ಉಳ್ಳಾಲ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ಪ್ರಧಾನಿ ಮೋದಿ ವಿಮಾನದಲ್ಲಿ ಹಾರಾಡಿ ಉತ್ಕøಷ್ಟ ಆಹಾರ ತಿನ್ನುವುದರಲ್ಲೇ ನಿರತರಾಗಿದ್ದಾರೆ. ಇಲ್ಲಿ ಬಡ ಜನತೆ ಊಟವಿಲ್ಲದೆ ಉಪವಾಸ ಸತ್ತರೂ, ಅವರು ಕಾರ್ಪೊರೇಟ್ ಸಂಸ್ಥೆಗಳ ಏಳಿಗೆಗಾಗಿ ಮಾತ್ರ ದುಡಿಯುತ್ತಿದ್ದಾರೆ ಎಂದು ಎಸ್‍ಡಿಪಿಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಹೇಳಿದ್ದಾರೆ.
ಅವರು ಕೇಂದ್ರ ಸರಕಾರದ ಜನವಿರೋಧಿ ಮತ್ತು ಬೆಲೆ ಏರಿಕೆಯ ವಿರುದ್ಧ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಗುರುವಾರ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಕಡಿಮೆಯಾದರೂ ದೇಶದಲ್ಲಿ ಕಡಿಮೆಯಾಗಿಲ್ಲ. ಬಡಜನರನ್ನು ಮೋಸಗೊಳಿಸುವ ಮತ್ತು ಅವರನ್ನು ದೇಶದಿಂದ ಓಡಿಸುವ ಕೆಲಸ ಮೋದಿ ಸರಕಾರದಿಂದ ಆಗುತ್ತಿದೆ. ಅಂಬಾನಿ, ಅಧಾನಿ, ಬಿಜೆಪಿ ಶಾಸಕರು, ಸಚಿವರಿಗೆ ಮಾತ್ರ ಒಳ್ಳೆಯ ದಿನಗಳು ಆರಂಭವಾಗಿದೆ. ಮುಖಕ್ಕೆ ಮಸಿ ಬಳಿಯುವ ಸಿದ್ಧಾಂತ ಹೊಂದಿರುವ ಸರಕಾರಕ್ಕೆ, ಬಿಸಾಡಿದ ಮಸಿಯನ್ನು ಬಳಸಿಕೊಂಡೇ ಪ್ರತಿಭಟನೆ ನಡೆಸುವ ಶಕ್ತಿ ಎಸ್‍ಡಿಪಿಐ ನಲ್ಲಿದೆ ಎಂದು ತೋರಿಸಿಕೊಡುವುದಾಗಿ ತಿಳಿಸಿದರು.
ಈ ಸಂದರ್ಭ ಮಂಗಳೂರು ವಿಧಾನ ಸಭಾ ಕ್ಷೇತ್ರದ ಎಸ್‍ಡಿಪಿಐ ಅಧ್ಯಕ್ಷ ಅಬ್ಬಾಸ್ ಕಿನ್ಯ, ಮಂಗಳೂರು ವಿಧಾನ ಸಭಾ ಕ್ಷೇತ್ರದ ಎಸ್‍ಡಿಪಿಐ ಉಪಾಧ್ಯಕ್ಷ ನೌಶಾದ್ ಕಲ್ಕಟ್ಟ, ಮಂಗಳೂರು ವಿಧಾನ ಸಭಾ ಕ್ಷೇತ್ರದ ಎಸ್‍ಡಿಪಿಐ ಕಾರ್ಯದರ್ಶಿ ಹಾರಿಸ್ ಮಲಾರ್, ಮಂಗಳೂರು ವಿಧಾನ ಸಭಾ ಕ್ಷೇತ್ರದ ಎಸ್‍ಡಿಪಿಐ ಜೊತೆ ಕಾರ್ಯದರ್ಶಿ ಲತೀಫ್ ಕೋಡಿಜಾಲ್, ಕೋಶಾಧಿಕಾರಿ ಎ.ಆರ್.ಅಬ್ಬಾಸ್ ಉಳ್ಳಾಲ, ಝೂಹಿದ್ ಮಲಾರ್, ಸಂಶುದ್ದೀನ್ ಮುಡಿಪು, ಹಸೈನಾರ್ ಕೊಣಾಜೆ, ಫಯಾಝ್ ಮಂಜನಾಡಿ, ಅಶ್ರಫ್ ಉಪಸ್ಥಿತರಿದ್ದರು.