ಉಳ್ಳಾಲ ನ್ಯೂಸ್ ನೆಟ್‍ವರ್ಕ್
ತೊಕ್ಕೊಟ್ಟು: ಸಮಾಜದಲ್ಲಿ ಹಿಂದುಳಿದವರ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಹೆಲ್ಪ್ ಇಂಡಿಯಾ ಫೌಂಡೇಶನ್ ನ ಕಾರ್ಯವೈಖರಿ ಇತರೆ ಸಂಘಟನೆಗಳಿಗೂ ಮಾದರಿಯಾಗಿದ್ದು, ಭವಿಷ್ಯದಲ್ಲಿ ದೇಶದಾದ್ಯಂತ ಸಂಘಟನೆ ಕಾರ್ಯಾಚರಿಸಲಿ ಎಂದು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಹೇಳಿದ್ದಾರೆ. ಅವರು ತೊಕ್ಕೊಟ್ಟು ಹೆಲ್ಪ್ ಇಂಡಿಯಾ ಕಚೇರಿಯಲ್ಲಿ ಸೋಮವಾರ ಹೆಲ್ಪ್ ಇಂಡಿಯಾ ಫೌಂಡೇಶನ್ ವತಿಯಿಂದ ಉಚಿತ ಟೈಲರಿಂಗ್ ಸರ್ಟಿಫಿಕೇಟ್ ಕೋರ್ಸನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಳ್ಳಾಲ ಸೈಯ್ಯಿದ್ ಮದನಿ ದರ್ಗಾ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಮಾತನಾಡಿ ಸಮಾಜದಲ್ಲಿ ಸಂಸ್ಥೆಗಳಿಗೆ ಕೊರತೆಯಿಲ್ಲ, ಸ್ಥಾಪನೆಯಾದ ಕೆಲವೇ ದಿನಗಳಲ್ಲಿ ನಿಗೂಢವಾಗಿ ಮಾಯವಾಗುವ ಸಂಘಟನೆಗಳೆ ಹೆಚ್ಚಿದೆ. ಆದರೆ ಹೆಲ್ಪ್ ಇಂಡಿಯಾ ಹಲವು ವರ್ಷಗಳಿಂದ ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ಬಡವರಿಗಾಗಿ ಹಮ್ಮಿಕೊಂಡು ಬೆಳೆಯುತ್ತಲೇ ಇದೆ. ಮಹಿಳೆಯರು ಸಬಲರಾದರೆ ಇಡೀ ಮನೆಯೇ ಬೆಳಗಿದಂತೆ, ಈ ನಿಟ್ಟಿನಲ್ಲಿ ಫೌಂಡೇಶನ್ ಮಹಿಳೆಯರಿಗೆ ಸ್ವ ಉದ್ಯೋಗ ಹೊಂದಲು ಅವಕಾಶ ಮಾಡಿಕೊಡುವ ಮೂಲಕ ಉತ್ತಮ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದರಿಂದ ಬಡವರು ಆರ್ಥಿಕವಾಗಿ ಸಬಲರಾಗಲು ಕಾರಣವಾಗುವುದು. ಸದ್ಯದ ಸ್ಥಿತಿಯಲ್ಲಿ ಕನಿಷ್ಠ ಗಂಡಂದಿರ ಬಟನ್ ಹಾಕುವ ಪತ್ನಿಯರು ಇಲ್ಲ. ಸಂಸ್ಥೆಗಳು ನೀಡಿದ ಟೈಲರಿಂಗ್ ಮೆಷಿನ್ ಗಳನ್ನು ಮೂಲೆಗೆ ಬಿಸಾಡಿದ ಉದಾಹರಣೆಗಳು ಇವೆ. ಆದರೆ ಫಲಾನುಭವಿಗಳು ತರಬೇತಿಯ ಸದುಪಯೋಗಪಡಿಸಿಕೊಂಡು , ಜೀವನದಲ್ಲಿ ಯಶಸ್ಸು ಹೊಂದುವ ಮೂಲಕ ಸಂಯೋಜಕ ಕಾರ್ಯವನ್ನು ಅರ್ಥಪೂರ್ಣವಾಗಿಸಬೇಕಿದೆ ಎಂದರು.
