Site icon Ullalavani

ದೇರಳಕಟ್ಟೆ: 10 ರೂ ನಾಣ್ಯ ಸ್ವೀಕರಿಸದ ಸಿಂಡಿಕೇಟ್ ಬ್ಯಾಂಕ್ ವಿರುದ್ಧ ಪ್ರತಿಭಟನೆ

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ದೇರಳಕಟ್ಟೆ: ಹತ್ತು ರುಪಾಯಿ ನಾಣ್ಯದ ಅಪಮೌಲ್ಯದ ಬಗ್ಗೆ ಆರ್ ಬಿ ಐ ಯಿಂದ ಯಾವುದೇ ಆದೇಶ ಬಂದಿಲ್ಲ ಆದರೆ ಇದೀಗ ಬ್ಯಾಂಕುಗಳು ಅದನ್ನು ಸ್ವೀಕರಿಸದೇ ಆರ್.ಬಿ,ಐ ನಿಯಮವನ್ನು ದಿಕ್ಕರಿಸುತ್ತಿದ್ದಾರೆ, ಇದು ಜನಸಾಮಾನ್ಯರನ್ನು ಗೊಂದಲಕ್ಕೀಡು ಮಾಡುತ್ತಿದೆ ಎಂದು ತುಳುನಾಡು ರಕ್ಷಣಾ ವೇದಿಕೆಯ ಮಂಗಳೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಎಂ.ಸಿರಾಜ್ ಅಡ್ಕರೆ ಹೇಳಿದ್ದಾರೆ.

