Site icon Ullalavani

ಮಾಡೂರು : ಶ್ರೀ ಶಿರಡಿ ಬಾಬಾ ಮಂದಿರ ವಾರ್ಷಿಕೋತ್ಸವ, ರಾಮನವಮಿ ಉತ್ಸವ ಸಂಪನ್ನ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಚಿತ್ರಗಳು: ಅಶೋಕ್ ಮಂಗಳೂರು

ಮಾಡೂರು : ಮಾಡೂರಿನ ಶಿರಡಿ ಸಾಯಿಬಾಬಾನ ಮಂದಿರದಲ್ಲಿ ಬೆಳ್ಳಿ ಚಿನ್ನ, ರಥಕ್ಕೆ ಪ್ರಾಮುಖ್ಯತೆ ನೀಡದೆ ದೀನ ದಲಿತರ ಸೇವೆ ನಡೆಯುವ ಮೂಲಕ ಸಾಯಿಬಾಬರ ನಿಜವಾದ ಪೂಜೆ ಈ ಕ್ಷೇತ್ರದಲ್ಲಿ ನಡೆಯುತ್ತಿದೆ ಎಂದು ಶ್ರೀ ನಿತ್ಯಾನಂದ ಮಹಾಪೀಠಂ, ಶ್ರೀ ಕ್ಷೇತ್ರ ಕೊಂಡೆವೂರಿನ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಭಿಪ್ರಾಯಪಟ್ಟರು.ಅವರು ಮಾಡೂರು ಕೊಂಡಾಣದ ಸಾಯಿಧಾಮದ ಶ್ರೀ ಶಿರಡಿ ಬಾಬಾ ಮಂದಿರದ ದ್ವಿತೀಯ ವಾರ್ಷಿಕೋತ್ಸವ ಮತ್ತು ರಾಮನವಮಿ ಉತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.ಶಿರಡಿ ಸಾಯಿ ಮಂದಿರದಲ್ಲಿ ಸಂಕಲ್ಪ ದೈವ ಸಂಕಲ್ಪವಾಗಿದೆ.

ಶಾಲೆ, ಆಸ್ಪತ್ರೆ ಸೇರಿದಂತೆ ಸಮಾಜದಲ್ಲಿ ಹಿಂದುಳಿದವರ ಕಾರ್ಯಕ್ಕೆ ಮಂದಿರ ಪೂರಕವಾಗುತ್ತಿದ್ದು, ಶಿರಡಿಗೆ ಹೋಗಲು ಅನಾನುಕೂಲವಾಗುವ ಭಕ್ತರಿಗೆ ಈ ಕ್ಷೇತ್ರ ಪರ್ಯಾಯ ಕ್ಷೇತ್ರವಾಗಿ ಬೆಳಗುತ್ತಿದೆ ಎಂದರು. ಶಿರಡಿ ಸಾಯಿ ಬಾಬಾರ ಭಕ್ತರಿಗೆ ಶ್ರದ್ಧೆ ಮತ್ತು ತಾಳ್ಮೆ ಅತೀ ಅಗತ್ಯ ಈ ಎರಡು ಗುಣಗಳು ಇದ್ದರೆ ಮನಸ್ಸಿನೊಂದಿಗೆ ಜ್ಞಾನಶುದ್ಧೀಕರಣ ಸಾಧ್ಯವಿದ್ದು, ಶ್ರದ್ಧೆ ಭಕ್ತಿಯಿಂದ ಒಳಗಿನ ರಕ್ಷಣೆ ಮತ್ತು ದೇಶ ಭಕ್ತಿಯೊಂದಿಗೆ ಹೊರಗಿನ ರಕ್ಷಣೆ ಮಾಡುವ ಕಾರ್ಯ ಆಗಬೇಕು. ಪಾಶ್ಚಾತ್ಯ ಸಂಸ್ಜೃತಿಯ ಆಕ್ರಮಣದಂತೆ ನಮ್ಮ ಮನಸ್ಸಿನೊಳಗೂ ಆಕ್ರಮಣಗಳು ನಡೆಯುತ್ತವೆ.

