ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಕೈರಂಗಳ: ಕಿಂಡಿ ಅಣೆಕಟ್ಟು ನಿರ್ಮಾಣದಿಂದ ಬರಡು ಭೂಮಿಯಲ್ಲಿ ಫಲವತ್ತತೆ ಬರಲು ಸಾಧ್ಯವಿದ್ದು, ಇದಕ್ಕಾಗಿ ಶ್ರಮಿಸಿದ ಪಂಚಾಯತ್ ಸದಸ್ಯರ ಹಾಗೂ ಸಹಕರಿಸಿದ ಸಚಿವರ ಕಾರ್ಯ ಶ್ಲಾಘನೀಯ ಎಂದು ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ್ ಕರ್ಕೇರ ಹೇಳಿದ್ದಾರೆ.ಅವರು ಕೈರಂಗಳ ಗ್ರಾಮದ ಎರ್ಮಾಡಿ ಬಳಿ ರೂ. 50 ಲಕ್ಷ ಅನುದಾನದಲ್ಲಿ ನಿರ್ಮಾಣವಾಗಲಿರುವ ಕಿಂಡಿ ಅಣೆಕಟ್ಟಿಗೆ ಬುಧವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಕಿಂಡಿ ಅಣೆಕಟ್ಟು ನಿರ್ಮಾಣದಿಂದ ಎರ್ಮಾಡಿ, ಕೊಳ್ಳರಮಜಲು, ಬೇರೂರು ಪ್ರದೇಶದ ರೈತರಿಗೆ ಅನುಕೂಲವಾಗಲಿದೆ. ಈ ಭಾಗದ ಕೃಷಿಕರಿಗೆ ಸಹಕಾರ ಆಗುವ ರೀತಿಯಲ್ಲಿ ಸ್ಥಳೀಯ ಜಿ.ಪಂ ಸದಸ್ಯೆ, ತಾ.ಪಂ ಹಾಗೂ ಪಂ. ಸದಸ್ಯರ ಮನವಿಗೆ ಸ್ಪಂಧಿಸಿದ ಸಚಿವರು ಮಹತ್ತರ ಯೋಜನೆಗೆ ಅನುದಾನ ಒದಗಿಸಿರುವುದು ಭಾಗದ ರೈತರಿಗೆ ಸಂತಸದ ವಿಚಾರ. ಇದರ ಸದುಪಯೋಗದಿಂದ ಸ್ಥಳದಲ್ಲಿ ಉತ್ತಮವಾದ ಬೆಳೆ ಬೆಳೆಯಲಿ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ.ಡಿ.ಎಸ್.ಗಟ್ಟಿ ಮಾತನಾಡಿ ಕಿಂಡಿಅಣೆಕಟ್ಟು ನಿರ್ಮಾಣದಿಂದ ಪಾಳುಬಿದ್ದ ಕೃಷಿಭೂಮಿಗೆ ಫಲವತ್ತತೆ ಬರಲಿದೆ. ರೈತರಿಗೆ ಕೃಷಿ ಫಲಪ್ರದವಾಗಿ ಬೆಳೆಯಲು ಕಿಂಡಿಅಣೆಕಟ್ಟು ಸಹಕಾರಿಯಾಗಲಿ ಎಂದರು.
ಲಕ್ಷ ಹಣ ವ್ಯಯಿಸುತ್ತಿದ್ದೆವು: ಸ್ಥಳೀಯ ಕೃಷಿಕ ಹಾಗೂ ಜೆಡಿಎಸ್ ಮುಖಂಡ ಹೈದರ್ ಪರ್ತಿಪ್ಪಾಡಿ ಮಾತನಾಡಿ ಸ್ಥಳದಲ್ಲಿ ಮಣ್ಣಿನ ಕಟ್ಟ ಕಟ್ಟಿ ರೈತರು ನೀರು ಉಳಿಸುವ ಪ್ರಯತ್ನ ಹಲವು ವರ್ಷಗಳಿಂದ ಮಾಡುತ್ತಿದ್ದರು. ಮಣ್ಣಿಗಾಗಿಯೇ ಲಕ್ಷಾಂತರ ಹಣ ವ್ಯಯಿಸಬೇಕಿತ್ತು. ಶಾಶ್ವತ ಅಣೆಕಟ್ಟು ನಿರ್ಮಾಣ ಎಲ್ಲರ ಬೇಡಿಕೆಯಾಗಿತ್ತು. ಇದೀಗ ಸಚಿವರ ಕಾರ್ಯದಿಂದ ಎಲ್ಲರ ಪ್ರಯತ್ನಕ್ಕೆ ಸಫಲತೆ ದೊರೆತಿದೆ. ಅದರಂತೆ ಸ್ಥಳಕ್ಕೆ ರಸ್ತೆಯ ವ್ಯವಸ್ಥೆಯನ್ನು ಕಲ್ಪಿಸುವ ಬೇಡಿಕೆಯನ್ನು ಮುಂದಿಟ್ಟರು.
ಈ ಸಂದರ್ಭ ಮುಡಿಪು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಅಬ್ದುಲ್ ಜಲೀಲ್, ತಾ.ಪಂ ಸದಸ್ಯ ಹೈದರ್ ಕೈರಂಗಳ, ಕೈರಂಗಳ ಪಂಚಾಯತ್ ಸದಸ್ಯರಾದ ಅಬ್ದುಲ್ ನಾಸೀರ್ ನಡುಪದವು, ಶರೀಫ್, ಜನಾರ್ದನ್ ಕುಲಾಲ್, ಲಿಡಿಯಾ, ಅನಿತಾ, ಮಾಜಿ ಗ್ರಾ.ಪಂ ಅಧ್ಯಕ್ಷೆ ನಯನ ಮಾಣೈ ಉಪಸ್ಥಿತರಿದ್ದರು.