ಸಿಂಡಿಕೇಟ್ ಬ್ಯಾಂಕಿನ ದೇರಳಕಟ್ಟೆ ಶಾಖೆಯಲ್ಲಿ 10 ರೂ. ನಾಣ್ಯವನ್ನು ಪಡೆಯುತ್ತಿಲ್ಲ ಎಂದು ಆರೋಪಿಸಿ ಮಂಗಳೂರು ವಿಧಾನಸಭಾಕ್ಷೇತ್ರದ ತುಳುನಾಡು ರಕ್ಷಣಾ ವೇದಿಕೆ ಶುಕ್ರವಾರ ಬ್ಯಾಂಕಿನ ಎದುರುಗಡೆ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಜನಸಾಮಾನ್ಯರು ದುಡಿಮೆಯ ಮೊತ್ತದಲ್ಲಿ ಖರ್ಚು ವೆಚ್ಚದಲ್ಲಿ ಮಿಕ್ಕಿದ ಹಣವನ್ನು ಸುರಕ್ಷಿತವಾಗಿಡಲು ನೆರವಾಗುವ ಉದ್ದೇಶಕ್ಕಾಗಿ ಬ್ಯಾಂಕ್ ಗಳನ್ನು ಅವಲಂಬಿತರಾಗಿದ್ದಾರೆ. ಸಾಮಾನ್ಯ ಜನರು, ವಿವಿಧ ವರ್ಗದಲ್ಲಿ ದುಡಿಯುತ್ತಿರುವ ಕಾರ್ಮಿಕರು, ಬೀಡಿ ಕಾರ್ಮಿಕರು, ವಿದ್ಯಾರ್ಥಿಗಳು ಬ್ಯಾಂಕ್ ಗಳ ಸೇವೆಯನ್ನು ಅರಸಿಕೊಂಡು ಹೋಗುತ್ತಾರೆ, ಆದರೆ ಇತ್ತೀಚಿಗೆ ಬ್ಯಾಂಕುಗಳ ಸೇವೆಯು ಜನರನ್ನು ಸತಾಯಿಸುವಲ್ಲಿ ಕೆಲಸಮಾಡುತ್ತಿದೆ. ಹತ್ತು ರುಪಾಯಿ ನಾಣ್ಯದ ಅಪಮೌಲ್ಯದ ಬಗ್ಗೆ ಆರ್ ಬಿ ಐ ಇಂದ ಯಾವುದೇ ಆದೇಶ ಬಂದಿಲ್ಲ. ಆದರೆ ಇದೀಗ ಬ್ಯಾಂಕುಗಳು ಅದನ್ನು ಸ್ವೀಕರಿಸದೇ ಆರ್.ಬಿ,ಐ ನಿಯವನ್ನು ದಿಕ್ಕರಿಸಿರುತ್ತಾರೆ. ಇದರ ಜೊತೆಗೆ ದೇರಳಕಟ್ಟೆಯ ಸಿಂಡಿಕೇಟ್ ಬ್ಯಾಂಕ್ ಶಾಖೆಯ ಬಗ್ಗೆ ಈಗಾಗಲೇ ಸಾರ್ವಜನಿಕರಿಂದ ದೂರುಗಳು ಬಂದಿವೆ. ಇಲ್ಲಿ ಬಡ ವರ್ಗದವರು ಹೋದರೆ ಸದಾ ಸತಾಯಿಸುತ್ತಿರುವುದು ಕಂಡು ಬಂದಿದೆ. ಹಿರಿಯ ವ್ಯಕ್ತಿಗಳಿಗೆ ಬ್ಯಾಂಕ್ ಸಿಬ್ಬಂದಿ ಅಗೌರವದಿಂದ ನಡೆಸಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ. ಸಾರ್ವಜನಿಕರನ್ನು ಘಂಟೆಗಟ್ಟಲೆ ಕಾಯಿಸಿ ಸತಾಯಿಸುತ್ತಿರುವುದು ಇಲ್ಲಿ ಸರ್ವೇಸಾಮಾನ್ಯವಾಗಿದೆ. ಇದಕ್ಕೆ ಪೂರಕವೆಂಬಂತೆ ಇದೀಗ ಹತ್ತು ರುಪಾಯಿಗಳ ನಾಣ್ಯವನ್ನು ಸ್ವೀಕರಿಸುತ್ತಿಲ್ಲ. ಈ ಬಗ್ಗೆ ಮನವಿ ನೀಡಲು ಹೋದಾಗ ಬ್ಯಾಂಕ್ ಮೆನೇಜರ್ ಉಡಾಫೆಯ ಉತ್ತರವನ್ನು ನೀಡುತ್ತಿದ್ದಾರೆ. ಪೆನ್ಶನ್ ಹಣಕ್ಕಾಗಿ ಹಿರಿಯ ನಾಗರಿಕರು ಬ್ಯಾಂಕಿಗೆ ಹೋದರೆ ಅವರ ಜೊತೆಗೆ ಅಗೌರವದೊಂದಿಗೆ ವ್ಯವಹರಿಸುವುದು, ಅನಕ್ಷರಸ್ಥರ ಜತೆಗೆ ಸೂಕ್ತವಾಗಿ ಸ್ಪಂಧಿಸದೆ ಅವರ ಸಣ್ಣ ತಪ್ಪುಗಳನ್ನು ಬಹಿರಂಗವಾಗಿ ಹೇಳಿ ಅವಮಾನಿಸುತ್ತಿದ್ದಾರೆ. ಸಂಬಂಧಪಟ್ಟವರು ಕೂಡಲೇ ಸೂಕ್ತ ಕ್ರಮ ಕೈಗೊಳ್ಳದೇ ಇದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರತಭಟನೆಯಲ್ಲಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿಕಾ ಜೈನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಕೆ ಬಂಗೇರ, ಮಂಗಳೂರು ವಿಧಾನ ಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ರಾಜೇಶ್ ಕುತ್ತಾರ್, ಮಂಗಳೂರು ವಿಧಾನ ಸಭಾ ಕ್ಷೇತ್ರದ ಉಪಾದ್ಯಕ್ಷರಾದ ರಹೀಂ ಕುತ್ತರ್, ಮಂಗಳೂರು ವಿಧಾನ ಸಭಾ ಕ್ಷೇತ್ರದ ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾ ಯು ಜೋಗಿ, ಮಂಗಳೂರು ವಿಧಾನ ಸಭಾ ಕ್ಷೇತ್ರದ ಯುವ ಘಟಕದ ಅಧ್ಯಕ್ಷ ಅರುಣ್ ಡಿಸೋಜ, ಕೊಣಾಜೆ ಘಟಕದ ಅಧ್ಯಕ್ಷ ನಿಯಾಝ್, ಚೆಂಬುಗುಡ್ಡೆ ಮಹಿಳಾ ಘಟಕದ ಜ್ಯೋತಿ, ಲಿಯೋ, ಜಾಫರ್ ಸಾದಿಕ್, ಜಾಬಿರ್ ಮುಂತಾದವರು ಉಪಸ್ಥಿತರಿದ್ದರು.

Exit mobile version