ಮೊದಲಾದ ಯಕ್ಷಗಾನ ಸಂಬಂಧಿ ಸಂಪುಟಗಳ ಸಂಪಾದಕರಲ್ಲಿ ಒಬ್ಬರಾಗಿದ್ದಾರೆ. ಬೆಸೆಂಟ್ ಪದವಿಪೂರ್ವ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ನಿವೃತ್ತರು. ಶೇಣಿ, ಸಾಮಗ, ಪೆರ್ಲ, ದೇರಾಜೆ, ಪೊಳಲಿ ಶಾಸ್ತ್ರಿ, ತೆಕ್ಕಟ್ಟೆ, ಕುಂಬ್ಳೆ ಮೊದಲಾದ ಪ್ರಸಿದ್ದ ಕಲಾವಿದರ ಜೊತೆ ಅರ್ಥ ಹೇಳಿದ ಅನುಭವ ಇವರದ್ದು. ವಸ್ತುನಿಷ್ಠ ವಿಮರ್ಶಕರಾಗಿ, ಒಳನೋಟವುಳ್ಳ ಸೂಕ್ಷ್ಮ ಸಂವೇದನೆಯ ಆಕರ್ಷಕ ಮಾತುಗಾರರಾಗಿ ಜೋಶಿಯವರು ಪ್ರಸಿದ್ಧರು.

ಐರೋಡಿ ಗೋವಿಂದಪ್ಪ:
ಐರೋಡಿ ಗೋವಿಂದಪ್ಪನವರು ಬಡಗುತಿಟ್ಟಿನ ಸಾಂಪ್ರದಾಯಿಕ ಶೈಲಿಯ ಹೆಸರಾಂತ ಕಲಾವಿದರಾಗಿದ್ದಾರೆ. ಉಡುಪಿ ಜಿಲ್ಲೆಯ ಐರೋಡಿ ಎಂಬಲ್ಲಿ 1945ರಲ್ಲಿ ಬೂದ ಭಾಗವತ ಮತ್ತು ಗೌರಿ ದಂಪತಿಯ ಸುಪುತ್ರರಾಗಿ ಜನಿಸಿದ ಗೋವಿಂದಪ್ಪನವರು ಕಲಿತದ್ದು 5ನೇ ತರಗತಿ. ಯಕ್ಷಗಾನ ಕ್ಷೇತ್ರದಲ್ಲಿ ಮಾತ್ರ ಅವರ ಪ್ರೌಢಿಮೆ ಅಸಾಧಾರಣವಾದುದು. ತಂದೆಯವರಿಂದ ಭಾಗವತಿಕೆ ಮತ್ತು ತೋನ್ಸೆ ಕಾಂತಪ್ಪ ಮಾಸ್ತರರಿಂದ ಹೆಜ್ಜೆಗಾರಿಕೆಯನ್ನು ಅಭ್ಯಾಸ ಮಾಡಿದ ಗೋವಿಂದಪ್ಪನವರು ತಮ್ಮ ಹನ್ನೆರಡನೇ ವಯಸ್ಸಿನಲ್ಲಿಯೇ ಬಣ್ಣದ ಬದುಕು ಆರಂಭಿಸಿದರು. ಲವ, ಕುಶ, ಅಭಿಮನ್ಯು, ಬಭ್ರುವಾಹನ, ಪುಷ್ಕಳ, ಸುಧನ್ವ, ಅರ್ಜುನ, ಮಾರ್ತಾಂಡತೇಜ, ಚಂದ್ರಹಾಸ, ಶ್ವೇತಕುಮಾರ ಮೊದಲಾದ ಪಾತ್ರಗಳ ಮೂಲಕ ಜನಪ್ರಿಯರಾದವರು. ಬಡಗುತಿಟ್ಟಿನ ಸಮರ್ಥ ಎರಡನೇ ವೇಷಧಾರಿಯಾಗಿ ಕರ್ಣ, ಭೀಷ್ಮ, ಹಿರಣ್ಯಕಶಿಪು, ಜಾಂಬವ, ವೀರಮಣಿ, ಉಗ್ರಸೇನ, ತಾಮ್ರಧ್ವಜ, ದಶರಥ, ಯಯಾತಿ, ಕಂಸ ಮೊದಲಾದ ಹಲವು ವೇಷಗಳಿಗೆ ರಂಗಸ್ಥಳದಲ್ಲಿ ಜೀವ ತುಂಬಿದವರು. ಗೋಳಿಗರಡಿ, ಸಾಲಿಗ್ರಾಮ, ಮೂಲ್ಕಿ, ಕುಂಬಳೆ, ಇರಾ, ಪೆರ್ಡೂರು, ಅಮೃತೇಶ್ವರಿ, ಹಿರಿಯಡ್ಕ ಹೀಗೆ ವಿವಿಧ ಮೇಳಗಳಲ್ಲಿ ಮುಖ್ಯ ವೇಷಧಾರಿಯಾಗಿ ಮಿಂಚಿದ ಇವರು ಐವತ್ತಕ್ಕೂ ಹೆಚ್ಚು ವರ್ಷಗಳ ಕಲಾಯಾನವನ್ನು ನಡೆಸಿದ್ದಾರೆ.

