ಉಳ್ಳಾಲ್‍ನ್ಯೂಸ್ ನೆಟ್‍ವರ್ಕ್
ತೊಕ್ಕೊಟ್ಟು: ರೈಲಿನಡಿಗೆ ತಲೆಕೊಟ್ಟು ಉಪ್ಪಳ ಮೂಲದ ಮಂಗಳೂರಿನಲ್ಲಿ ವಿದ್ಯಾರ್ಥಿಯಾಗಿರುವ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಾನುವಾರ ನಸುಕಿನ ಜಾವ ಸಂಭವಿಸಿದೆ.
ಉಪ್ಪಳ ಬೇಕೂರು ನಿವಾಸಿ ಲೋಕಯ್ಯ ಪೂಜಾರಿ ಎಂಬವರ ಪುತ್ರ ನಿಶಾನ್ ಕುಮಾರ್ .ಬಿ (26) ಆತ್ಮಹತ್ಯೆ ನಡೆಸಿರುವ ವಿದ್ಯಾರ್ಥಿ. ತೊಕ್ಕೊಟ್ಟು ಕೊಲ್ಯ ನಡುವಿನ ಜಾಯ್‍ಲ್ಯಾಂಡ್ ಶಾಲೆ ಎದುರುಗಡೆ ವಿದ್ಯಾರ್ಥಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಗಳೂರು ಕೆಂಜಾರು ಶ್ರೀದೇವಿ ತಾಂತ್ರಿಕ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿರುವ ಈತ ಶನಿವಾರ ಸಂಜೆ ಮನೆಗೆ ಹೋಗದೆ ನಾಪತ್ತೆಯಾಗಿದ್ದನು. ಇದರಿಂದ ಗಾಬರಿಗೊಂಡ ಮನೆಮಂದಿ ಹುಡುಕಾಡಿದರೂ ಶನಿವಾರ ತಡರಾತ್ರಿವರೆಗೂ ಪತ್ತೆಯಾಗಿರಲಿಲ್ಲ. ಭಾನುವಾರ ಬೆಳಿಗ್ಗೆ ನಿಶಾನ್ ಮೃತದೇಹ ಜಾಯ್ ಲ್ಯಾಂಡ್ ರೈಲ್ವೇ ಹಳಿ ಸಮೀಪ ಪತ್ತೆಯಾಗಿತ್ತು. ಈ ಬಗ್ಗೆ ಸ್ಥಳೀಯರು ಮಂಗಳೂರು ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ವಿದ್ಯಾರ್ಥಿ ಕಿಸೆಯಲ್ಲಿ ಡೆತ್ ನೋಟ್ ಪತ್ತೆಯಾಗಿತ್ತು. ` ನನ್ನ ಸಾವಿಗೆ ನಾನೇ ಕಾರಣ’ ಎಂದು ಬರೆದಿಡಲಾಗಿತ್ತು. ಈತನ ಕಿಸೆಯಲ್ಲಿ ಔಷಧಿಗಳ ಚೀಟಿಗಳು, ಮಾತ್ರಗಳು ಲಭ್ಯವಾಗಿದ್ದು, ಅಸೌಖ್ಯದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗದೆ. ರೈಲೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.