ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಉಳ್ಳಾಲ: ತಮ್ಮ ಮೇಲೆ ನಂಬಿಕೆಯಿಟ್ಟು ಚಿಕಿತ್ಸೆಗೆ ಬರುವ ರೋಗಿಗಳ ಮೇಲೆ ಕಾಳಜಿ, ಹಾಗೂ ಕೆಲಸ ನೀಡಿದ ಸಂಸ್ಥೆಯ ಮೇಲೆ ಸಿಬ್ಬಂದಿಗಳು ಹಾಗೂ ವೈದ್ಯರಿಗೆ ಪ್ರೀತಿಯಿದ್ದಲ್ಲಿ ಯಾವುದೇ ಸಂಸ್ಥೆ ಕೀರ್ತಿಯ ಉತ್ತಂಗಕ್ಕೇರಲು ಸಾಧ್ಯ ಎಂದು ಉಳ್ಳಾಲ ಸಯ್ಯದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅಭಿಪ್ರಾಯಪಟ್ಟರು. ಯು.ಟಿ.ಫರೀದ್ ಫೌಂಡೇಶನ್ ಮೇಲಂಗಡಿ ಘಟಕದ ವತಿಯಿಂದ ದೇರಳಕಟ್ಟೆ ಕಣಚೂರು ವೈದ್ಯಕೀಯ ಕಾಲೇಜು ಮತ್ತು ಪ್ರಸಾದ್ ನೇತ್ರಾಲಯದ ಸಹಯೋಗದಲ್ಲಿ ಭಾನುವಾರ ದರ್ಗಾ ಮುಂಭಾಗ ನಡೆದ ಉಚಿತ ವೈದ್ಯಕೀಯ ತಪಾಸಣಾ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೆಲವು ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ವೈದ್ಯರು, ಸವಲತ್ತು ಇಲ್ಲ ಎನ್ನುವ ನೆಪ ಹೇಳಿ ರೋಗಿಗಳನ್ನು ಕಾಯಿಸುವ ಮುಖಾಂತರ ನಿರ್ಲಕ್ಷ್ಯ ಭಾವನೆಯಿಂದ ನೋಡುವುದು ಅನುಭವಕ್ಕೆ ಬಂದಿದೆ. ಇದರಿಂದ ಆಸ್ಪತ್ರೆಯ ಹೆಸರಿಗೂ ಕಳಂಕ ಬರುವ ಸಂಭವವಿದೆ. ಇಂತಹ ಪ್ರಕರಣ ಕಡಿವಾಣಕ್ಕೆ ಆಸ್ಪತ್ರೆಗಳ ಆಡಳಿತ ವರ್ಗ ಮುಂದಾಗಬೇಕು ಎಂದು ಹೇಳಿದರು. ಮೇಲಂಗಡಿ ಮೊಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಯೂಸುಫ್ ಮಿಸ್ಬಾಹಿ ದುವಾ ನೆರವೇರಿಸಿದರು. ಪೆರ್ಮನ್ನೂರು ಸಂತ ಸೆಬಾಸ್ತಿಯನ್ನರ ಚರ್ಚ್ನ ಪ್ರಧಾನ ಧರ್ಮಗುರು ರೆ.ಎಡ್ವಿನ್ ಸೆಲಿನ್ ಮಸ್ಕರೇನಸ್, ಕಣಚೂರು ವೈದ್ಯಕೀಯ ಕಾಲೇಜಿನ ಆಡಳಿತ ನಿರ್ದೇಶಕ ಅಬ್ದುಲ್ ರಹ್ಮಾನ್, ಮೇಲಂಗಡಿ ಮೊಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಫಾರೂಕ್ ಉಳ್ಳಾಲ್, ನಗರಸಭಾಧ್ಯಕ್ಷ ಹುಸೈನ್ ಕುಂಞ ಮೋನು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಉಚಿತ ಆರೋಗ್ಯ ಕಾರ್ಡ್ ಮತ್ತು ಕಾರ್ಮಿಕ ಕಾರ್ಡ್ ವಿತರಣೆ, ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ಹೆರಿಗೆ ವ್ಯವಸ್ಥೆ ಮತ್ತು ನಗದು, ಕಣ್ಣು ಪರೀಕ್ಷೆ, ಫಿಸಿಯಫಥೆರಪಿ ಮತ್ತು ತಜ್ಞರಿಂದ ಆರೋಗ್ಯ ತಪಾಸಣೆಎರಡು ಬಡರೋಗಿಗಳಿಗೆ ಸಹಾಯಧನ ಹಾಗೂ ಮೂವರು ಹೆಂಗಸರಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು.
ಉಳ್ಳಾಲ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು, ಸದಸ್ಯ ಬಾಝಿಲ್ ಡಿಸೋಜ, ಸರ್ವಧರ್ಮ ಸಮನ್ವಯ ಸಮಿತಿಯ ಸಂಚಾಲಕ ಪಿಯೂಸ್ ಮೊಂತೆರೋ, ಯು.ಟಿ.ಫರೀದ್ ಫೌಂಡೇಶನ್ನ ಡಾ.ಯು.ಟಿ.ಇಫ್ತಿಕಾರ್, ಪ್ರಸಾದ್ ನೇತ್ರಾಯದ ಡಾ.ವಿಕ್ರಂ ಜೈನ್, ಡಾ.ರೇಖಲತಾ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ, ನಗರಸಭಾ ಸದಸ್ಯ ಮುಸ್ತಫಾ ಅಬ್ದುಲ್ಲಾ ಸ್ವಾಗತಿಸಿದರು. ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.