ನಗರಸಭೆ ಅಧ್ಯಕ್ಷ ಹುಸೈನ್ ಕುಂಞಮೋನು, ಕಾಂಗ್ರೆಸ್ ವಕ್ತಾರ ಫಾರುಕ್ ಉಳ್ಳಾಲ್, ಜೆಡಿಎಸ್ ಮುಖಂಡ ಹೈದರ್ ಪರ್ತಿಪ್ಪಾಡಿ , ತೂಮಿನಾಡು ಸ್ನೇಹಾಲಯ ಆಶ್ರಮದ ನಿರ್ದೇಶಕ ಜೋಸೆಫ್, ನಗರಸಭೆ ಸದಸ್ಯರಾದ ಉಸ್ಮಾನ್ ಕಲ್ಲಾಪು, ಫಾರುಕ್ ಪಟ್ಲ, ತುಳುನಾಡು ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೊಗೀಶ್ ಶೆಟ್ಟಿ ಜೆಪ್ಪು, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಮುನೀರ್ ಬಾವ, ಉದ್ಯಮಿ ಯು.ಹೆಚ್ ಹಸೈನಾರ್, ಹೆಲ್ಪ್ ಇಂಡಿಯಾ ಫೌಂಡೇಶನ್ನಿನ ಸ್ಥಾಪಕ ಉಪಾಧ್ಯಕ್ಷ ಉಮ್ಮರ್ ಫಾರುಕ್, ತರಬೇತುದಾರೆ ಜಯಶ್ರೀ , ಸಾಮಾಜಿಕ ಕಾರ್ಯಕರ್ತ ಕಬೀರ್ ಉಳ್ಳಾಲ್, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ನಿನ ಯಹ್ಯಾ , ಭಾಸ್ಕರ್ ಉಳ್ಳಾಲ್ ಉಪಸ್ಥಿತರಿದ್ದರು.
ಝಾಕಿರ್ ಇಕ್ಲಾಸ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹೆಲ್ಪ್ ಇಂಡಿಯಾ ಫೌಂಡೇಶನ್ನಿನ ಸ್ಥಾಪಕ ಕಾರ್ಯದರ್ಶಿ ರಾಝಿಕ್ ಉಳ್ಳಾಲ್ ಸ್ವಾಗತಿಸಿದರು. ಅಹಮ್ಮದ್ ಶಕೀಲ್ ಕಾರ್ಯಕ್ರಮ ನಿರೂಪಿಸಿದರು.ಈ ಸಂದರ್ಭ ಸ್ಥಳೀಯ ಸೆಕ್ಯುರಿಟಿ ಗಾರ್ಡ್ ಓರ್ವರ ಪುತ್ರಿಗೆ ಶ್ರವಣ ಸಾಧನವನ್ನು ಫೌಂಡೇಶನ್ ವತಿಯಿಂದ ವಿತರಿಸಲಾಯಿತು.
