Site icon Ullalavani

ನಾಪತ್ತೆಯಾದ ಯುವತಿ ಹಳಿಯಾಳದಲ್ಲಿ ಪತ್ತೆ

ಉಳ್ಳಾಲ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ಇಲ್ಲಿನ ಕೈಕೋ ಮೀನಿನ ಕಾರ್ಖಾನೆಗೆ ಕೆಲಸಕ್ಕೆಂದು ಬಂದಿದ್ದ ಉತ್ತರಕನ್ನಡ ಹಳಿಯಾಳ ಮೂಲದ ಬಾಬು ಚಿಮನು ಬಾಜಾರಿ ಅವರ ಪುತ್ರಿ ದೊಂಡಿಬಾಯಿ ಚಿಮನು ಬಾಜಾರಿ(20) ಮತ್ತು ಆಕೆಯನ್ನು ಕೆಲಸಕ್ಕೆ ಸೇರಿಸಿದ ಯಲ್ಲಾಪುರದ ಸುನಿತಾ ದುಳು ಬಿಚ್ಚಕಲೆ ಎಂಬವರು ಹಳಿಯಾಳ ಪೊಲೀಸ್ ಠಾಣೆಗೆ ಸೋಮವಾರ ತೆರಳಿ ರಕ್ಷಣೆ ನೀಡುವಂತೆ ಕೋರಿದ್ದಾರೆ.

ಉಳ್ಳಾಲದಲ್ಲಿ ಕೆಲಸ ಮಾಡುತ್ತಿದ್ದ ದೊಂಡಿ ಬಾಯಿ ಹೋಳಿಗೆ ಊರಿಗೆ ಬರುವವಳಿದ್ದಳು. ಅದರೆ ಈಕೆ ಹೋಳಿ ಹಬ್ಬಕ್ಕೆ ಬಾರದೆ ಇದ್ದಾಗ ಮನೆಯವರು ದೂರವಾಣಿ ಕರೆ ಮಾಡಿದ್ದು, ದೂರವಾಣಿ ಕರೆ ಸ್ವೀಕರಿಸಿರಲಿಲ್ಲ. ಬಳಿಕ ಕೆಲಸಕ್ಕೆ ಕರೆದುಕೊಂಡು ಹೋಗಿದ್ದ ಸುನಿತಾಳಿಗೆ ಕರೆ ಮಾಡಿದಾಗ ಅಕೆಯೂ ಕರೆ ಸ್ವೀಕರಿಸದೇ ಇದ್ದಾಗ ಮನೆಯವರಿಗೆ ಅತಂಕ ಉಂಟಾಗಿತ್ತು. ಇದರಿಂದ ಅತಂಕಿತರಾದ ಈಕೆಯ ಸಂಬಂಧಿಕರು ಉಳ್ಳಾಲದಲ್ಲಿ ಈಕೆಯ ಹುಡುಕಾಟದಲ್ಲಿ ತೊಡಗಿದ್ದು, ಶುಕ್ರವಾರ ಬೆಳಿಗ್ಗೆ ಉಳ್ಳಾಲ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ. ಅಲ್ಲದೆ ಯುವತಿ ಮಾರಾಟ ನಡೆದಿರುವ ಆರೋಪಗಳು ರಾಜ್ಯಾದ್ಯಂತ ಪ್ರಚಾರ ಪಡೆಯುತ್ತಿದ್ದಂತೆ ಎಚ್ಚೆತ್ತುಕೊಂಡ ಉಳ್ಳಾಲ ಪೊಲೀಸರು ಇಬ್ಬರ ಟವರ್ ಲೊಕೇಷನ್ ಪರಿಶೀಲಿಸಿದಾಗ ಕೋಟೆಕಾರು ಮಾಡೂರಿನ ಕಡೆ ಮಾಹಿತಿ ನೀಡಿತ್ತು.

ಅಲ್ಲಿ ಪೊಲೀಸರು ಸಂಜೆ ವೇಳೆ ತೆರಳಿದ್ದಾಗ ಬಾಡಿಗೆ ಮನೆಯಲ್ಲಿ ಸಾಮಗ್ರಿಗಳೆಲ್ಲವೂ ಇದ್ದು, ಇಬ್ಬರು ಸಂಜೆಯೇ ಹೊರಟಿದ್ದರೆಂದು ಮನೆ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಆನಂತರ ಉಡುಪಿ, ಗೋವಾ ದಲ್ಲಿ ಟವರ್ ಲೊಕೇಷನ್ ತೋರಿಸಿತ್ತು. ಸೋಮವಾರ ಬೆಳಿಗ್ಗೆ ಇಬ್ಬರು ಹಳಿಯಾಳ ಪೊಲೀಸ್ ಠಾಣೆಗೆ ತೆರಳಿ ರಕ್ಷಣೆ ನೀಡುವಂತೆ ಕೋರಿದ್ದಾರೆ. ಸ್ವಯಂ ಪ್ರೇರಿತವಾಗಿ ಬಾಡಿಗೆ ಮನೆಯಲ್ಲಿ ಇಬ್ಬರಿದ್ದು, ಮಾಧ್ಯಮಗಳಲ್ಲಿ ನಾಪತ್ತೆಯಾಗಿರುವ ಸುದ್ಧಿ ಪ್ರಚಾರ ಪಡೆಯುತ್ತಿದ್ದಂತೆ ಗಾಬರಿಗೊಂಡು ಊರು ಬಿಟ್ಟಿರುವುದಾಗಿ ತಿಳಿಸಿದ್ದಾರೆ.

ಮುಂಜಾಗ್ರತಾ ಸಭೆ: ಹಳಿಯಾಳದಲ್ಲಿ ಮಾ.25 ರಂದು ಸಾರ್ವಜನಿಕ ಸಭೆಯನ್ನು ಕರೆಯಲಾಗಿದೆ. ಊರಿನ ಯಾವುದೇ ಯುವತಿಯರನ್ನು ಹೊರಗಡೆ ಕೆಲಸಕ್ಕೆ ಕರೆದೊಯ್ದಲ್ಲಿ ತಾಲೂಕಿನಲ್ಲಿ ನೋಂದಾಯಿಸಿಯೇ ಕರೆದುಕೊಂಡು ಹೋಗಬೇಕೆಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳುವುದಾಗಿ ಸಮಾಜಸೇವಕ ಸ್ಯಾಮುವೆಲ್ ತಿಳಿಸಿದ್ದಾರೆ.

Exit mobile version