ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಕೋಟೆಕಾರು: ಕೋಟೆಕಾರು ಪಟ್ಟಣ ಪಂಚಾಯತ್ ಆದ ನಂತರದ ಪ್ರಥಮ 2017-18 ನೇ ಸಾಲಿನ ಬಜೆಟ್ ಸಭೆ ಗುರುವಾರ ಪಂಚಾಯತ್‍ನಲ್ಲಿ ನಡೆದಿದ್ದು, ಒಟ್ಟು ಆದಾಯ 10.59 ಕೋಟಿ ಅನುದಾನದಡಿ ಲೆಕ್ಕಾಚಾರದಲ್ಲಿ ನಡೆದ ಬಜೆಟಿನಲ್ಲಿ 10.48 ಲಕ್ಷ ಖರ್ಚು ಅಂದಾಜಿಸಲಾಗಿದೆ ಮತ್ತು 10.60 ಲಕ್ಷ ಮಿಗತೆ ಬಜೆಟ್ ಮಂಡಿಸಲಾಗಿದ್ದು, ನೀರು ಮತ್ತು ಘನ ತ್ಯಾಜ್ಯ ವಿಲೇವಾರಿಗೆ ಹೆಚ್ಚಿನ ಒತ್ತು ನೀಡುವ ಕುರಿತು ಚರ್ಚಿಸಲಾಯಿತು.
ಅನಧಿಕೃತ ನೀರಿನ ಕನೆಕ್ಷನ್ನಿಗೆ ಬ್ರೇಕ್ : ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 5,648 ಕುಟುಂಬಗಳಿದ್ದು, 2,300 ನೀರಿನ ಅಧಿಕೃತ ಕನೆಕ್ಷನ್ ಗಳು ಇವೆ. ಹಲವು ಅನಧಿಕೃತ ನೀರಿನ ಕನೆಕ್ಷನ್ ಗಳು ಇರುವುದರ ವಿರುದ್ಧ ಜೂನ್ ಬಳಿಕ ಕಾರ್ಯಾಚರಣೆ ನಡೆಸುವುದು. ನಳ್ಳಿ ನೀರಿನ ಜೋಡಣೆ ವಾಸ್ತವ್ಯಕ್ಕೆ ರೂ. 1,800 ಹಾಗೂ ವಾಣಿಜ್ಯಗಳಿಗೆ ರೂ. 4,000 ದಂತೆ ಶುಲ್ಕ ಪಾವತಿಸಲಾಗುವುದು ಮತ್ತು ಕಡ್ಡಾಯವಾಗಿ ಜೂನ್ ನಂತರ ಮೀಟರ್ ಅಳವಡಿಸಲಾಗುವುದು ಎಂದು ಮುಖ್ಯಾಧಿಕಾರಿ ತಿಳಿಸಿದರು.
