ಉಳ್ಳಾಲ ನ್ಯೂಸ್ ನೆಟ್ ವರ್ಕ್
ದೇರಳಕಟ್ಟೆ: 100 ರೂ ಜೌಷಧಿಯನ್ನು 20 ರೂ. ಗೆ ನೀಡುವ ಯೋಜನೆಯಾಗಿರುವ ಜನೌಷಧಿ ಕೇಂದ್ರದ ಸ್ಥಾಪನೆಗೆ ಸರಕಾರ ಮುಂದಾಗುವ ಮೂಲಕ ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಉಪಯುಕ್ತವಾಗುವ ರೀತಿಯಲ್ಲಿ ಆರೋಗ್ಯ ಕಾಶಿ ಅನಿಸಿಕೊಂಡಿರುವ ದೇರಳಕಟ್ಟೆಯಲ್ಲಿ ಜನೌಷಧಿ ಕೇಂದ್ರವನ್ನು ಪ್ರಾರಂಭಿಸಿರುವ ಕಾರ್ಯ ಶ್ಲಾಘನೀಯವಾದುದು ಎಂದು ಸಂಸದ ನಳೀನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು
ಅವರು ದೇರಳಕಟ್ಟೆ ವೆಸ್ಟ್ ಅವೆನ್ಯೂ ಬಿಲ್ಡಿಂಗ್‍ನಲ್ಲಿ ಬುಧವಾರ ಮಾತೃಭೂಮಿ ಸೌಹಾರ್ದ ಸಹಕಾರಿ ನಿಯಮಿತ ಗುರುಪುರ ಇದರ ಆಶ್ರಯದಲ್ಲಿ ಕೇಂದ್ರ ಸರಕಾರದ ಜನೌಷಧಿ ಯೋಜನೆಯ ಪ್ರಧಾನಮಂತ್ರಿ ಭಾರತೀ ಜನೌಷಧಿ ಕೇಂದ್ರದ ಉದ್ಘಾಟನೆ ಹಾಗೂ ಶಿಕ್ಷಾಸಹಯೋಗ ಯೋಜನೆಯ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ನಿರುದ್ಯೋಗ ಸಮಸ್ಯೆಯಿಂದ ಪ್ರತಿಭಾನ್ವಿತ ಯುವಕರು ಹೊರದೇಶಗಳಿಗೆ ಪಲಾಯನವಾಗುತ್ತಿದ್ದು ಈ ನಿಟ್ಟಿನಲ್ಲಿ ದೇಶದ ಯುವಕರು ನಿರುದ್ಯೋಗ ಸಮಸ್ಯೆಯಿಂದ ಮುಕ್ತಗೊಳಿಸಲು ಸ್ಕಿಲ್ ಇಂಡಿಯಾದ ಅಡಿಯಲ್ಲಿ ದೀನ್ ದಯಾಳ್ ಔದ್ಯೋಗಿಕ ತರಬೇತಿಯ ಮೂಲಕ 3 ತಿಂಗಳಿನಿಂದ 3 ವರ್ಷದವರೆಗೆ ಯುವಕರಿಗೆ ಕೌಶಲ್ಯ ತರಬೇತಿ ನೀಡುವ ಉದ್ಧೇಶ ಹೊಂದಿದೆ. ಈ ಮೂಲಕ ಅವರನ್ನು ಸ್ವಾವಲಂಬಿಯಾಗಿಸುವ ನಿಟ್ಟಿನಲ್ಲಿ ಮುದ್ರಾ ಯೋಜನೆಯಡಿ 50 ಸಾವಿರದಿಂದ 10 ಲಕ್ಷದವರೆಗೆ ಸಾಲ ಸೌಲಭ್ಯವನ್ನು ನೀಡುತ್ತಿದೆ. ಇದರಿಂದ ಪ್ರತಿಭಾ ಪಲಾಯನವನ್ನು ತಪ್ಪಿಸಲು ಸಾಧ್ಯವಿದ್ದು, ಮುದ್ರಾ ಯೋಜನೆಯಿಂದ ದ.ಕ.ಜಿಲ್ಲೆಯಲ್ಲಿ 47,700 ಜನರಿಗೆ ಸಾಲವನ್ನು ನೀಡಿದ್ದು, ಇಷ್ಟು ಸಂಖ್ಯೆಯ ಹೊಸ ಉದ್ಯಮಿಗಳನ್ನು ಸೃಷ್ಟಿಸಿದಂತಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ನೂತನ ಜನೌಷಧಿ ಕೇಂದ್ರಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾತೃಭೂಮಿ ಸೌಹಾರ್ದ ಸಹಕಾರಿ ಅಧ್ಯಕ್ಷ ಭಾಸ್ಕರ್ ದೇವಸ್ಯ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕೋಟೆಕಾರ್ ಜೆ.ಎಸ್. ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ| ವಿಜಯ ಕುಮಾರ್ , ಬೆಳ್ಮ ಗ್ರಾಮ ಪಂಚಾಯತ್ ಅಧ್ಯಕ್ಷ ವಿಜಯಾ ಕೃಷ್ಣಪ್ಪ, ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮಿ ಗಟ್ಟಿ, ಮಂಗಳೂರು ಎಲ್‍ಐಸಿ ಶಾಖಾಧಿಕಾರಿ ಎಸ್. ಗುರುರಾಜ್ ರಾವ್ , ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಕಸ್ತೂರಿ ಪಂಜ, ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಕಣಚೂರು ಮೋನು, ಕೋಟೆಕಾರ್ ಪಟ್ಟಣ ಪಂಚಾಯತ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಸುಳ್ಳೇಂಜೀರು, ಮಾತೃಭೂಮಿ ಸೇವಾ ಪ್ರತಿಷ್ಠಾನದ ಸಂಚಾಲಕರಾದ ಸೀತಾರಾಮ ಶೆಟ್ಟಿ ನೆತ್ತಿಲಬಾಳಿಕೆ, ಹರೀಶ್ ಕುಮಾರ್ ಕುತ್ತಾರ್ ಉಪಸ್ಥಿತರಿದ್ದರು.
ಆಡಳಿತ ನಿರ್ದೇಶಕ ಕೃಷ್ಣ ಕೊಂಪದವು ಸ್ವಾಗತಿಸಿ ಪ್ರಸ್ತಾವನೆಗೈದರು. ಪ್ರವೀಣ್ ಕುಂಪಲ ಕಾರ್ಯಕ್ರಮ ನಿರ್ವಹಿಸಿದರು. ಸಹಕಾರಿ ಸಂಘದ ಉಪಾಧ್ಯಕ್ಷ ಕೆ.ಟಿ. ಸುವರ್ಣ ವಂದಿಸಿದರು.