ಉಚಿತ ತರಬೇತಿ
ಟೈಲರಿಂಗ್ ತರಬೇತಿ ಉಚಿತವಾಗಿದ್ದು, ತೊಕ್ಕೊಟ್ಟು, ಉಳ್ಳಾಲ, ಕೊಣಾಜೆ ಭಾಗದ ಮಹಿಳೆಯರಿಗೆ ತರಬೇತಿಯನ್ನು ಪಡೆಯಬಹುದಾಗಿದೆ. ಯಾವುದೇ ಶುಲ್ಕವಿಲ್ಲದೆ ನಡೆಯುವ ತರಬೇತಿಯ ಒಂದು ಬ್ಯಾಚಿನಲ್ಲಿ 50 ರಷ್ಟು ಮಹಿಳೆಯರು ಭಾಗವಹಿಸಬಹುದಾಗಿದೆ. ಹೆಲ್ಪ್ ಇಂಡಿಯಾ ತೊಕ್ಕೊಟ್ಟುವಿನ ಕಚೇರಿಯಲ್ಲಿ ನಡೆಯುವ ತರಬೇತಿಯಲ್ಲಿ ಟೈಲರಿಂಗ್ ಸಂಬಂಧಿಸಿದ ಹಲವು ತರಬೇತಿಯನ್ನು ನೀಡಲಾಗುವುದು. ತರಬೇತಿ ಪಡೆದವರಿಗೆ ಸರ್ಟಿಫಿಕೇಟನ್ನು ಒದಗಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
2015ರಲ್ಲಿ 8 ಜನ ಸಮಾನ ಮನಸ್ಕರು ಸೇರಿಕೊಂಡು ಹೆಲ್ಪ್ ಇಂಡಿಯಾ ಫೌಂಡೇಶನ್ ಅನ್ನು ಸ್ಥಾಪಿಸಿದ್ದರು. ಬಡ, ನಿರ್ಗತಿಕರ ಕಷ್ಟಗಳಿಗೆ ಜಾತಿ ಭೇದವಿಲ್ಲದೆ ಸ್ಪಂಧನೆ, ನಿರಾಶ್ರಿತರಿಗೆ ಆಶ್ರಯ, ಬಡತನ ರೇಖೆಗಿಂತ ಕೆಳಸ್ತರದ ರೋಗಿಗಳಿಗೆ ಶುಶ್ರೂಷೆ, ವಿದ್ಯಾರ್ಥಿಗಳ ದತ್ತು ಸ್ವೀಕಾರ, ನಿರುದ್ಯೋಗಿಗಳಿಗೆ ಉದ್ಯೋಗ, ಸ್ವ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಫೌಂಡೇಶನ್ ಸ್ಥಾಪನೆಗೊಂಡಿದೆ. ವಾರೀಸುದಾರರಿಲ್ಲದೆ ಬೀದಿಗಳಲ್ಲಿ ಅಲೆದಾಡುವ ಅನಾಥರು, ಭಿಕ್ಷುಕರು, ಮಾನಸಿಕ ರೋಗಿಗಳ ಆರೈಕೆ ಮತ್ತು ಚಿಕಿತ್ಸೆ ನೀಡಿ ಮನೆಗಳಿಗೆ ಕಳುಹಿಸುವುದು, ಕಂಚಿನಡ್ಕ ನಿವಾಸಿಗರಿಗೆ ಬಾವಿ ನಿರ್ಮಾಣ, ಅಂಗವಿಕಲರಿಗೆ ವ್ಹೀಲ್ ಚೇರ್ ವಿತರಣೆ, ಪಿಯು ವಿದ್ಯಾರ್ಥಿಗಳಿಗೆ ಕ್ಯಾರಿಯರ್ ಗೈಡೆನ್ಸ್, ಮಂಜನಾಡಿ ಗ್ರಾಮದ ಉರುಮನೆ, ಅನ್ಸಾರ್ ನಗರ ಹಾಗೂ ತಿಲಕನಗರ, ಕನಕೂರು ಸೈಟುಗಳಿಗೆ ನೀರು ಸರಬರಾಜು, ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ವ್ಯಸನ ಹಾಗೂ ದುಷ್ಪರಿಣಾಮಗಳ ಅರಿವು, ಸೌಹಾರ್ದ ಕೂಟ, ಕಡುಬಡವರಿಗೆ ರೇಶನ್ ವಿತರಣೆ, ಹೆಚ್ ಐವಿ ಪೀಡಿತ ಮಕ್ಕಳ ಜತೆಗೆ ದೀಪಾವಳಿ ಆಚರಣೆ, ಬೃಹತ್ ರಕ್ತದಾನ ಶಿಬಿರಗಳ ಮೂಲಕ ನಿರಂತರವಾಗಿ ಸಮಾ ಸೇವೆಯಲ್ಲಿ ತೊಡಗಿಸಿಕೊಂಡು ಬಂದಿದೆ.