ಹೊರಗಿನ ರಕ್ಷಣೆಯನ್ನು ಸೈನಿಕರು ನಡೆಸಿದರೆ ನಮ್ಮ ಒಳಗಿನ ರಕ್ಷಣೆ ಮನಸ್ಸಿನಿಂದ ಸಾದ್ಯ. ಮನಷ್ಯನ ನಿಜವಾದ ಶತ್ರು ಮತ್ತು ಮಿತ್ರ ನಮ್ಮ ಮನಸ್ಸು. ಒಳ್ಳೆಯ ಸಂಸ್ಕಾರ ಭರಿತ ಮನಸ್ಸು ನಮ್ಮ ಮಿತ್ರನಾದರೆ, ದುರ್ವ್ಯಸನಗಳಿಂದ ಕೂಡಿದ ಚಿಂತನ ನಮ್ಮ ಶತ್ರುವಾಗಿದ್ದು, ಇಂತಹ ಧಾರ್ಮಿಕ ಕಾರ್ಯಗಳಿಂದ ಉತ್ತಮ ಮನಸ್ಸು ಪಡೆಯುವ ಮೂಲಕ ನಮ್ಮೊಳಗಿನ ರಕ್ಷಣೆ ಸಾಧ್ಯವಿದೆ ಎಂದ ಅವರು ಮಾಡೂರಿನ ಶಿರಡಿ ಸಾಯಿ ಮಂದಿರದಲ್ಲಿ ಕೇವಲ ಚಿನ್ನ,ಬೆಳ್ಳಿಯಿಂದ ಮಾತ್ರ ಮಾಡಿಲ್ಲ, ಇಲ್ಲಿ ದೀನ ದಲಿತರ ಕಾರ್ಯ ನಡೆಯುತ್ತಿದ್ದು, ಇದರಿಂದ ಈ ಕ್ಷೇತ್ರ ಬೆಳಗುತ್ತಿದ್ದು, ಮುಂದಿನ ದಿನಗಳಲ್ಲಿ ದೂರದ ಶಿರಡಿ ಹೋಗಲು ಅನಾನುಕೂಲವಾಗುವವರಿಗೆ ಈ ಮಂದಿರ ಪರ್ಯಾಯ ಕ್ಷೇತ್ರವಾಗಲಿದೆ ಎಂದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ಪ್ರಾಂತ ಸಹಸಂಪರ್ಕ ಪ್ರಮುಖ್ ಪ್ರಕಾಶ್ ಪಿ.ಎಸ್. ಪ್ರಧಾನ ಭಾಷಣದಲ್ಲಿ ಹಿಂದೂ ದೇಶವಾಗಿರುವ ಭಾರತದಂತಹ ದೇಶ ವಿಶ್ವದಲ್ಲಿ ಬೇರೊಂದಿಲ್ಲ. ಈ ನಿಟ್ಟಿನಲ್ಲಿ ಭಾರತದಲ್ಲಿ ಹುಟ್ಟಿರುವ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಿದರೆ ವಿಶ್ವದಲ್ಲಿ ಭಾರತದ ತಾಯಿಗೆ ಗೌರವ ಸಿಗುವುದರೊಂದಿಗೆ, ಭಾರತಿಯನೊಬ್ಬನಿಗೆ ಗೌರವ ಸಿಗಲು ಸಾಧ್ಯ. ಆದರೆ ಭಾರತದಲ್ಲಿ ಜಾತಿ, ಭಾಷೆಯ ಹೆಸರಿನಲ್ಲಿ , ಬಡವ ಬಲ್ಲಿದರ ಹೆಸರಿನಲ್ಲಿ , ಉತ್ತರ ದಕ್ಷಿಣದ ಹೆರಿನಲ್ಲಿ ನಮ್ಮಲ್ಲಿ ಜಗಳವಿದ್ದು ಇದರಿಂದ ದೇಶ ಹರಿದು ಹಂಚಿ ಹೋಗುವ ಇಂತಹ ಸಂದರ್ಭದಲ್ಲಿ ಮಠ ಮಂದಿರಗಳು ನಾವೆಲ್ಲ ಒಂದೇ ಎನ್ನುವ ಕಲ್ಪನೆಯನ್ನು ನೀಡುವ ಕಾರ್ಯ ಮಾಡಿದಾಗ, ಭಾರತದೆದುರು ನಾವೆಲ್ಲ ಮಕ್ಕಳು ಎನ್ನುವ ಭಾವನೆ ಮೂಡಲು ಸಾಧ್ಯ ಎಂದರು.

