Site icon Ullalavani

ಕ್ಷಯ ರೋಗ ಮುಕ್ತ ಸಮಾಜಕ್ಕೆ ಖಾಸಗಿ ಸಂಸ್ಥೆಗಳ ಬೆಂಬಲ ಅಗತ್ಯ : ಡಾ| ರಾಮಕೃಷ್ಣ ರಾವ್

ಉಳ್ಳಾಲ ನ್ಯೂಸ್ ನೆಟ್‍ವರ್ಕ್

ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ಷಯರೋಗ ನಿರ್ಮೂಲನೆಗೆ ಸಂಬಂಧಿಸಿದ ಅಭಿಯಾನ ಪ್ರಾರಂಭಗೊಂಡ ಬಳಿಕ ಕ್ಷಯರೋಗ ಪೀಡಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಕ್ಷಯ ರೋಗ ಮುಕ್ತ ಸಮಾಜ ನಿರ್ಮಾಣಕ್ಕೆ ಸರಕಾರದೊಂದಿಗೆ ಖಾಸಾಗಿ ವೈದ್ಯಕೀಯ ಸಂಸ್ಥೆಗಳು ಸಂಘಟನೆಗಳ ಬೆಂಬಲ ಅಗತ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ರಾಮಕೃಷ್ಣ ರಾವ್ ಅಭಿಪ್ರಾಯಪಟ್ಟರು.

ಅವರು ನಾಟೆಕಲ್‍ನ ಕಣಚೂರು ಆಸ್ಪತ್ರೆ ಆಡಿಟೋರಿಯಂನಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ , ಜಿಲ್ಲಾ ಆರೋಗ್ಯ ಮತ್ತು ಕಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಕ್ಷಯ ಚಿಕಿತ್ಸಾ ಕೇಂದ್ರ ದ.ಕ.ಜಿಲ್ಲಾ ಕ್ಷಯರೋಗ ನಿವಾರಣಾ ಸಂಘ ಹಾಗೂ ಕಣಚೂರು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ನಾಟೆಕಲ್ ಮಂಗಳೂರು ಇದರ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಕ್ಷಯ ರೋಗ ದಿನಾಚರಣೆ -2017 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮನುಷ್ಯನ ರೋಗ ನಿರೋಧಕ ಶಕ್ತಿಗಳು ಕಡಿಮೆಯಾದಾಗ ಕ್ಷಯ ರೋಗದಂತಹ ಸಮಸ್ಯೆಗಳು ಬರುತ್ತಿದ್ದು, ಮುಖ್ಯವಾಗಿ ಇಂತಹ ಜನರನ್ನು ಗುರುತಿಸಿ ಚಿಕಿತ್ಸೆ ನೀಡುವ ಅಗತ್ಯವಿದೆ. ದ.ಕ.ಜಿಲ್ಲೆಯಲ್ಲಿ ಹತ್ತು ವರ್ಷದ ಮೊದಲು ಸುಮಾರು 2200 ಕ್ಷಯ ರೋಗದ ಪ್ರಕರಣ ದಾಖಲಾಗಿತ್ತು. ಕ್ಷಯ ರೋಗ ನಿರ್ಮೂಲನೆಗೆ ಸಂಬಂಧಿಸಿದಂತೆ ಜಾಗೃತಿ ಅಭಿಯಾನದ ಬಳಿಕ ಸುಮಾರು 700ಕ್ಕೂ ಹೆಚ್ಚು ಪ್ರಕರಣಗಳು ಕಡಿಮೆಯಾಗಿದ್ದು, ಜಿಲ್ಲೆಯಲ್ಲಿ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗೆ ಸಂಬಂಧಿಸಿದಂತೆ ಕ್ಷಯ ರೋಗದ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಯು. ಕಣಚೂರು ಮೋನು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಅಬ್ದುಲ್ ರಹೆಮಾನ್, ಕಣಚೂರು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ| ಎಚ್.ಎಸ್. ವಿರೂಪಾಕ್ಷ, ವೈದ್ಯಕೀಯ ಅಧೀಕ್ಷಕ ಡಾ| ದೇವಿ ಪ್ರಸಾದ್ ಶೆಟ್ಟಿ, ಫಾರೆನ್ಸಿಕ್ ವಿಭಾಗ ಮುಖ್ಯಸ್ಥ ಡಾ| ಶನವಾಝ್, ಮೈಕ್ರೋ ಬಯಾಲಾಜಿ ವಿಭಾಗ ಮುಖ್ಯಸ್ಥ ಯಶವಂತ ರೈ, ಆಡಳಿತಾಧಿಕಾರಿ ಡಾ| ರೋಹನ್ ಮೋನಿಸ್, ಪೆಥಾಲಾಜಿ ವಿಭಾಗದ ಮುಖ್ಯಸ್ಥ ಡಾ| ಶ್ರೀಶ ಖಂಡಿಗೆ ಉಪಸ್ಥಿತರಿದ್ದರು.

ಫಾಮುಲ್ಲರ್ಸ್ ವೈದ್ಯಕೀಯ ಕಾಲೇಜಿನ ಕಮ್ಯುನಿಟಿ ಮೆಡಿಸಿನ್ ವಿಭಾಗದ ಪ್ರಾಧ್ಯಾಪಕ ಡಾ| ನಾರಾಯಣ ಕೆ.ವಿ. ಮತ್ತು ಕಣಚೂರು ವೈದ್ಯಕೀಯ ಕಾಲೇಜಿನ ಟಿಬಿ ಮತ್ತು ಚೆಸ್ಟ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ರವೀಂದ್ರನ್ ಉಪನ್ಯಾಸ ನೀಡಿದರು.

ಜಿಲ್ಲಾ ಕ್ಷಯ ಚಿಕಿತ್ಸಾ ಕೇಂದ್ರದ ಜಿಲ್ಲಾ ಕ್ಷಯ ನಿಯಂತ್ರಣಾಧಿಕಾರಿ ಡಾ| ಬದ್ರುದ್ಧೀನ್ ಎಮ್.ಎನ್.ಸ್ವಾಗತಿಸಿದರು. ರಶ್ಮಿ ಮತ್ತು ಜಯರಾಮ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ಮೈಕ್ರೋ ಬಯಾಲಾಜಿ ಸಹ ಪ್ರಾಧ್ಯಾಪಕಿ ಡಾ| ಶ್ರೀವಿದ್ಯಾ ವಂದಿಸಿದರು.

 

Exit mobile version