ಕ್ರಿಯಾ ಯೋಜನೆಗಳು : 20 ಲಕ್ಷ ವೆಚ್ಚದಲ್ಲಿ ಪುಳಿತ್ತಡಿ ಎಂಬಲ್ಲಿ ತೆರೆದ ಬಾವಿಗೆ , ಮಾಡೂರು ಸ್ಮಶಾನ ಬಳಿ 1 ಲಕ್ಷ ಲೀಟರ್ ಸಾಮಥ್ರ್ಯದ ಓವರ್‍ಹೆಡ್ ಟ್ಯಾಂಕ್ ಹಾಗೂ ಕೊಳವೆ ಜಾಲ ಅಳವಡಿಕೆ, 25 ಲಕ್ಷ ರೂ ವೆಚ್ಚದಲ್ಲಿ ಪನೀರು ಸೈಟಿನಲ್ಲಿ ತೆರೆದಬಾವಿ ಹಾಗೂ2.50 ಲಕ್ಷ ಲೀ. ಸಾಮಥ್ರ್ಯದ ಓವರ್ ಹೆಡ್ ಟ್ಯಾಂಕ್ , ಮಾಡೂರು ದ್ವಾರದಿಂದ ಮಿತ್ರನಗರದವರೆಗೆ ರಸ್ತೆಗೆ ರೂ. 50 ಲಕ್ಷ ವೆಚ್ಚದಲ್ಲಿ ಫೇವರ್ ಫಿನಿಶ್ ಡಾಮರೀಕರಣ, ರೂ. 15 ಲಕ್ಷ ವಚ್ಚದಲ್ಲಿ ವಿಷ್ಣುಮೂರ್ತಿ ದೇವಸ್ಥಾನದಿಂದ ಬೆನಕ ಜನರಲ್ ಸ್ಟೋರಿನವರೆಗೆ ರಸ್ತೆ ಕಾಂಕ್ರೀಟಿಕರಣ, ರೂ. 15 ಲಕ್ಷ ವೆಚ್ಚದಲ್ಲಿ ಶಿವಾಜಿ ನಗರದಿಂದ ಶಾಂತಿಬಾಗ್ ರಸ್ತೆ ಅಭಿವೃದ್ಧಿ, ನಡಾರ್ ಎಂಬಲ್ಲಿ 13.23 ಲಕ್ಷ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ, ರೂ. 26.58 ಲಕ್ಷ ವೆಚ್ಚದಲ್ಲಿ ಪನೀರು ರಸ್ತೆಯ ಕೋಮರಂಗಳ ಎಂಬಲ್ಲಿ ಮಳೆ ನೀರು ಚರಂಡಿ ಅಭಿವೃದ್ಧಿ, ರೂ. 20 ಲಕ್ಷ ವೆಚ್ಚದಲ್ಲಿ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾರುಕಟ್ಟೆ ನಿರ್ಮಾಣ, 15.67 ಲಕ್ಷ ವೆಚ್ಚದಲ್ಲಿ ಪಾಕ್ ್ ನಿರ್ಮಾಣ, ರೂ. 10 ಲಕ್ಷ ವೆಚ್ಚದಲ್ಲಿ ವಿವಿದೆಡೆ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಾಣ, ರೂ. 7.50 ಲಕ್ಷ ವೆಚ್ಚದಲ್ಲಿ 10 ಕಡೆಗಳಲ್ಲಿ ರಿಕ್ಷಾ ನಿಲ್ದಾಣ ನಿರ್ಮಾಣಕ್ಕೆ ಕ್ರಿಯಾ ಯೋಜನೆ ರಚಿಸಲಾಯಿತು.
ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯ ಹಲವು ಅಂಗಡಿಗಳಲ್ಲಿ ಪ್ಲಾಸ್ಟಿಕ್ ಚೀಲಗಳ ಬಳಕೆ ಮಾಡುತ್ತಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಕಾರ್ಯಾಚರಣೆ ನಡೆಸಲಾಗುವುದು. 2017-18ನೇ ಸಾಲಿನಲ್ಲಿ ನೀರಿನ ಸಮಸ್ಯೆಗೆ ಹೆಚ್ಚಿನ ಒತ್ತನ್ನು ನೀಡುವ ನಿಟ್ಟಿನಲ್ಲಿ ಗ್ರಾಮದ ಕೆಲವು ಭಾಗಗಳಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣದ ಯೋಜನೆ ರೂಪಿಸಲಾಗಿದೆ ಎಂದು ಬಜೆಟಿನಲ್ಲಿ ತಿಳಿಸಲಾಯಿತು.
ಮುಖ್ಯಾಧಿಕಾರಿ ಪೂರ್ಣಕಲಾ, ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಸೊಳ್ಳೆಂಜೀರು, ಉಪಾಧ್ಯಕ್ಷ ಅನಿಲ್ ಬಗಂಬಿಲ, ಸ್ಥಾಯಿ ಸಮಿತಿ ಅಧ್ಯಕ್ಷೆ ಭಾರತೀ ರಾಘವ ಭಾಗವಹಿಸಿದ್ದರು.