ಹಿಂದೂ ಒಂದು ಧರ್ಮ ಅಲ್ಲ. ಅದು ಒಂದು ಜೀವನ ಪದ್ಧತಿ. ಧರ್ಮ ಬೇರೆ ಅಲ್ಲ ,ಭಾಷೆ ಬೇರೆ ಅಲ್ಲ ಧರ್ಮ ಅಂದರೆ ಪೂಜಾ ಪದ್ಧತಿ ಅಲ್ಲ ಬೇರೆಯವರಿಗೆ ಗೌರವ ಕೊಡುವುದೇ ಧರ್ಮವಾಗಿದ್ದು, ಈ ವೇದಿಕೆ ಇಂತಹ ಕಾರ್ಯಕ್ಕೆ ಉಪಯೋಗಿಸಿಕೊಳ್ಳಬೇಕು, ಹಿಂದೂ ಜೀವನ ಪದ್ಧತಿಯಲ್ಲಿ ಅನೇಕ ಸಂಸ್ಕಾರಗಳಿವೆ ಹುಟ್ಟಿನಿಮದ ಸಾವಿನವರೆಗೆ ಸಾವಿನ ಬಳಿಕವೂ ಸಂಸ್ಕಾರಗಳಿದ್ದು, ತಾಯಿಯ ಗರ್ಭದಲ್ಲಿರುವಾಗಲೇ ಸಂಸ್ಕಾರಗಳಿದ್ದು, ಇಂತಹ ಸುಂದರವಾದ ಸುಸಕೃತವಾದ ನಾಡು ನಮ್ಮದಾಗಿದ್ದು ಇಂತಹ ವಿಚಾರಗಳನ್ನು ಧಾರ್ಮಿಕ ಕಾರ್ಯಗಳಲ್ಲಿ ತಿಳಿಸುವ ಕಾರ್ಯ ಆಗಬೇಕು. ಇಂದು ಭಾರತದಂತಹ ದೇಶದಲ್ಲಿ ನೆಮ್ಮದಿಯ ಬದುಕಿಗಾಗಿ ಹಲವಾರು ವರ್ಷಗಳಿಂದ ಬಲಿದಾನ ಮಾಡಿದ ನಮ್ಮ ಸ್ವಾತಂತ್ರ್ಯ ಯೋಧರ ಬಲಿದಾ, ಇಂದಿನ ಗಡಿ ಕಾಯುವ ಸೈನಿಕರ ಬಲಿದಾನವನ್ನು ನಾವು ಗೌರವಿಸುವ ಕಾರ್ಯ ಆಗಬೇಕು ಎಂದರು.

ಕಾರ್ಯಕ್ರಮಕ್ಕೆ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಚಾಲನೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀನಿವಾಸ್ ಸಮೂಹ ಶಿಕ್ಷಣ ಸಂಸ್ಥೆ ಮಂಗಳೂರು ಇಲ್ಲಿನ ಪ್ರಾಧ್ಯಾಪಕ ಹಾಗೂ ಮುಖ್ಯ ವೈದ್ಯಾಧಿಕಾರಿ ಡಾ| ಎಂ. ಅಣ್ಣಯ್ಯ ಕುಲಾಲ್ ವಹಿಸಿದ್ದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟುಗುತ್ತು, ಭಾರತೀಯ ಜನತಾ ಪಾರ್ಟಿಯ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ, ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಕುಮಾರ್ ಬಂಗಾರಪ್ಪ, ಉಡುಪಿಯ ಮಾಳವಿಕಾ ಬಿಲ್ಡರ್ಸ್ ಎಂಡ್ ಡೆವಲಪರ್ಸ್‍ನ ಲಕ್ಷ್ಮೀಶ್ ತಂತ್ರಿ, ಶ್ರೀ ಉಮಾಮಹೇಶ್ವರೀ ದೇವಸ್ಥಾನ ಉಮಾಪುರಿ ಕಾಪಿಕಾಡ್‍ನ ಆಡಳಿತ ಮೊಕ್ತೇಸರ ಎ.ಜೆ. ಶೇಖರ್, ಆಸರೆ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷೆ ಡಾ| ಆಶಾ ಜ್ಯೋತಿ ರೈ, ಶ್ರೀ ಶಿರಡಿ ಬಾಬಾ ಮಂದಿರದ ಆಡಳಿತ ಮೊಕ್ತೇಸರ ಸುರೇಶ್ ಕೆ.ಪಿ. ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ನಾಟಿವೈದ್ಯೆ ಲಲಿತಾ ಉಚ್ಚಿಲ್, ಆತೀ ವೇಗದ ಕಲಾಗಾರ್ತಿ ಶಬರಿ ಗಾಣಿಗ ಅವರನ್ನು ಸನ್ಮಾನಿಸಲಾಯಿತು.

ಉತ್ಸವ ಸಮಿತಿ ಅಧ್ಯಕ್ಷ ಚಂದ್ರಹಾಸ ಪಂಡಿತ್‍ಹೌಸ್ ಸ್ವಾಗತಿಸಿದರು. ಶ್ರೀ ಶಿರಡಿ ಬಾಬಾ ಮಂದಿರದ ಟ್ರಸ್ಟಿ ಕೆ.ಟಿ.ಸುವರ್ಣ ಪ್ರಸ್ತಾವನೆಗೈದರು.ಸೌಜನ್ಯ ಹೆಗ್ಡೆ ಮತ್ತು ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರ್ವಹಿಸಿದರು. ಉತ್ಸವ ಸಮಿತಿ ಪ್ರ. ಕಾರ್ಯದರ್ಶಿ ಎಸ್. ದಯಾನಂದ ತೊಕ್ಕೊಟ್ಟು ವಂದಿಸಿದರು.

Exit mobile version