ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಕೋಟೆಕಾರು: ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಇನ್ನೂ 6 ರೇಷನ್ ಅಂಗಡಿಗಳನ್ನು ಸ್ಥಾಪಿಸಬಹುದಾಗಿದ್ದು ಸ್ವಸಹಾಯ ಸಂಘ, ಸ್ತ್ರೀಶಕ್ತಿ ಗುಂಪುಗಳು ಮತ್ತು ಸಹಕಾರಿ ಸಂಘಗಳು ಮುಂದೆ ಬಂದಲ್ಲಿ ಅವರಿಗೆ ಅಂಗಡಿ ತೆರೆಯಲು ಪ್ರಥಮ ಆದ್ಯತೆಯನ್ನು ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಅವರು ಕೋಟೆಕಾರು ಪಟ್ಟಣ ಪಂಚಾಯತ್ ಪಟ್ಟಣ ಪಂಚಾಯತ್‍ನಲ್ಲಿ ಶೇ. 24.10, ಶೇ. 7.25 ಮತ್ತು ಶೇ. 3ರ ನಿಧಿಯಡಿ ವಿವಿಧ ಸೌಲಭ್ಯ ವಿತರಣಾ ಸಮಾರಂಭದಲ್ಲಿ ಶುಕ್ರವಾರ ಫಲಾನುಭವಿಗಳಿಗೆ ಚೆಕ್ ವಿತರಿಸಿ ಮಾತನಾಡಿದರು.
ಸ್ಥಳೀಯ ಜನಪ್ರತಿನಿಧಿಗಳು ಕ್ರಮ ಪ್ರಕಾರವಾಗಿ ಕಾರ್ಯ ನಿರ್ವಹಿಸಿದಲ್ಲಿ ಗ್ರಾಮದ ಅಭಿವೃದ್ಧಿ ಸಾಧ್ಯ, ಕೋಟೆಕಾರು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿದ ಬಳಿಕ ನಗರೋತ್ಥಾನ ಯೋಜನೆಯಡಿ ರೂ. 5 ಕೋಟಿ ಅನುದಾನ ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಹೆಚ್ಚಿನ ಅನುದಾನಗಳು , ವಿವಿಧ ಸವಲತ್ತುಗಳು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸ್ಕಾಲರ್ ಶಿಪ್ ನಲ್ಲೂ ಏರಿಕೆಯಾಗಿದೆ. ಇದರ ಸದುಪಯೋಗವನ್ನು ಗ್ರಾಮಸ್ಥರು ಪಡೆದುಕೊಳ್ಳುವ ಮೂಲಕ ಸಾಮಾಜಿಕ ಬದಲಾವಣೆ ತರಲು ಪ್ರಯತ್ನಿಸಬೇಕಿದೆ. ಆರ್ಥಿಕವಾಗಿ ಸಬಲೀಕರಣಗೊಳ್ಳಲು ಶಿಕ್ಷಣದಿಂದ ಮಾತ್ರ ಸಾಧ್ಯವಿದ್ದು, ಈ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸರಕಾರ ಹೆಚ್ಚಿನ ಒತ್ತು ನೀಡುತ್ತಿದೆ. ಕೋಟೆಕಾರು ಪಂಚಾಯತ್ ಅನ್ನು ಸೀಮೆಎಣ್ಣೆ ಮುಕ್ತ ಪಂಚಾಯತ್ ಆಗಿ ರೂಪಿಸಲು ಈಗಾಗಲೇ ಹಲವು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಗ್ಯಾಸ್ ಕಿಟ್ ವಿತರಿಸಲಾಗಿದೆ ಎಂದ ಅವರು ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರ ವೇತನವನ್ನು ಸರಕಾರ ಹೆಚ್ಚಿಸುವ ಮೂಲಕ ಮಹತ್ತರ ಜವಾಬ್ದಾರಿಯನ್ನು ನಿರ್ವಹಿಸಿದೆ. 800ಮನೆಗಳಿಗೆ 1 ರೇಷನ್ ಅಂಗಡಿ ಇರಬೇಕಾದ ಕಾನೂನಿದೆ. ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಇನ್ನೂ 6 ಹೆಚ್ಚುವರಿ ಅಂಗಡಿಗಳನ್ನು ತೆರೆಯಬಹುದು. ಅದನ್ನು ಸ್ವಸಹಾಯ ಸಂಘಗಳು, ಸ್ತ್ರೀಶಕ್ತಿ ಹಾಗೂ ಸಹಕಾರಿ ಸಂಘಗಳಿಗೆ ಸ್ಥಾಪಿಸಲು ಮುಂದಾದಲ್ಲಿ ಅವರಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ಈ ಸಂದರ್ಭ ಶೇ. 24.10 ನಿಧಿಯಡಿ ರೂ. 4.81 ಲಕ್ಷ ಅನುದಾನವನ್ನು ಎಸ್ ಎಸ್ ಎಲ್ ಸಿ, ಪಿಯುಸಿ, ಪದವಿ, ಪಿಹೆಚ್ ಡಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಮನೆ ನಿರ್ಮಾಣಕ್ಕೆ ಸಹಾಯಧನ, ಅಡುಗೆ ಅನಿಲ ಸಂಪರ್ಕಕಕ್ಕೆ ಸಹಾಯzಧನ, ಮನೆ ದುರಸ್ತಿಗೆ ಸಹಾಯಧನ, ಶೇ. 7.25 ನಿಧಿಯಡಿ ರೂ. 5.60 ಲಕ್ಷ ಅನುದಾನದಡಿ ವೈದ್ಯಕೀಯ ವೆಚ್ಚ ಹಾಗೂ ವಿದ್ಯಾರ್ಥಿ ವೇತನ , ಅಡುಗೆ ಅನಿಲ ಸಂಪರ್ಕಕ್ಕೆ ಸಹಾಯಧನ ಮತ್ತು ಶೇ. 3 ನಿಧಿಯಡಿ ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಕಾದಿರಿಸಿದ ರೂ. 2.85 ಲಕ್ಷ ವೆಚ್ಚದಲ್ಲಿ ವಿಕಲಚೇತನರಿಗೆ ಸಲಕರಣೆ ಮತ್ತು ಪೋಷಣಾ ಭತ್ಯೆ ಸೇರಿ ಒಟ್ಟು ರೂ. 13,25,512 ವೆಚ್ಚದಲ್ಲಿ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಸುಳ್ಳೇಂಜೀರು ವಹಿಸಿದ್ದರು.
ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪೂರ್ಣಕಲಾ , ಸ್ಥಾಯಿ ಸಮಿತಿ ಅಧ್ಯಕ್ಷೆ ಭಾರತಿ ರಾಘವ ಗಟ್ಟಿ , ಸದಸ್ಯರಾದ ಜಯಶ್ರೀ ಪ್ರಫುಲ್ಲದಾಸ್,ಲೋಹಿತ್ ಪೂಜಾರಿ, ಮೋಹನ್ ಬಲ್ಯ, ಸುಮತಿ , ಹಮೀದ್ ಹಸನ್ ಮಾಡೂರು, ಧೀರಾಜ್ ಕುಸಾಲ್ ನಗರ, ದಿವ್ಯಾ ಸತೀಶ್ ಶೆಟ್ಟಿ, ಡಿ.ಎಂ ಮೊಹಮ್ಮದ್ , ಲ್ಯಾನ್ಸಿ ಡಿ’ಸೋಜ, ಅಣ್ಣು, ಜುಲೇಖ ಬಶೀರ್ , ಮೊಯಿದ್ಧಿನ್ ಕುಂಞ, ಮಾಜಿ ಸದಸ್ಯರಾದ ಆಲ್ವಿನ್ ಡಿ.ಸೋಜ, ಧಾರ್ಮಿಕ ಪರಿಷತ್ ಸದಸ್ಯ ಕೃಷ್ಣ ಗಟ್ಟಿ ಅಡ್ಕ ಉಪಸ್ಥಿತರಿದ್ದರು.
ಕೋಟೆಕಾರು ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಅನಿಲ್ ಬಗಂಬಿಲ ಸ್ವಾಗತಿಸಿದರು. ರವಿ ಕೊಂಡಾಣ ಕಾರ್ಯಕ್ರಮ ನಿರ್ವಹಿಸಿದರು.
ಪಿಹೆಚ್‍ಡಿ ವಿದ್ಯಾರ್ಥಿನಿಗೆ ಶ್ಲಾಘನೆ
ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮಾಡೂರು ಬಲ್ಯ ನಿವಾಸಿ ಕೂಲಿ ಕಾರ್ಮಿಕರ ಪುತ್ರಿ ಸಂಶೋಧನ ವಿದ್ಯಾರ್ಥಿನಿಯಾಗಿರುವ ರಾಜೇಶ್ವರಿ ಎಂ.ಇವರಿಗೆ ರೂ. 30,000 ಸಹಾಯಧನ ವಿತರಿಸಿ ವಿದ್ಯಾರ್ಥಿನಿ ಸಾಧನೆಯನ್ನು ಸಾರ್ವಜನಿಕವಾಗಿ ಶ್ಲಾಘಿಸಿದರು. ಪರಿಶಿಷ್ಟ ಜಾತಿಗೆ ಸೇರಿದ ಶೀನ ಮತ್ತು ಸುಮಿತ್ರ ದಂಪತಿ ಪುತ್ರಿಯಾಗಿರುವ ರಾಜೇಶ್ವರಿ ಇವರು ` ಮಂಗಳೂರು ಮಹಾನಗರ ಪಾಲಿಕೆ ಪೌರಕಾರ್ಮಿಕರ ಕುರಿತ ಸಾಮಾಜಿಕ ಅಧ್ಯಯನ ‘ ಕುರಿತು ಪಿಹೆಚ್ ಡಿ ನೆರವೇರಿಸುತ್ತಿದ್ದಾರೆ. ಹೆತ್ತವರ ಕೂಲಿ ಕೆಲಸದ ಆದಾಯ ಜತೆಗೆ ಸ್ಕಾಲರ್‍ಶಿಪ್‍ಗಳ ಮೂಲಕವೇ ಶಿಕ್ಷಣ ಮುಂದುವರೆಸಿದ ರಾಜೇಶ್ವರಿ ಸಾಮಾಜಿಕ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ಯುಜಿಸಿ ನೆಟ್ ಮತ್ತು ಕೆ-ಸೆಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ವಿದ್ಯಾರ್ಥಿನಿ ಎಲ್ಲಾ ವಿದ್ಯಾರ್ಥಿಗಳಿಗೂ ಮಾದರಿ ಎಂದು ಹುರಿದುಂಬಿಸಿ, ವಿದೇಶದಲ್ಲಿ ಹೆಚ್ಚುವರಿ ಕಲಿಕೆಯನ್ನು ಮುಂದುವರಿಸುವುದೇ ಆದಲ್ಲಿ ರಾಜ್ಯ ಸರಕಾರದಿಂದ ಎಲ್ಲಾ ಖರ್ಚನ್ನು ಭರಿಸುವ ವಿಶ್ವಾಸ ನೀಡಿದರು.