ಗೋಪಾಲಕೃಷ್ಣ ಕುರುಪ್:
ಗೋಪಾಲಕೃಷ್ಣ ಕುರುಪ್ ಅವರು ತೆಂಕುತಿಟ್ಟು ಯಕ್ಷಗಾನದ ಹಿಮ್ಮೇಳ ತಜ್ಞ ಹಾಗೂ ಯಕ್ಷಗಾನ ಗುರುಗಳು. ಯಕ್ಷಗಾನ ಭಾಗವತಿಕೆ, ಮದ್ದಳೆವಾದನ, ಪೂರ್ವರಂಗ ಕ್ರಮ ಮತ್ತು ಸಾಂಪ್ರದಾಯಿಕ ನೃತ್ಯದಲ್ಲಿ ಕರಾರುವಾಕ್ಕಾದ ಪಾಂಡಿತ್ಯವುಳ್ಳವರು. ಯಕ್ಷಗಾನ ಕ್ಷೇತ್ರಕ್ಕೆ ಸುಮಾರು ಐವತ್ತು ವರ್ಷಗಳ ಸುದೀರ್ಘ ಸೇವೆ ಇವರದ್ದು. 1935ರಲ್ಲಿ ಕಾಸರಗೋಡು ಜಿಲ್ಲೆಯ ಪೆರ್ಲ ಸಮಪದ ನೆಲ್ಲಿಕುಂಜೆಯಲ್ಲಿ ಜನಿಸಿದ ಇವರು ಓದಿದ್ದು ಕೇವಲ ಐದನೇ ಇಯತ್ತೆ. ತೆಂಕುತಿಟ್ಟು ಪ್ರಾಥಮಿಕ ಯಕ್ಷಗಾನ ಪಾಠಗಳು, ತೆಂಕುತಿಟ್ಟು ಯಕ್ಷಗಾನ ಮದ್ದಳೆವಾದನಕ್ರಮ, ಚೆಂಡೆವಾದನಕ್ರಮ, ತಿತ್ತಿತೈ(ಯಕ್ಷಗಾನ ತಾಳ ಸಂಬಂಧಿ ಅಧ್ಯಯನ) ಎಂಬ ನಾಲ್ಕು ಯಕ್ಷಗಾನ ಸಂಬಂಧೀ ಕೃತಿಗಳನ್ನು ರಚಿಸಿದ್ದಾರೆ. ಸುಮಾರು ನಲ್ವತ್ತು ವರ್ಷಗಳ ಕಾಲ ಧರ್ಮಸ್ಥಳ, ಕೂಡ್ಲು, ಕುಂಡಾವು, ಸುರತ್ಕಲ್, ಮುಂಬೈ, ಪೊಳಲಿ, ಕುಂಬಳೆ ಮೇಳಗಳಲ್ಲಿ ಹಿಮ್ಮೇಳ ಕಲಾವಿದರಾಗಿ ತಿರುಗಾಟ ನಡೆಸಿದ್ದಾರೆ. ಬುಡಕಟ್ಟು, ದಲಿತ, ಗಿರಿಜನ ಸಮುದಾಯ ಮತ್ತು ಮಹಿಳೆಯರಿಗೆ ಯಕ್ಷಗಾನ ಕಲಿಸಿ ಯಕ್ಷಗಾನಕ್ಕೆ ಹೊಸ ವಿಸ್ತರಣೆ ಒದಗಿಸಿದ ಗುರು ಇವರು. ಧರ್ಮಸ್ಥಳ ಯಕ್ಷಗಾನ ಕೇಂದ್ರದ ಗುರುವಾಗಿ, ದಕ್ಷಿಣ ಕನ್ನಡ ಜಿಲ್ಲೆಯ ಇಪ್ಪತ್ತೆಂಟಕ್ಕೂ ಅಧಿಕ ಕೇಂದ್ರಗಳಲ್ಲಿ ಯಕ್ಷಗಾನ ಕಲಿಕೆಯ ಗುರುವಾಗಿ ಸೇವೆ ಸಲ್ಲಿಸಿದ್ದಾರೆ.

‘ಯಕ್ಷಗಾನ ಕವಿ ಕಾವ್ಯ ವಿಹಾರ’ಕ್ಕೆ ಕೃತಿ ಪ್ರಶಸ್ತಿ:
ಯಕ್ಷಗಾನ ವಿಮರ್ಶಕ, ಸಂಶೋಧಕ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ ಇವರು ರಚಿಸಿದ ‘ಯಕ್ಷಗಾನ ಕವಿ ಕಾವ್ಯ ವಿಹಾರ’ ಎಂಬ ಕೃತಿಯು ಯಕ್ಷಗಾನ ಕವಿಗಳನ್ನು ಕುರಿತ ಅಧ್ಯಯನ ಗ್ರಂಥವಾಗಿದ್ದು, 2016ನೇ ಸಾಲಿನ ಯಕ್ಷಮಂಗಳ ಕೃತಿ ಪ್ರಶಸ್ತಿಗೆ ಆಯ್ಕೆಯಾಗಿದೆ.

ಪ್ರಶಸ್ತಿ ಪ್ರದಾನ ಸಮಾರಂಭವು ಎ.17ರಂದು ಪೂರ್ವಾಹ್ನ 11.30ಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳ ಸಭಾಂಗಣದಲ್ಲಿ ಮಂಗಳೂರು ವಿವಿ ಕುಲಪತಿ ಪ್ರೊ.ಕೆ.ಭೈರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯ ಕುಲಸಚಿವರಾದ ಪ್ರೊ.ಕೆ.ಎಂ.ಲೋಕೇಶ್ ಹಾಗೂ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ.ಧನಂಜಯ ಕುಂಬ್ಳೆ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Exit mobile version