ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಕೊಣಾಜೆ:ವಿದ್ಯಾರ್ಥಿಗಳು ಜೀವನದಲ್ಲೇ ಉತ್ತಮ ಉದ್ದೇಶದ ಮೂಲಕ ಕಾರ್ಯಪ್ರವೃತ್ತರಾಗಿ ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳುವ ಮೂಲಕ ಸವಾಲುಗಳನ್ನು ಎದುರಿಸುವ ಗುಣಗಳನ್ನು ಬೆಳೆಸುವುದರಿಂದ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಅದಾನಿ ಉಡುಪಿ ಪವರ್ ಕಾರ್ಪೋರೇಶನ್ ಲಿಮಿಟೆಡ್‍ನ ಕಾರ್ಯಕಾರಿ ನಿರ್ದೇಶಕ ಕಿಶೋರ್ ಆಳ್ವ ತಿಳಿಸಿದರು.
ಆಧುನಿಕ ಸ್ಮಧ್ಮಾತ್ಮಕ ಯುಗದಲ್ಲಿ ತಂತ್ರಜ್ಞಾನ ಸೇರಿದಂತೆ ವಾಣಿಜ್ಯ ವ್ಯವಹಾರವು ಕ್ಷೇತ್ರವೂ ಬದಲಾವಣೆಯನ್ನು ಕಾಣುತ್ತಿತ್ತು ಹಲವಾರು ಸವಾಲುಗಳು ಎದುರಾಗುತ್ತಿವೆ. ಇಂತಹ ಆಧುನಿಕ ಸವಾಲುಗಳನ್ನು ಎದುರಿಸಿ ಮುನ್ನಡೆಸುವಲ್ಲಿ ಯುವಜನರ ಪಾತ್ರ, ಜವಾಬ್ಧಾರಿ ಮಹತ್ತರವಾಗಿದೆ. ದೇಶದ ಸುಸ್ಥಿರ ಅಭಿವೃದ್ಧಿಯಲ್ಲಿ ವಾಣಿಜ್ಯ ಮತ್ತು ವ್ಯವಹಾರ ಕ್ಷೇತ್ರವು ಪ್ರಮುಖವಾಗಿ ಗುರುತಿಸಲ್ಪಡುತ್ತದೆ. ನಾವು ವಿದ್ಯಾರ್ಥಿ ಜೀವನದಲ್ಲೇ ಉತ್ತಮ ಉದ್ದೇಶದ ಮೂಲಕ ಕಾರ್ಯಪ್ರವೃತರಾಗಿ ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿವಿ ಕುಲಪತಿ ಪ್ರೊ.ಕೆ.ಭೈರಪ್ಪ ಅವರು, ವ್ಯಾಪಾರ, ವಾಣಿಜ್ಯ ವ್ಯವಹಾರ ಕೇತ್ರದಲ್ಲಿ ಭಾರತದ ಪ್ರಭಾವ ಪರಿಣಾಮಕಾರಿಯಾದುದು. ಸುಮಾರು 15 ನೇ ಶತಮಾನದ ವರೆಗೂ ಭಾರತದ ವಾಣಿಜ್ಯ ವ್ಯವಹಾರಗಳು, ಆರ್ಥಿಕತೆಯು ಸದೃಡವಾಗಿತ್ತು, ಬಳಿಕ ಮೊಘಲರು, ಬ್ರಿಟೀಷರ ಮುಂತಾದವರ ಪ್ರಭಾವದಿಂದ ಇದು ಬದಲಾವಣೆಯನ್ನು ಕಂಡುಕೊಂಡಿತು. ಪ್ರಸ್ತುತ ಆಧುನಿಕ ಕಾಲ ಘಟ್ಟದಲ್ಲಿ ನೂತನ ತಂತ್ರಜ್ಞಾನಗಳ ಪ್ರಭಾವದಿಂದ ವಾಣಿಜ್ಯ ವ್ಯವಹಾರ, ಆರ್ಥಿಕತೆಯ ಕ್ಷೇತ್ರವು ಹೊಸತನವನ್ನು ಕಾಣುತ್ತಿದೆ. ಆದ್ದರಿಂದ ಯುವ ಸಮುದಾಯವು ಮಾನವೀಯ ಮೌಲ್ಯಗಳನ್ನು ಕಾಪಾಡಿಕೊಳ್ಳುವುದರೊಂದಿಗೆ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಕಾರಣಕರ್ತರಾಗಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಿ.ವಿ.ರಾಮನ್ ಶತಮಾನೋತ್ಸವ ಅವಾರ್ಡ್ ಪಡೆದ ಕುಲಪತಿ ಪ್ರೊ.ಕೆ.ಭೈರಪ್ಪ ಅವರನ್ನು ವಾಣಿಜ್ಯ ವಿಭಾಗದ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾರದಾ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ , ಕಾರಸ್ಟ್ರೀಟ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ರಾಜಶೇಖರ್ ಹೆಬ್ಬಾರ್ ಭಾಗವಹಿಸಿದ್ದರು.
ವೇದಿಕೆಯಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಸಂಘದ ಅನುಪ್, ಸಹನ್ ಶೆಟ್ಟಿ, ಸುಪ್ರಿತಾ ಮೊದಲಾದವರು ಭಾಗವಹಿಸಿದ್ದರು. ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಪ್ರೊ.ಮುನಿರಾಜು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಕ್ಷಿತಾ ಶೆಟ್ಟಿ ವಂದಿಸಿದರು. ರೋಶನಿ ಕಾರ್ಯಕ್ರಮ ನಿರೂಪಿಸಿದರು.