Site icon Ullalavani

ಮುಡಿಪು : ಮಾ.27ಕ್ಕೆ ಮಂಚಿ ಮಕ್ಕಳ ಕೊಲಾಜ್ ಚಿತ್ರಕಲಾ ಪ್ರದರ್ಶನ

 

 

ಉಳ್ಳಾಲ್‍ನ್ಯೂಸ್ ನೆಟವರ್ಕ್

ಮುಡಿಪು: ನ್ಯೂಸ್ ಪಾಯಿಂಟ್ ಮುಡಿಪು, ಜನಶಿಕ್ಷಣ ಟ್ರಸ್ಟ್ ಹಾಗೂ ಚಿತ್ತಾರ ಬಳಗ ಮಂಗಳೂರು ಇದರ ಸಹಭಾಗಿತ್ವದಲ್ಲಿ ಮಂಚಿ ಮಕ್ಕಳ ಕೊಲಾಜ್ ಚಿತ್ರಕಲಾ ಪ್ರದರ್ಶನವು ಮಾ. 27 ರಿಂದ ಎಪ್ರಿಲ್ 2ರ ತನಕ ಮುಡಿಪು ಜನಶಿಕ್ಷಣ ಕೇಂದ್ರದಲ್ಲಿ ನಡೆಯಲಿದೆ.

ಬಂಟ್ವಾಳ ತಾಲೂಕಿನ ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು ಇಲ್ಲಿನ 25 ಮಂದಿ ವಿದ್ಯಾರ್ಥಿಗಳು ಚಿತ್ರಕಲಾ ಶಿಕ್ಷಕ ತಾರನಾಥ ಕೈರಂಗಳ್ ಅವರ ಮಾರ್ಗದರ್ಶನದಲ್ಲಿ ರಚಿಸಿದ 25 ಕೊಲಾಜ್ ಕಲಾಕೃತಿಗಳ ಚಿತ್ರಪಯಣ 2016ರ ಜೂನ್ 1 ರಂದು ಮಂಗಳೂರಿನ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ಉದ್ಘಾಟನೆಗೊಂಡಿತ್ತು. ಬಳಿಕ ಬಂಟ್ವಾಳ, ಮಂಗಳೂರು, ಪುತ್ತೂರು, ಸುಳ್ಯ ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಪ್ರದರ್ಶನಗೊಂಡಿದ್ದು ಚಿತ್ರ ಪಯಣದ ಸಂಪನ್ನ ಸಮಾರಂಭವು 27.03.2017 ರಂದು ಮುಡಿಪಿನಲ್ಲಿ ಆಯೋಜಿಸಲಾಗಿದೆ. ಈ ದಿನ ಬೆಳಿಗ್ಗೆ ಗಂಟೆ 10ಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ  ವಾಲ್ಟರ್ ಎಚ್.ಡಿ’ಮೆಲ್ಲೊ ಚಿತ್ರಕಲಾ ಪ್ರದರ್ಶನದ ವೀಕ್ಷಣೆಗೆ ಚಾಲನೆ ನೀಡಲಿದ್ದಾರೆ.

ಚಿತ್ರಪಯಣದ ನೆನಪಿನ ಹೊತ್ತಗೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ     ಹರಿಕೃಷ್ಣ ಪುನರೂರು ಬಿಡುಗಡೆಗೊಳಿಸುವರು. ಮಂಗಳೂರು ಸ್ವರೂಪ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ  ಗೋಪಾಡ್ಕರ್, ನರೇಗಾ ಯೋಜನೆಯ ಮಾಜಿ ಒಂಬುಡ್ಸ್‍ಮನ್ ಶೀನ ಶೆಟ್ಟಿ, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್.ಪಿ, ಮಂಗಳೂರು ಕೋಸ್ಟಲ್ ಹ್ಯಾಚರಿಸ್‍ನ ಜನರಲ್ ಮೇನೇಜರ್  ವೈ.ಬಿ.ಸುಂದರ್ ಇರಾ, ನ್ಯೂಸ್ ಪಾಯಿಂಟ್ ಮುಡಿಪು ಇದರ ಮಾಲಕರಾದ ವೆಂಕಟೇಶ್ ಎಚ್ ಹಾಗೂ ಮಂಚಿ ಕೊಳ್ನಾಡು ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ರಾಮಮೂರ್ತಿಯವರು  ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಮಾರ್ಚ್ 28, 30, 31 ಹಾಗೂ ಎಪ್ರಿಲ್ 1 ರಂದು ಸ್ಥಳೀಯ ಆಹ್ವಾನಿತ ಶಾಲಾ ವಿದ್ಯಾರ್ಥಿಗಳಿಗೆ ಕೊಲಾಜ್ ಚಿತ್ರಕಲಾ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದ್ದು ಪ್ರತಿದಿನ ನಾಲ್ಕರಿಂದ ಐದು ಶಾಲೆಗಳ ಆಸಕ್ತ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಪ್ರತಿದಿನದ ವಿಶೇಷ ಅತಿಥಿಗಳಾಗಿ ಮಂಗಳ ಗಂಗೋತ್ರಿ ಲಯನ್ಸ್ ಕ್ಲಬ್ ಅಧ್ಯಕ್ಷ ರಾಧಾಕೃಷ್ಣ ರೈ ಉಮಿಯ,  ಶಿವಪ್ರಕಾಶ್, ರಮೇಶ್ ಶೇನವ ಹಾಗೂ ಮುಡಿಪು ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಅಬ್ದುಲ್ ಜಲೀಲ್ ಮೊಂಟುಗೋಳಿ ಪಾಲ್ಗೊಳ್ಳಲಿದ್ದಾರೆ. ವಿದ್ಯಾರ್ಥಿಗಳು, ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕಾರ್ಯಕ್ರಮದ ಸಂಘಟಕರಾದ ತಾರನಾಥ್ ಕೈರಂಗಳ್, ಸತೀಶ್ ಇರಾ ಹಾಗೂ ಕೃಷ್ಣಮೂಲ್ಯ ಅವರು ವಿನಂತಿಸಿದ್ದಾರೆ.

Exit mobile version