ಉಳ್ಳಾಲ ನ್ಯೂಸ್ ನೆಟ್‍ವರ್ಕ್
ಹಳೆಕೋಟೆ : ರಾಜ್ಯದಲ್ಲಿ ಇಂದು ಮಾತೃಭಾಷಾ ಶಿಕ್ಷಣ ಸಂಸ್ಥೆ ಅದರಲ್ಲೂ ಕನ್ನಡ ಮಾಧ್ಯಮ ಶಾಲೆಗಳು ಅಳಿವಿನಂಚಿನಲ್ಲಿದೆ. ಆಂಗ್ಲ ಭಾಷಾ ವ್ಯಾಮೋಹದಿಂದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಈ ಕನ್ನಡ ಮಾಧ್ಯಮ ಶಾಲೆಯನ್ನು ಉಳಿಸಿ ಬಡ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದೇ ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ನ ಪ್ರಥಮ ಆದ್ಯತೆ ಎಂದು ಉಳ್ಳಾಲ ಕೇಂದ್ರ ಜಮಾಅತ್ ನ ಅಧ್ಯಕ್ಷರಾದ ಅಬ್ದುಲ್ ರಶೀದ್ ರವರು ಹೇಳಿದರು.
ಅವರು ಟ್ರಸ್ಟ್ ವತಿಯಿಂದ ಹಳೆಕೋಟೆಯಲ್ಲಿ ನಡೆಸಲ್ಪಡುವ ಸಯ್ಯಿದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಗೆ ಸಾಧಾರಣ 16 ಲಕ್ಷ ರೂಪಾಯಿ ಮೊತ್ತದ ಹೊಸ ಬಸ್ಸನ್ನು ಉಚಿತವಾಗಿ ನೀಡುತ್ತಾ ಕನ್ನಡ ಮಾಧ್ಯಮ ಶಾಲೆಗಳಿಗೂ ಆಕರ್ಷಣೆಯಿಂದ ವಿದ್ಯಾರ್ಥಿಗಳು ಬರಬೇಕು.
ಈ ಶಾಲೆಗೆ ದೂರ ಪ್ರದೇಶಗಳಿಂದ ಬರುವ ಮಕ್ಕಳು ಉಚಿತವಾಗಿ ಬರಬೇಕು ಎಂಬ ಉದ್ದೇಶದಿಂದ ಟ್ರಸ್ಟ್ ವತಿಯಿಂದ ಬಸ್ ಒದಗಿಸಲಾಗಿದೆ ಎಂದರು. ಸಯ್ಯಿದ್ ಮದನಿ ಚಾರಿಟೇಬಲ್ ಟ್ರಸ್ಟ್ ಇದು ಈ ವಿದ್ಯಾ ಸಂಸ್ಥೆಗೆ 2ನೇ ಬಸ್ ನೀಡುತ್ತಿದೆ ಇದರಿಂದಾಗಿ ದೂರದ ಮಂಜನಾಡಿ, ಉರುಮಣೆ, ದೇರಳಕಟ್ಟೆ, ದಾರಂದಬಾಗಿಲು ಮೊದಲಾದ ಕಡೆಗಳಿಂದ ವಿದ್ಯಾರ್ಥಿಗಳು ಬರುತ್ತಿರುವರು ಎಂದು ಶಾಲಾ ಮುಖ್ಯ ಶಿಕ್ಷಕ ಕೆ.ಎಂ.ಕೆ.ಮಂಜನಾಡಿ ಹೇಳಿದರು.
ಈ ಸಂದರ್ಭದಲ್ಲಿ ಕೇಂದ್ರ ಜುಮಾ ಮಸ್ಜಿದ್ ನ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತ್ವಾಹಾ, ಚಾರಿಟೇಬಲ್ ಟ್ರಸ್ಟ್ ನ ಉಪಾಧ್ಯಕ್ಷ ಮುಸ್ತಫಾ ಅಬ್ದುಲ್ಲಾ, ಇಬ್ರಾಹಿಂ ಕಕ್ಕೆತೋಟ, ಟ್ರಸ್ಟ್ ಕೋಶಾಧಿಕಾರಿಯಾದ ಹಮೀದ್ ಕಲ್ಲಾಪು, ಅರೆಬಿಕ್ ಟ್ರಸ್ಟ್ ನ ಉಪಾಧ್ಯಕ್ಷ ಹಾಜಿ ಯು.ಹೆಚ್.ಮಹಮ್ಮದ್, ಟ್ರಸ್ಟಿಗಳಾಧ ಮುಸ್ತಫಾ ಮಂಚಿಲ, ಯು.ಡಿ.ಇಬ್ರಾಹಿಂ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಇಸ್ಮಾಯಿಲ್ ಬಿಲ್ಡಿಂಗ್ ಕಂಟ್ರಾಕ್ಟರ್, ಅಬ್ದುಲ್ ರಝಾಕ್, ಅಲ್ತಾಫ್ ಯು.ಹೆಚ್, ಆಡಳಿತಾಧಿಕಾರಿ ಅಬ್ದುಲ್ ಲತೀಫ್ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಕೆ.ಎಂ.ಕೆ.ಮಂಜನಾಡಿ ಸ್ವಾಗತಿಸಿದರು.