ಉಳ್ಳಾಲ ನ್ಯೂಸ್ ನೆಟ್ ವರ್ಕ್
ಇಸ್ಲಾಮಾಬಾದ್: ಭಾರತ ದೇಶದಲ್ಲಿರುವ ಹಿಂದೂ ವಿವಾಹ ಮಸೂದೆಯಂತೆ ಇನ್ನು ಮುಂದೆ ಪಾಕಿಸ್ತಾನದಲ್ಲೂ ಹಿಂದೂಗಳ ವಿವಾಹಕ್ಕೆ ಕಾನೂನಿನಲ್ಲಿ ಮಾನ್ಯತೆಯನ್ನು ನೀಡುವ ನಿಟ್ಟಿನಲ್ಲಿ ಐತಿಹಾಸಿಕ ಹಿಂದೂ ವಿವಾಹ ಮಸೂದೆ-2017ಕ್ಕೆ ಅಧ್ಯಕ್ಷ ಮಮ್ನೂನ್ ಹುಸೇನ್ ಅವರು ಅಂಕಿತ ಹಾಕಿದ್ದು, ಕಾಯ್ದೆಯಾಗಿ ಸೋಮವಾರ ಜಾರಿಯಾಗಿದೆ.
ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ಅವರ ಸಲಹೆಯ ಮೇರೆಗೆ ಅಧ್ಯಕ್ಷರು ಮಸೂದೆಗೆ ಅಂಕಿತ ಹಾಕಿದ್ದಾರೆಂದು ಪಾಕಿಸ್ತಾನ ಪ್ರಧಾನಮಂತ್ರಿಗಳ ಕಚೇರಿ ತಿಳಿಸಿದೆ.
ಜಾರಿಯಾಗಿರುವ ಕಾಯ್ದೆ ಹಿಂದೂಗಳ ಕುಟುಂಬಕ್ಕೆ ಕಾನೂನಾತ್ಮಕ ಅಧಿಕಾರ ನೀಡುವುದರ ಜೊತೆಗೆ, ತಾಯಂದಿರು ಮತ್ತು ಮಕ್ಕಳಿಗೆ ರಕ್ಷಣೆ ಒದಗಿಸಲಿದೆ. ಇದರಂತೆ ಹಿಂದೂಗಳು ತಮ್ಮ ಸಂಪ್ರದಾಯದಂತೆ ವಿವಾಹ ಆಗಬಹುದಾಗಿದೆ. ವಿವಾಹ ನೋಂದಣಿಗೆ ಸರ್ಕಾರ ರೆಜಿಸ್ಟ್ರಾರ್ ಗಳನ್ನು ನೇಮಿಸಲಿದೆ. ಅಲ್ಲದೆ, ಮರುವಿವಾಹ ಮತ್ತು ವಿಚ್ಛೇದನಕ್ಕೂ ಅವಕಾಶವನ್ನು ಕಲ್ಪಿಸಿದೆ.